ಹುಬ್ಬಳ್ಳಿ
ರಾಜ್ಯದಲ್ಲಿ 104 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಬಿಜೆಪಿ, ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದರೆ ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀರಾಮುಲು ಹೇಳಿದರು.
ಈಗಾಗಲೇ 104 ಸ್ಥಾನಗಳನ್ನು ಬಿಜೆಪಿ ಹೊಂದಿದ್ದು, ಕುಂದಗೋಳ ಹಾಗೂ ಚಂಚೋಳಿ ವಿಧಾನ ಸಭಾ ಕ್ಷೇತ್ರಗಳನ್ನು ಗೆದ್ದರೆ ನಮ್ಮ ಶಾಸಕರ ಸಂಖ್ಯೆ 106ಕ್ಕೆ ಏರಲಿದೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದೇ ನಮ್ಮ ಗುರಿ ಎಂದು ಅವರು ನುಡಿದರು.
ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಪರ ಕೂಂದಗೋಳ ತಾಲೂಕಿನ ಮಾವನೂರು ಗ್ರಾಮದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.
ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆ. ಸಿಎಂ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಅನುಕೂಲ ಕಲ್ಪಿಸುವಂತೆ ಸಿಎಂ ಮನವಿ ಮಾಡಿದ್ದಾರೆ. ಕಾಮಗಾರಿಗಳು ಆರಂಭವಾದರೆ ಕಮಿಷನ್ ಬರುತ್ತದೆ ಎಂದು ಎಲ್ಲರಿಗೂ ಗೊತ್ತು. ಕೇವಲ ಕಮಿಷನ್ ಆಸೆಗಾಗಿ ಕೆಲಸ ಮಾಡಬಾರದು. ಇದನ್ನೆಲ್ಲ ಬಿಟ್ಟು ಬರಪೀಡಿತ ಪ್ರದೇಶಗಳ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಸಿಎಂ ವಿರುದ್ಧ ಕಿಡಿಕಾರಿದರು.
ಪ್ರಚಾರದ ವೇಳೆ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಶ್ರೀರಾಮುಲು, ಸೋಲಿನ ಭೀತಿಯಿಂದ ಮಂಡ್ಯ, ಹಾಸನದಲ್ಲಿ ನಕಲಿ ಮತದಾನ ಆಗಿದೆ. ಕೇವಲ ಒಂದೇ ಗಂಟೆಯಲ್ಲಿ ಶೇ.20ರಷ್ಟು ಮತದಾನ ಹೆಚ್ಚಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ