88 ನೂತನ ಗಸ್ತು ವಾಹನಗಳಿಗೆ ಚಾಲನೆ ನೀಡಿ ಸಿಎಂ..!

ಬೆಂಗಳೂರು

      ಆರ್ಥಿಕ ಹಾಗೂ ಸೈಬರ್ ಅಪರಾಧಗಳನ್ನು ಪತ್ತಹಚ್ಚಿ ನಿಯಂತ್ರಿಸಲು ರಾಜ್ಯದ ಎಲ್ಲಾ ನಗರಗಳಲ್ಲಿಯೂ ಸೈಬರ್ ಆರ್ಥಿಕ ಅಪರಾಧಗಳು ಮತ್ತು ಮಾದಕದ್ರವ್ಯ ನಿಗ್ರಹ ಪೊಲೀಸ್ ಠಾಣೆಗಳ(ಸಿಇಎನ್)ನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದರು.

     ನಗರದ 8 ವಿಭಾಗಗಳಲ್ಲಿ ಸೈಬರ್ ಆರ್ಥಿಕ ಅಪರಾಧಗಳು ಮತ್ತು ಮಾದಕದ್ರವ್ಯ ನಿಗ್ರಹ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದ್ದು ರಾಜ್ಯದ ಇತರ ನಗರಗಳಲ್ಲೂ ಸೈಬರ್ ಅಪರಾಧಗಳು ಹೆಚ್ಚುತ್ತಿರುವುದರಿಂದ ಇತರ ನಗರಗಳಿಗೂ ಅವುಗಳನ್ನು ವಿಸ್ತರಿಸಲಾಗುವುದು ಎಂದರು.

      ವಿಧಾನಸೌಧದ ಮುಂಭಾಗ ಮಂಗಳವಾರ 88 ಹೆದ್ದಾರಿ ಸಂಚಾರ ಗಸ್ತುವಾಹನಗಳ ಲೋಕಾರ್ಪಣೆ, ಸೈಬರ್ ಆರ್ಥಿಕಾಪರಾಧ, ಮಾದಕದ್ರವ್ಯ ನಿಗ್ರಹ ಪೊಲೀಸ್ ಠಾಣೆಗಳು ಮತ್ತು ಭಯೋತ್ಪಾದನಾ ನಿಗ್ರಹ ದಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಆರ್ಥಿಕ ಅಪರಾಧಗಳನ್ನು ತಡೆಯಲು ಸದ್ಯದಲ್ಲೇ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಸೂಕ್ತ ಉಪಕ್ರಮಗಳನ್ನು ನಡೆಸುವುದಾಗಿ ಅವರು ಹೇಳಿದರು.

       ಸೈಬರ್ ಅಪರಾಧಗಳನ್ನು ತಡೆಗಟ್ಟಿ ಜನರಿಗಾಗುವ ವಂಚನೆಗಳನ್ನು ತಡೆಯಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪೊಲೀಸರಿಗೂ ಈ ಬಗ್ಗೆ ನಿಗಾವಹಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ ಪತ್ರಿಕಾ ಮತ್ತು ಸೈಬರ್ ಅಪರಾಧಗಳನ್ನು ತಡೆಯಲು ಈಗಾಗಲೇ ಸಿಐಡಿ ವಿಭಾಗದಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.

     ಕರ್ನಾಟಕ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಶಾಂತಿ ಇದೆ, ರಾಜ್ಯದ ಪೊಲೀಸರು ಸದಾ ಜಾಗೃತರಾಗಿ ಕೆಲಸ ಮಾಡುತ್ತಿದ್ದಾರೆ.ಪೊಲೀಸರು ಹಗಲು-ರಾತ್ರಿ ಶ್ರಮಪಟ್ಟು ಕೆಲಸ ಮಾಡಿದರೆ ಜನ ನೆಮ್ಮದಿಯಿಂದ ಇರುತ್ತಾರೆ. ಇದರಿಂದ ಪೊಲೀಸರ ಗೌರವ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಅಪರಾಧ ತಡೆಗಟ್ಟಿ

       ಇಂದು ಭಯೋತ್ಪಾದನಾ ನಿಗ್ರಹ ದಳಕ್ಕೂ ಚಾಲನೆ ನೀಡಿದ್ದೇನೆ, ಹಾಗೆಯೇ, 88 ಹೆದ್ದಾರಿ ಗಸ್ತುವಾಹನಗಳಿಗೂ ಲೋಕಾರ್ಪಣೆ ಮಾಡಿದ್ದೇನೆ. ಸಿಇಎನ್ ಠಾಣೆಗಳನ್ನೂ ಉದ್ಘಾಟಿಸಿದ್ದೇನೆ, ಈ ಎಲ್ಲ ಉಪಕ್ರಮಗಳಿಂದ ರಾಜ್ಯದಲ್ಲಿ ಅಪರಾಧಗಳನ್ನು ತಡೆಗಟ್ಟುವ ಕೆಲಸ ಪರಿಣಾಮಕಾರಿಯಾಗಿ ಆಗಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಬಸವರಾಜಬೊಮ್ಮಾಯಿ ಅವರು ಮಾದಕವಸ್ತು ಪಿಡುಗಿನ ವಿರುದ್ಧ ಯುದ್ಧ ಸಾರಲಾಗಿದ್ದು ದಂಧೆಯಲ್ಲಿ ತೊಡಗಿಕೊಂಡಿರುವವರು ಸಮಾಜದಲ್ಲಿ ಎಷ್ಟೇ ದೊಡ್ಡವರಿರಲಿ, ಅಂತಹವರನ್ನು ಮಟ್ಟ ಹಾಕಲಾಗುವುದು ಎಂದರು.

     ಮಾದಕವಸ್ತು ಪಿಡುಗಿಗೆ ಕೊನೆ ಹಾಡಲು ಸಮಾಜದಲ್ಲೂ ಜಾಗೃತಿ ಮುಖ್ಯ, ಜನತೆ ಸಹ ಪೊಲೀಸರ ಜತೆ ಕೈಜೋಡಿಸಬೇಕು ಆಗ ಈ ಮಾದಕವಸ್ತು ದಂಧೆಗೆ ಕಡಿವಾಣ ಹಾಕಲು ಸಾಧ್ಯ ಎಂದರು.ಕತ್ತಲ ರಾತ್ರಿಯಲ್ಲಿ ಮಾದಕವಸ್ತುಗಳ ದಂಧೆ ಹೆಚ್ಚು ನಡೆಯುತ್ತಿದೆ. ಬಾತ್‌ರೂಂಗಳಲ್ಲಿ ಮಾದಕ ವಸ್ತುಗಳನ್ನು ಬೆಳೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಮಾದಕವಸ್ತು ದೊಡ್ಡ ಪಿಡುಗಾಗಿದೆ ಎಂದು ಹೇಳಿದರು.

ಪೂರ್ಣ ಪ್ರಮಾಣದ ಠಾಣೆ

     ಆರ್ಥಿಕಾಪರಾಧಗಳು ಮತ್ತು ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಸಜ್ಜಾಗಬೇಕು, ಆ ನಿಟ್ಟಿನಲ್ಲಿ ಇಂದು ಬೆಂಗಳೂರಿನ 8 ವಿಭಾಗಗಳಲ್ಲಿ ಸಿಇಎನ್ ಪೊಲೀಸ್ ಠಾಣೆಗಳನ್ನು ಆರಂಭಿಸುತ್ತಿದ್ದೇವೆ. ಈ ಠಾಣೆಗಳು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಗಳಾಗಿ ಕೆಲಸ ಮಾಡುತ್ತವೆ ಎಂದರು.

      ಸೈಬರ್ ಕ್ರೈಂ ಮೂಲಕ ಬ್ಯಾಂಕಿನಲ್ಲಿರುವ ಹಣವನ್ನು ನಮಗೆ ಗೊತ್ತಿಲ್ಲದಂತೆ ಅಪಹರಿಸುವ ಪ್ರಕರಣಗಳು ನಡೆದಿವೆ. ಇವುಗಳನ್ನು ತಡೆಯಲು ಈ ಠಾಣೆಗಳನ್ನು ಆರಂಭಿಸಿದ್ದೇವೆ, ಈ ಠಾಣೆಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತಜ್ಞರನ್ನು ಸೇವೆಯನ್ನು ಬಳಸಿಕೊಂಡು ಅಪರಾಧ ಪತ್ತೆ ಹಚ್ಚಲಾಗುವುದು ಎಂದರು.

ಭಯೋತ್ಪಾದನೆ ನಿಗ್ರಹ

        ಬೆಂಗಳೂರಿನಲ್ಲಿ ಕೆಲ ವರ್ಷಗಳಿಂದ ಭಯೋತ್ಪಾದನಾ ಚಟುವಟಿಕೆಗಳು, ಭಯೋತ್ಪಾದಕರ ಅಡಗು ತಾಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪ್ರತ್ಯೇಕ ಭಯೋತ್ಪಾದನಾ ನಿಗ್ರಹದಳ ಬೇಕು ಎಂಬ ಬೇಡಿಕೆ ಇತ್ತು. ಅದರಂತೆ ಪ್ರತ್ಯೇಕ ಭಯೋತ್ಪಾದನ ನಿಗ್ರಹ ದಳವನ್ನು ಆರಂಭಿಸಿದ್ದೇವೆ ಈ ಮೂಲಕ ಬೆಂಗಳೂರಿನಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದೇವೆ ಎಂದರು.

      ಹೆದ್ದಾರಿಯಲ್ಲಿ ಆಗುವ ಅಪಘಾತ ಸಂದರ್ಭದಲ್ಲಿ ತೊಂದರೆಗೊಳಗಾದವರನ್ನು ರಕ್ಷಿಸಲು 88 ಹೆದ್ದಾರಿ ಗಸ್ತು ವಾಹನಗಳು ರಾಜ್ಯದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂದಿನಿಂದ ಕೆಲಸ ಮಾಡಲಿವೆ. ಅಪಘಾತ ನಡೆದ 10 ರಿಂದ 20 ನಿಮಿಷಗಳೊಳಗೆ ಈ ಗಸ್ತು ವಾಹನಗಳು ಸ್ಥಳಕ್ಕೆ ತೆರಳಿ ಅಪಘಾತದಿಂದ ತೊಂದರೆಗೊಳಗಾದವರಿಗೆ ನೆರವು ನೀಡಿ ಅವರ ಜೀವ ರಕ್ಷಿಸುವ ಕೆಲಸ ಮಾಡಲಿದೆ ಎಂದರು.

ನಂಬಿಕೆ-ವಿಶ್ವಾಸ

      ಮುಖ್ಯಮಂತ್ರಿ ಯಡಿಯೂರಪ್ಪನವರ ಸಲಹೆಯಂತೆ ಈ ಹೆದ್ದಾರಿ ಗಸ್ತು ವಾಹನಗಳು ಮಹಿಳೆಯರ ಸುರಕ್ಷತೆಯ ಬಗ್ಗೆಯೂ ನಿಗಾವಹಿಸಲು ಸೂಚನೆ ನೀಡಲಾಗಿದೆ. ಈ ಗಸ್ತು ವಾಹನಗಳು ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿದ್ದು, ಆಂಬುಲೆನ್ಸ್ ಸೇವೆಯೂ ಈ ವಾಹನಗಳಲ್ಲಿ ಲಭ್ಯವಿದೆ ಎಂದು ಹೇಳಿದರು.

      ಪೊಲೀಸರು ದಕ್ಷತೆ-ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಜನರ ನಂಬಿಕೆ-ವಿಶ್ವಾಸವನ್ನು ಉಳಿಸಿಕೊಳ್ಳುವಂತೆ ಅವರು ಕರೆ ನೀಡಿದರು. ಇದಕ್ಕೂ ಮೊದಲು ಮುಖ್ಯಮಂತ್ರಿಗಳು ವಿಧಾನಸೌಧದ ಪೂರ್ವ ದ್ವಾರದ ಮುಂಭಾಗ 88 ಹೆದ್ದಾರಿ ಗಸ್ತುವಾಹನಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು

     ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಶಾಸಕರಾದ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರಾದ ಹೆಚ್.ಎಂ. ರೇವಣ್ಣ, ಎಂ.ಸಿ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link