ಕೊರೋನಾ ನಿಯಂತ್ರಣ ಕ್ರಮಗಳ ಕುರಿತು ಸಂಸದರು ಮತ್ತು ಶಾಸಕರೊಂದಿಗೆ ಸಿ ಎಂ ಸಭೆ

ಬೆಂಗಳೂರು

    ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ಸಭೆ ನಡೆಸಿದರು.

     ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಬೆಂಗಳೂರಿನ ಸಂಸದರು, ಶಾಸಕರಿಗೆ ವಿವರಿಸಲಾಯಿತು. ಪಕ್ಷಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಎಲ್ಲ ಸಚಿವರು, ಸಂಸದರು, ಶಾಸಕರ ಸಹಯೋಗ ಅಗತ್ಯವೆಂದು ವಿವರಿಸಿದೆ. ಸಂಸದರು ಶಾಸಕರು ತಮ್ಮ ಅಭಿಪ್ರಾಯಗಳನ್ನು, ರಚನಾತ್ಮಕ ಸಲಹೆಗಳನ್ನು ನೀಡಿದರಲ್ಲದೆ ಸರ್ಕಾರದೊಂದಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದರು. ಅಗತ್ಯವಸ್ತುಗಳ ಪೂರೈಕೆಯನ್ನು ಜಿಲ್ಲಾಡಳಿತಗಳ ಮೂಲಕ ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು.

     ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಆಹಾರ ಧಾನ್ಯಗಳು ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಸರಬರಾಜು ಹಾಗೂ ಜನರಿಗೆ ಅವುಗಳ ಲಭ್ಯತೆಯನ್ನು ಖಾತ್ರಿಪಡಿಸಲು ರಾಜ್ಯ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

     ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಪಕ್ಷಗಳ ಶಾಸಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು. ಅಗತ್ಯ ವಸ್ತುಗಳಿಗಾಗಿ ರಾಜ್ಯದ ಯಾವ ಭಾಗಗಳಲ್ಲೂ ಯಾವುದೇ ಕೊರತೆ ಉಂಟಾಗಿಲ್ಲ ತರಕಾರಿ ಹಾಗೂ ಹಣ್ಣು ಹಂಪಲು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು

     ಎ ಪಿ ಎಲ್ ಕುಟುಂಬಗಳಿಗೂ ಪಡಿತರ ಯೋಜನೆಯಡಿ ಆಹಾರ ಧಾನ್ಯ ಒದಗಿಸಲು ನಿರ್ಧರಿಸಲಾಗಿದೆ. ಕೊರೊನಾ ವೈರಸ್ ಸೃಷ್ಟಿಸಿರುವ ಸವಾಲನ್ನು ಸಮರ್ಥವಾಗಿ ಎದುರಿಸಿ ಕಾರ್ಯನಿರ್ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

     ಅಸಂಘಟಿತ ವಲಯದಲ್ಲಿ ದುಡಿಯುವ ವರ್ಗದ ಜನರಿಗೆ ತಂಗಲು ವ್ಯವಸ್ಥೆ ಮಾಡಲಾಗಿದ್ದು, ಅವರಿಗೆ ಉಚಿತವಾಗಿ ಆಹಾರ ಒದಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಜನರು ಮನೆಯಲ್ಲಿದ್ದು, ಕೋವಿಡ್ -19 ರೋಗದ ವಿರುದ್ದ ಸಮರ ಸಾರಲು ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ರಾಜ್ಯದ ಜನತೆಗೆ ಮನವಿ ಮಾಡಿದರು.

       ರಾಜ್ಯದಲ್ಲಿ 17 ಸಮಿತಿಗಳು, ಸಹಾಯವಾಣಿಗಳು ಮತ್ತು ವಾರ್ ರೂಮ್‍ಗಳನ್ನು ಸ್ಥಾಪಿಸಲಾಗಿದ್ದು, ಅವುಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳು ಮತ್ತು ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಒದಗಿಸಲು ಕೈಗೊಂಡ ಕ್ರಮಗಳು ಹಾಗೂ 480 ಹಾಪ್‍ಕಾಮ್ಸ್‍ಗಳ ಮುಖಾಂತರ ಮತ್ತು ಸಂಚಾರಿ ಹಾಪ್‍ಕಾಮ್ಸ್ ಮೂಲಕವೂ ತರಕಾರಿ ಪೂರೈಸಲಾಗುತ್ತಿದೆ ಎಂದು ತಿಳಿಸಿದರು. ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಜನರ ಅನವಶ್ಯಕ ಓಡಾಟವನ್ನು ಇನ್ನಷ್ಟು ನಿಯಂತ್ರಿಸಲು ಸಲಹೆ ನೀಡಿದರು. ಇದನ್ನು ನಾವು ಪಾಲಿಸಲಿದ್ದೇವೆ.

     ಪಡಿತರ ಚೀಟಿ ಹೊಂದಿಲ್ಲದವರಿಗೂ ಆಹಾರ ಧಾನ್ಯ ಒದಗಿಸುವ ಬಗ್ಗೆ ಮನವಿ ಮಾಡಿದರು. ಈ ಬಗ್ಗೆ ನಾವು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ರೋಗಿಗಳಿಗೆ ಸೇವೆ ಒದಗಿಸದ ಖಾಸಗಿ ಕ್ಲಿನಿಕ್‍ಗಳು ತೆರೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು.ಅಗತ್ಯ ವಸ್ತುಗಳ ಪೂರೈಕೆಯಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಮುಂದಿನ ದಿನಗಳನ್ನು ಇದನ್ನು ಇನ್ನಷ್ಟು ವ್ಯವಸ್ಥಿತವಾಗಿ ನಿರ್ವಹಿಸಲಾಗುವುದು.ಬಹಳಷ್ಟು ಮಿತ್ರರು ಸರ್ಕಾರದ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

      9.80 ಲಕ್ಷ ಪಿಪಿಇ ಕಿಟ್ಸ್ ಕಾರ್ಯಾದೇಶ ನೀಡಿದೆ. 1.43 ಲಕ್ಷ ಸರಬರಾಜಾಗಿದೆ. ಎನ್95 ಮಾಸ್ಕ್ 18.33 ಲಕ್ಷ ಕ್ಕೆ ಕಾರ್ಯಾದೇಶ ನೀಡಿದೆ. 4.13 ಲಕ್ಷ ಸರಬರಾಜಾಗಿದೆ. ವೆಂಟಿಲೇಟರ್ 1570ಕ್ಕೆ ಆದೇಶ ಮಾಡಿದೆ. 17 ಸರಬರಾಜಾಗಿದೆ. ಮುಂದಿನ ವಾರ 20 ಬರುತ್ತದೆ. ಪಿಎಂ ಕಿಸಾನ್ ಅಡಿ ಈ ತಿಂಗಳ 10ನೇ ತಾರೀಕಿನೊಳಗೆ 2000 ರೂ. ಜಮಾ ಆಗಲಿದೆ. ಅರ್ಧ ಲೀಟರ್ ಹಾಲು ವಿತರಿಸಲು ಕ್ರಮ ವಹಿಸಲಾಗುವುದು. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಎರಡು ತಿಂಗಳ ಮುಂಗಡ ಮೊತ್ತ ಈ ತಿಂಗಳ 10 ರೊಳಗೆ ಜಮಾ ಆಗಲಿದೆ.15 ಲಕ್ಷ ಫಲಾನುಭವಿಗಳ ಖಾತೆಗಳಿಗೆ ಗ್ಯಾಸ್ ಸಿಲಿಂಡರ್ ವೆಚ್ಚ ಜಮಾ ಮಾಡಲು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

     ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣವಾಗಬೇಕು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅತಿ ಅಗತ್ಯ. ದಾನಿಗಳ ಕೊರತೆ ಇಲ್ಲ. ಆದರೆ ಅದು ದುರುಪಯೋಗ ಆಗದಂತೆ ತಡೆಗಟ್ಟಬೇಕು. ನೀವು ನೀಡಿರುವ ಸಲಹೆಗಳನ್ನು ಪಾಲಿಸಲಾಗುವುದು. 14 ರ ನಂತರ ಹಂತ ಹಂತವಾಗಿ ಲಾ ಕ್ ಡೌನ್ ಸಡಿಲಗೊಳಿಸಲಾಗುವುದು ಎಂಬ ಆಶಯ ನನ್ನದು ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link