ರಾಜ್ಯೋತ್ಸವದ ವಿಶಿಷ್ಠ ಆಚರಣೆಗೆ ಜಿಲ್ಲಾಡಳಿತದ ನಿರ್ಧಾರ..!

ತುಮಕೂರು
      ಬರುವ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾಡಳಿತದ ವತಿಯಿಂದ ಅದ್ದೂರಿ ಮತ್ತು ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 
     ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಸಭೆಯಲ್ಲಿ ವಿವಿಧ ಅಧಿಕಾರಿ ಹಾಗೂ ಕನ್ನಡಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಂಡು ಮಾತನಾಡಿದ ಜಿಲ್ಲಾಧಿಕಾರಿಗಳು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಾವುದೇ ಲೋಪದೋಷ ಇಲ್ಲದಂತೆ ಸಡಗರದಿಂದ ಆಚರಿಸಬೇಕು ಎಂದು ತಿಳಿಸಿದರು. 
    ಜಿಲ್ಲಾ ಕ್ರೀಡಾಂಗಣದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಈ ಬಾರಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಚರಿಸಲು ಉದ್ದೇಶಿಸಲಾಗಿದೆ. ರಾಜ್ಯೋತ್ಸವವನ್ನು ಆಚರಿಸಲು ಅನುವಾಗುವಂತೆ ಕಾಲೇಜು ಮೈದಾನವನ್ನು ವ್ಯವಸ್ಥಿತವಾಗಿ ಅಣಿಗೊಳಿಸಬೇಕು.  ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಮೈದಾನವನ್ನು ಪರಿಶೀಲಿಸಿ ಯಾವುದೇ ಸಮಸ್ಯೆಗಳಿದ್ದರೆ ಕೂಡಲೇ ತಮ್ಮ ಗಮನಕ್ಕೆ ತರಬೇಕು ಎಂದರು. 
     ರಾಜ್ಯೋತ್ಸದ ಅಂಗವಾಗಿ ನ.1ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ನಗರದ ಪ್ರಮುಖ ರಸ್ತೆಯಲ್ಲಿ ಕನ್ನಡ ತಾಯಿ ಭುವನೇಶ್ವರಿ ಪ್ರತಿಮೆಯನ್ನು ಅಲಂಕೃತ ಬೆಳ್ಳಿರಥ ವಾಹನದಲ್ಲಿರಿಸಿ ಆಕರ್ಷಕ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ಮೆರವಣಿಗೆಯು ಆಶೋಕ ರಸ್ತೆ, ಟೌನ್‍ಹಾಲ್, ಬಿ.ಹೆಚ್.ರಸ್ತೆ ಮೂಲಕ ಜೂನಿಯರ್ ಕಾಲೇಜು ಮೈದಾನವನ್ನು ತಲುಪಲಿದೆ.
 
     ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳ ಕಲಾಪ್ರದರ್ಶನದೊಂದಿಗೆ ಆರೋಗ್ಯ, ಅರಣ್ಯ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪ ಸಂಖ್ಯಾತರ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ಸಾರ್ವಜನಿಕ ಶಿಕ್ಷಣ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪರಿಸರ, ಪಶುವೈದ್ಯಕೀಯ, ಕ್ರೀಡಾ ಇಲಾಖೆಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಅಗ್ನಿಶಾಮಕದಳ, ಎಪಿಎಂಸಿ, ಸ್ಮಾರ್ಟ್ ಸಿಟಿ, ಬೆಸ್ಕಾಂ, ಸೋಲಾರ್ ಪಾರ್ಕ್ ಸಂಸ್ಥೆ, ಮೊದಲಾದ ಇಲಾಖೆಗಳ ವಿಶೇಷ ಯೋಜನೆಗಳ ಪರಿಕಲ್ಪನೆ ಬಿಂಬಿಸುವ ಆಕರ್ಷಕ ಸ್ತಬ್ದ ಚಿತ್ರಗಳ ಪ್ರದರ್ಶನ ಏರ್ಪಡಿಸಬೇಕು. ಸ್ತಬ್ದಚಿತ್ರಗಳನ್ನು ಕಾಟಾಚಾರಕ್ಕೆ ನಿರ್ಮಿಸದೆ ವ್ಯವಸ್ಥಿತವಾಗಿ ನಿರ್ಮಿಸಬೇಕು. ಸ್ತಬ್ದಚಿತ್ರಗಳ ಮಾದರಿಯನ್ನು  ಜಿಲ್ಲಾಡಳಿತದಿಂದ ಅನುಮೋದನೆ ಪಡೆದ ನಂತರ ನಿರ್ಮಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 
     ನಂತರ ಅಂದು ಬೆಳಿಗ್ಗೆ 9 ಗಂಟೆಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.  ಈ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಕನ್ನಡ ನಾಡು-ನುಡಿಯನ್ನು ಬಿಂಬಿಸುವ ಸಾಮೂಹಿಕ ಕಲಾ ಪ್ರದರ್ಶನಗಳನ್ನು ಏರ್ಪಡಿಸುವಂತೆ ಡಿಡಿಪಿಐ ಕಾಮಾಕ್ಷಿ ಅವರಿಗೆ ಸೂಚಿಸಿದರು.
     ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ ಇನ್ನಿತರೆ ರಂಗಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿರುವ 30 ಮಂದಿ ಸಾಧಕರನ್ನು ಗುರುತಿಸಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುವುದು. ಈಗಾಗಲೇ ಸಾಧಕರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿದ್ದು, ಅಕ್ಟೋಬರ್ 26ರೊಳಗೆ ಸಾಧಕರ ಆಯ್ಕೆ ಪಟ್ಟಿಯನ್ನು ತಮಗೆ ಸಲ್ಲಿಸಬೇಕೆಂದು ಸಮಿತಿಗೆ ಸೂಚಿಸಿದರು.
      ರಾಜ್ಯೋತ್ಸವದ ಅಂಗವಾಗಿ ಅಂದು ಸಂಜೆ 4  ಗಂಟೆಗೆ ಗಾಜಿನ ಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ 30 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಆಕರ್ಷಕ ಕಾರ್ಯಕ್ರಮಗಳನ್ನು  ಏರ್ಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗೆ ಸೂಚಿಸಿದರು.  
     ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ರಾಜ್ಯೋತ್ಸವದ ಮುನ್ನಾ ದಿನ ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ಎರಡು ದಿನಗಳ ಕಾಲ ನಗರದ ಪ್ರಮುಖ ವೃತ್ತಗಳಾದ ಟೌನ್‍ಹಾಲ್, ಶ್ರೀ ಶಿವಕುಮಾರ ಸ್ವಾಮೀಜಿ, ಭದ್ರಮ್ಮ, ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಹಾಗೂ ಹೊರಪೇಟೆ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು ಎಂದು ನಿರ್ದೇಶನ ನೀಡಿದರು. 
      ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ತಿಪಟೂರು ಉಪವಿಭಾಗಾಧಿಕಾರಿ ನಂದಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಮತ್ತಿತರರು ಹಾಜರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ