ಶಿರಾ
ತಾಲ್ಲೂಕಿನ ಶಿರಾ, ಕಳ್ಳಂಬೆಳ್ಳ ಹಾಗೂ ಮದಲೂರು ಕೆರೆಗಳಿಗೆ ಹೇಮಾವತಿಯ ನೀರನ್ನು ಹರಿಸಲು ಜೂನ್ 16 ರಂದು ಮುಖ್ಯಮಂತ್ರಿಗಳು ಆದೇಶ ನೀಡಿದ್ದು, ಈ ಕೂಡಲೆ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿರುವ ಈ ಭಾಗದ ಜನರಿಗೆ ನೀರೊದಗಿಸುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಪ್ರಸಕ್ತ ವರ್ಷದಲ್ಲಿ ಹಾಸನ ಜಿಲ್ಲೆಗೆ 18 ಟಿ.ಎಂ.ಸಿ. ಹಾಗೂ ತುಮಕೂರು ಜಿಲ್ಲೆಗೆ 25 ಟಿ.ಎಂ.ಸಿ. ಹೇಮಾವತಿ ನೀರನ್ನು ಹರಿಸಬೇಕಿತ್ತು. ಡಿಸೆಂಬರ್ 15 ರವರೆಗೆ ತುಮಕೂರು ಜಿಲ್ಲೆಗೆ ನೀರನ್ನು ಹರಿಸಿದರೂ ನಮ್ಮ ಪಾಲಿನ ನೀರನ್ನು ನಾವು ಪಡೆಯಲಾಗಲಿಲ್ಲ. ಹಾಸನ ಜಿಲ್ಲೆಗೆ ಈವರೆಗೆ 32 ಟಿ.ಎಂ.ಸಿ. ನೀರನ್ನು ಬಳಸಲಾಗಿದ್ದು, ನಿಗದಿಗಿಂತಲೂ ಹೆಚ್ಚು ನೀರನ್ನು ಹರಿಸಲಾಗಿದೆ. ಆದರೆ ಜಿಲ್ಲಾ ಸಚಿವರ ಹಾಸನ ಜಿಲ್ಲೆಗೆ ಕುಡಿಯಲು ನೀರು ನೀಡಲು ತುಮಕೂರು ನಾಲೆಯಲ್ಲಿ ಹರಿಯುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ ಎಂಬ ಹೇಳಿಕೆ ಬಾಲಿಶವಾದುದು ಎಂದರು.
ಸಚಿವರ ಬಾಯಲ್ಲಿ ಒಂದು ಶಬ್ದ ಬಂದರೂ ಅದು ಸರ್ಕಾರಿ ಆದೇಶ ಎಂಬುದರ ಅರಿವೆ ಜಿಲ್ಲಾ ಸಚಿವರಿಗೆ ಇಲ್ಲವಾಗಿದೆ. ಇನ್ನೂ 6 ಟಿ.ಎಂ.ಸಿ. ನೀರು ಹೇಮಾವತಿ ಡ್ಯಾಂನಲ್ಲಿದ್ದು ಈಗಲೂ ನಮಗೆ ನೀರು ಹರಿಸಲು ಯಾವುದೇ ಅಡ್ಡಿ ಇಲ್ಲವಾದರೂ, ಜಿಲ್ಲಾ ಸಚಿವರಿಗೆ ನೀರು ಹರಿಸುವ ಇಚ್ಛಾಶಕ್ತಿ ಇಲ್ಲ ಎಂದರು.
ಶಿರಾ ಶಾಸಕರು ಎರಡನೆ ಹಂತದಲ್ಲಿ ನೀರು ಶಿರಾ-ಕಳ್ಳಂಬೆಳ್ಳ ಭಾಗಕ್ಕೆ ಹರಿಯಲು ಆರಂಭಿಸಿದ ಕೂಡಲೆ ಗಂಗಾಪೂಜೆ ಮಾಡಿ ಬಂದರು. ಒಂದೇ ದಿನದಲ್ಲಿ ನೀರು ನಿಂತು ಹೋಯಿತು. ನಾವು ಸರ್ಕಾರಕ್ಕೆ ಒತ್ತಡ ತಂದು ನೀರು ನೀಡುವಂತೆ ಒತ್ತಾಯಿಸಿ ಶ್ರಮಪಟ್ಟಿದ್ದು ವ್ಯರ್ಥವಾಗಿ ಹೋಯಿತು. ಶಿರಾ-ಕಳ್ಳಂಬೆಳ್ಳ ಹಾಗೂ ಮದಲೂರು ಕೆರೆಗಳಿಗೆ ನೀರನ್ನು ಹರಿಸುವ ಇಚ್ಛಾಶಕ್ತಿ ಜಿಲ್ಲಾ ಸಚಿವರಿಗೆ ಇಲ್ಲ. ಶಿರಾ ತಾಲ್ಲೂಕಿನ ಒಂದು ಭಾಗ ಅವರ ಕ್ಷೇತ್ರಕ್ಕೆ ಒಳಪಟ್ಟಿದೆ ಎಂಬ ಅನುಕಂಪವೂ ಅವರಲ್ಲಿ ಇಲ್ಲವಾಗಿದೆ ಎಂದರು.
ನೀರನ್ನು ಹರಿಸುವಂತೆ ಸರ್ಕಾರಕ್ಕೆ ನಾನು ಒತ್ತಡ ಹೇರುವುದನ್ನು ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದನ್ನು ಕಂಡು ಶಿರಾ ಶಾಸಕರು ಸಹಿಸದಂತಾಗಿದ್ದಾರೆ. ಸೋತವರಿಗೆ ಯಾಕಿಷ್ಟು ಕಾಳಜಿ ಎಂದು ಶಾಸಕರು ನನ್ನನ್ನು ಟೀಕಿಸುತ್ತಾರಂತೆ? ಏಕೆ ಸೋತವರಿಗೆ ಕ್ಷೇತ್ರದ ಬಗ್ಗೆ ಕಾಳಜಿ ಇರಬಾರದಾ ಎಂದು ಮಾಜಿ ಸಚಿವರು ಪ್ರಶ್ನಿಸಿದರು.
ಜಿಲ್ಲಾಡಳಿತ ಸಂಪೂರ್ಣವಾಗಿ ಕುಸಿದಿದೆ. ಹೇಮಾವತಿ ನಾಲಾವಲಯದ ಅಧಿಕಾರಿಗಳೂ ಕೂಡ ಜಿಲ್ಲಾ ಸಚಿವರ ಮಾತನ್ನು ಕೇಳದಂತಾಗಿದ್ದಾರೆ. ಮದಲೂರು ಕೆರೆ ಹೇಮಾವತಿ ನೀರನ್ನು ಪಡೆಯಲು ಅನುಮೋದನೆಯನ್ನೇ ಪಡೆದಿಲ್ಲ ಎಂಬ ಜಿಲ್ಲಾ ಸಚಿವರ ಹೇಳಿಕೆ ಹಾಸ್ಯಾಸ್ಪವಾಗಿದೆ. ನವೆಂಬರ್ 19 ನೆ 2019 ರಂದು ಜಲ ಸಂಪನ್ಮೂಲ ಇಲಾಖೆ ಅನುಮತಿ ನೀಡಿದೆ ಎಂಬುದರ ಅರಿವು ಕೂಡ ಜಿಲ್ಲಾ ಸಚಿವರಿಗಿಲ್ಲ ಎಂದು ಜೆ.ಸಿ.ಮಾಧುಸ್ವಾಮಿ ಅವರ ವರ್ತನೆಯನ್ನು ಜಯಚಂದ್ರ ಖಂಡಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಟರಾಜ್ ಬರಗೂರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಎನ್.ಕೃಷ್ಣಯ್ಯ, ಯುವ ಕಾಂಗೈ ಅಧ್ಯಕ್ಷ ಹಲಗುಂಡೇಗೌಡ, ದಿವಾಕರಗೌಡ, ತಾ. ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ರಾಜ್ಯ ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ಲಾಖಾನ್, ಡಿ.ಸಿ.ಅಶೋಕ್, ನೂರುದ್ಧೀನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ