ಬರ ನಿರ್ವಹಣೆಯಲ್ಲೂ ಮುಖ್ಯಮಂತ್ರಿ ತಾರತಮ್ಯ

ದಾವಣಗೆರೆ:

          ಅಭಿವೃದ್ಧಿ, ಬರ ನಿರ್ವಹಣೆ ಸೇರಿದಂತೆ ಎಲ್ಲಾ ವಿಚಾರದಲ್ಲೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾರತಮ್ಯ ಮಾಡುತ್ತಿದ್ದಾರೆಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.

         ಭಾನುವಾರ ಸಂಜೆ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಆಡಳಿತ ಬೆಂಗಳೂರು, ಮೈಸೂರು, ಹಾಸನ, ರಾಮನಗರ ಸೇರಿದಂತೆ ಕೆಲವೇ ಜಿಲ್ಲೆಗಳಿಗೆ ಕೇಂದ್ರೀಕೃತವಾಗಿದ್ದು, ಇನ್ನುಳಿದಂತೆ ಎಲ್ಲಾ ಜಿಲ್ಲೆಗಳನ್ನು, ಅದರಲ್ಲೂ ಉತ್ತರ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

           ರೈತರ ಸಾಲ ಮನ್ನಾ ವಿಚಾರದಲ್ಲಿ ಮಾತು ತಪ್ಪಿರುವ ಸಿಎಂ ಕುಮಾರಸ್ವಾಮಿಯವರು ಬರ ನಿರ್ವಹಣೆಯಲ್ಲೂ ಸಂಪೂರ್ಣ ವಿಫಲರಾಗಿದ್ದಾರೆ. ಆರಂಭದಲ್ಲಿ 49 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಸಿಎಂ ಕುಮಾರಸ್ವಾಮಿ, 800 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದು, ಈ ಪೈಕಿ ಕೇವಲ 50 ಕೋಟಿ ಮಾತ್ರವೇ ಖರ್ಚಾಗಿದೆ ಎಂದು ದೂರಿದರು.

          ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ರೈತರಿಗೆ ಋಣಮುಕ್ತ ಪತ್ರ ನೀಡುವ ನಾಟಕವಾಡಿದ್ದಾರೆ. ಇದನ್ನು ಹೊರತುಪಡಿಸಿದರೆ, ಬೇರೆ ಯಾವೊಬ್ಬ ರೈತರಿಗೂ ಸರ್ಕಾರದ ಸಾಲ ಮನ್ನಾ ಯೋಜನೆಯ ಫಲ ತಲುಪಿಲ್ಲ ಎಂದು ಆಪಾದಿಸಿದರು.

          ಹಿಂದಿನ ಸರ್ಕಾರದಲ್ಲಿ ನಾಲ್ಕೂವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈಗಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 465 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗೆ ನಿರಂತರ ರೈತರ ಆತ್ಮಹತ್ಯೆ ಸರಣಿ ಮುಂದು ವರೆಯುತ್ತಿದ್ದರೂ ಸಹ ಮುಖ್ಯಮಂತ್ರಿಗಳಾಗಿ, ಜಿಲ್ಲಾ ಮಂತ್ರಿಗಳಾಗಲಿ ಹಾಗೂ ಉಸ್ತುವಾರಿ ಕಾರ್ಯದರ್ಶಿಗಳಾಗಲಿ ಬರ ನಿರ್ವಹಣೆ ಕುರಿತಂತೆ ಈವರೆಗೆ ಒಂದೇ ಒಂದು ಸಭೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

          ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಮನವಿ ಮಾಡಿದ್ದು, ಡಿಸೆಂಬರ್ ಅಂತ್ಯದೊಳಗೆ ಬೇಡಿಕೆ ಈಡೇರುವ ವಿಶ್ವಾಸವಿದೆ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಬರ ನಿರ್ವಹಣೆಗೆ 5 ಕೋಟಿ ರೂ. ಖರ್ಚು ಮಾಡಿರುವುದಾಗಿ ಸರ್ಕಾರ ಹೇಳಿದೆ. ಆ ಹಣ ಎಲ್ಲಿಗೆ ಹೋಯಿತು? ಎಂಬುದನ್ನು ಜಿಲ್ಲಾಡಳಿತ ಲೆಕ್ಕ ಕೊಡಬೇಕೆಂದು ಆಗ್ರಹಿಸಿದರು.

          ಮಾವಿನ ಮರಕ್ಕೆ ಕಲ್ಲು ಹೊಡೆದರೆ, ಹಣ್ಣು ಮುಕ್ಕಾಗಿ ರುಚಿ ಕೆಡುತ್ತದೆ. ತಾನಾಗೇ ಬಿದ್ದ ಹಣ್ಣು ರಸವತ್ತಾಗಿರುತ್ತದೆ. ಆದ್ದರಿಂದ ನಾವಾಗಿ ಸರ್ಕಾರ ಕೆಡವಲು ಹೋಗುವುದಿಲ್ಲ. ಸಮ್ಮಿಶ್ರ ಸರ್ಕಾರ ತಾನಾಗಿಯೇ ಉರುಳಿ ಹೋಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಪಿ.ಸಿ.ಶ್ರೀನಿವಾಸ, ಬಿಜೆಪಿ ಮುಖಂಡರಾದ ಕೂಲಂಬಿ ಬಸವರಾಜ, ರಾಜು ವೀರಣ್ಣ, ಗುರು, ಸೋಗಿ ಶಾಂತಕುಮಾರ, ಶಿವನಗೌಡ ಪಾಟೀಲ್, ಶ್ರೇಣಿಕ್ ಜೈನ್, ಟಿಂಕರ್ ಮಂಜಣ್ಣ, ಚನ್ನೇಶ ಇತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap