ಬೆಂಗಳೂರು:
ಅಲ್ಪಸಂಖ್ಯಾತ ಬಡ ಕುಟುಂಬಗಳಿಗೆ ನೆರವಾಗಲಿ ಎಂಬ ಸದಾಶಯದೊಂದಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶಾದಿಭಾಗ್ಯ ಯೋಜನೆ ಜಾರಿಗೊಳಿಸಿತ್ತು. ವಿವಾಹ ಖರ್ಚು, ಜೀವನಾವಶ್ಯಕ ಸಾಮಗ್ರಿ ಖರೀದಿಗೆ ಈ ಯೋಜನೆಯಡಿ 50 ಸಾವಿರ ರೂ. ನೀಡಲು ಉದ್ದೇಶಿಸಲಾಗಿತ್ತು.
ಶಾದಿಭಾಗ್ಯ ಯೋಜನೆಯಡಿ ಮದುವೆಯಾಗಿ ಎರಡೆರಡು ಮಕ್ಕಳಾದರೂ ಸರ್ಕಾರ ಮಾತ್ರ ಎರಡೂವರೆ ವರ್ಷಗಳಿಂದ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. 142 ಕೋಟಿ ರೂ.ಬಾಕಿ ಉಳಿಸಿಕೊಂಡಿರುವ ಸರ್ಕಾರದ ಕ್ರಮದಿಂದ ಫಲಾನುಭವಿಗಳು ಸಾಲದ ಸುಳಿಗೆ ಸಿಲುಕುವಂತಾಗಿದೆ.
ಪ್ರತಿಪಕ್ಷಗಳ ವಿರೋಧದ ಮಧ್ಯೆಯೂ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತ ಬಡವರಿಗೆ ಶಾದಿಭಾಗ್ಯ ಯೋಜನೆ ಜಾರಿಗೊಳಿಸಿದ್ದರು. ಮದುವೆಯಾದ ತಕ್ಷಣವೇ ಬಡವರಿಗೆ 50 ಸಾವಿರ ನೀಡಬೇಕು. ಆದರೆ ಎರಡೂವರೆ ವರ್ಷಗಳಿಂದ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿಲ್ಲ. ರಾಜ್ಯದ 28,540 ಅರ್ಜಿದಾರರಿಗೆ ಕೊಡಬೇಕಾದ ಒಟ್ಟು 142.70 ಕೋಟಿ ರೂ. ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿರುವುದು ಮಾಹಿತಿ ಹಕ್ಕಿನಿಂದ ಬಹಿರಂಗಗೊಂಡಿದೆ.
ಶಾದಿಭಾಗ್ಯ ವಿಳಂಬಭಾಗ್ಯ ಆಗುತ್ತಿರುವುದಕ್ಕೆ ಫಲಾನುಭವಿಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಯೋಜನೆ ನಂಬಿ ಸಾಲ ಮಾಡಿ ಮದುವೆಯಾಗಿರುವ ಸಾವಿರಾರು ಜನರು ಹಣಕ್ಕಾಗಿ ನಿತ್ಯ ಅಲ್ಪಸಂಖ್ಯಾತ ಇಲಾಖೆ ಕಚೇರಿಗೆ ಅಲೆಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆ ಬಗ್ಗೆ ಸಿಎಂ ಕುಮಾರಸ್ವಾಮಿ ತಾತ್ಸಾರ ಭಾವ ತೋರುತ್ತಿದ್ದಾರಾ ಎನ್ನುವ ಪ್ರಶ್ನೆ ಜನರದ್ದಾಗಿದೆ.
ಕುಂದಾನಗರಿ ಬೆಳಗಾವಿಯಲ್ಲಿ 1506, ಯಾದಗಿರಿಯಲ್ಲಿ 1719, ದಕ್ಷಿಣ ಕನ್ನಡ 1626, ಕಲಬುರಗಿ 1712, ಧಾರವಾಡ 2440 ಹಾಗೂ ಹಾವೇರಿ ಜಿಲ್ಲೆಯಲ್ಲಿ 2342 ಅರ್ಜಿಗಳು ಸೇರಿದಂತೆ ರಾಜ್ಯಾದ್ಯಂತ 28,540 ಅರ್ಜಿಗಳಿಗೆ ತಲಾ 50 ಸಾವಿರ ರೂ. ಹಣ ನೀಡಬೇಕಿದೆ.ಈ ಯೋಜನೆ ನಂಬಿ ಮದುವೆಯಾಗಿ ಮಕ್ಕಳಾದರೂ ಅಲ್ಪಸಂಖ್ಯಾತ ಬಡ ಕುಟುಂಬಗಳ ಖಾತೆಗೆ ಹಣ ಜಮಾ ಆಗಿಲ್ಲ ಎನ್ನಲಾಗುತ್ತಿದೆ.