ಬೆಂಗಳೂರು
ಮುಖ್ಯಮಂತ್ರಿ ಕುಮಾರಸ್ವಾಮಿ ನೂರು ಬಾರಿ ಮೈ ತೊಳೆದರೂ ಬೆಳ್ಳಗಾಗುವುದಿಲ್ಲ. ಕಪ್ಪು ಎಮ್ಮೆಯಂತೆ ಕಾಣಿಸುತ್ತೀರಿ ಎಂದು ಮಾಜಿ ಶಾಸಕ ರಾಜು ಕಾಗೆ ಮಾಡಿದ್ದ ಟೀಕೆಗೆ ಸಿಎಂ ಎಚ್ ಡಿಕೆ ತಿರುಗೇಟು ನೀಡಿದ್ದಾರೆ.ಶಿವಮೊಗ್ಗದಲ್ಲಿ ಮಾತನಾಡಿದ ಕುಮಾರಸ್ವಾಮಿ, ನನಗೆ ಮೋದಿ ಅವರಂತೆ ಪ್ರತಿದಿನ ವ್ಯಾಕ್ಸಿಂಗ್ ಮಾಡಿಸಿಕೊಳ್ಳುವ ಅಭ್ಯಾಸವಿಲ್ಲ ಎಂದು ಚಾಟಿ ಬೀಸಿದ್ದಾರೆ.
ನಾನು ದಿನಕ್ಕೆ 20 ಬಾರಿ ಬಾರಿ ಸ್ನಾನ ಮಾಡಿದರೂ ನನ್ನ ಎಮ್ಮೆಯ ಬಣ್ಣ ಹೋಗುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ, ಏಕೆಂದರೆ ನಾನು ಪ್ರತಿದಿನ ಬೆಳಗ್ಗೆ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸುವುದಿಲ್ಲ, ನಾನು ಬಡ ಜನರ ಜೊತೆ ಇರುತ್ತೇನೆ, ಬಡವರನ್ನು ಸ್ಪರ್ಶಿಸಿದ ಮೇಲೆ ನಾನು ಕೈ ತೊಳೆದುಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮೋದಿ 10 ಬಾರಿ ಮೇಕಪ್ ಮಾಡಿಕೊಂಡು ಕ್ಯಾಮೆರಾ ಮುಂದೆ ಬರ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದಕ್ಕೆ ಕಾಗವಾಡದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಾಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ನರೇಂದ್ರ ಮೋದಿ ಸುಂದರ, ಚಂದ, ಮತ್ತು ಬೆಳ್ಳಗಿದ್ದಾರೆ, ಕುಮಾರಸ್ವಾಮಿಯವರೇ ನಿನ್ನ ನೂರು ಬಾರಿ ಮೈ ತೊಳೆದರೂ ನೀವು ಬೆಳ್ಳಗಾಗವುದಿಲ್ಲ ಎಂದು ಹೇಳಿದ್ದರು.
ಯುವಕರು ಮೋದಿ ಪರ ಘೋಷಣೆ ಕೂಗುತ್ತಾರೆ, ಯುವಕರಿಗೆ ಮೋದಿ ಏನು ಕೊಟ್ಟಿದ್ದಾರೆ, ನಿರುದ್ಯೋಗ, ಗ್ರಾಮೀಣ ಭಾಗದ ಜನರಿಗೆ ಏನು ಕೊಟ್ಟಿದ್ದಾರೆ, ನಾವು ಪಾಕಿಸ್ತಾನದ ಜೊತೆ ಏಕೆ ಉತ್ತಮ ಸಂಬಂಧ ಹೊಂದಿಲ್ಲ ಎಂದು ಸಿಎಂ ಪ್ರಶ್ನಿಸಿದ್ದಾರೆ.