ಭೂ ಸುಧಾರಣೆ : ಮುಖ್ಯಮಂತ್ರಿಯ ಅಸಲಿ ಅನಾವರಣ 

ಗುಬ್ಬಿ

     ಭೂ ಸುಧಾರಣೆ ಹೆಸರಿನಲ್ಲಿ ಉಳ್ಳವರು ಇಲ್ಲದವರು ಎಂಬ ತಾರತಮ್ಯಕ್ಕೆ ನಾಂದಿ ಹಾಡುವ ರಾಜ್ಯ ಸರ್ಕಾರ ಊಳಿಗಮಾನ್ಯ ಪದ್ದತಿ, ಜಹಾಗೀರ್ ಪದ್ದತಿ ಹಾಗೂ ಜೋಡಿದಾರ್ ಪದ್ದತಿಗಳಿಗೆ ಪರೋಕ್ಷ ಸಹಕಾರ ನೀಡಲು ಭೂ ಸುಧಾರಣೆ ಕಾಯಿದೆ ತಿದ್ದುಪಡಿ ಮಾಡಿದೆ ಎಂದು ಭಾರತೀಯ ಕಿಸಾನ್‍ಸಂಘ-ಕರ್ನಾಟಕ ಪ್ರದೇಶ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ ಆಕ್ರೋಶ ವ್ಯಕ್ತಪಡಿಸಿದರು.

     ಪಟ್ಟಣದ ರುದ್ರೇಶ್ವರ ಟವರ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭೂ ಸುಧಾರಣಾ ಕಾಯಿದೆ ತಿದ್ದುಪಡಿ ವಿಚಾರದಲ್ಲಿ ಏಕಾಏಕಿ ನಿರ್ಧಾರ ಕೈಗೊಂಡಿದ್ದು, ಯಾವುದೇ ಆರ್ಥಿಕ ತಜ್ಞರು, ರೈತ ಮುಖಂಡರ ಜತೆ ಚರ್ಚಿಸಿಲ್ಲ. ವಿರೋಧ ಪಕ್ಷಗಳ ವಿಶ್ವಾಸವನ್ನೂ ಪಡೆಯದೆ 46 ವರ್ಷದ ನಂತರ 1961 ರ ಭೂ ಸುಧಾರಣೆ ಕಾಯಿದೆ ತಿದ್ದುಪಡಿ ಮಾಡಿ ರೈತ ವಿರೋಧಿ ಸರ್ಕಾರ ಎಂದು ರುಜುವಾತು ಮಾಡಿದೆ ಎಂದು ಕಿಡಿಕಾರಿದರು.

      ಸಾಮಾಜಿಕ ಅಸಮಾನತೆಗೆ ಕಾರಣವಾಗುವ ಜತೆಗೆ ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲವಾಗುವಂತಹ ಈ ತಿದ್ದುಪಡಿ ಮಾಡುವ ಮುನ್ನ ವಿಚಾರ ಮಾಡದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ಮುಂದಾಗಿರುವುದು ವಿಪರ್ಯಾಸ. ಕೃಷಿ ಮಾಡುವವನಿಗೆ 54 ಎಕರೆ ಪ್ರದೇಶ, 5 ಜನರಿಗಿಂತ ಮೇಲಿದ್ದ ಕುಟುಂಬಕ್ಕೆ 108 ಎಕರೆ ಹಾಗೂ ಗರಿಷ್ಠ 216 ಎಕರೆ ಪ್ರದೇಶ ಎಂಬ ನಿಯಮವನ್ನು ದುಪ್ಪಟ್ಟು ಮಾಡಿದರ ಹಿಂದಿನ ಉದ್ದೇಶವೇನು ಎಂಬುದು ಸಾಮಾನ್ಯರಿಗೂ ಅರಿವಿಗೆ ಬರುತ್ತಿದೆ ಎಂದ ಅವರು ಗರಿಷ್ಠ 432 ಎಕರೆ ಜಮೀನು ಹೊಂದಲು ಅವಕಾಶ ನೀಡಿದ್ದರ ಹಿಂದೆ ಬಂಡವಾಳಶಾಹಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಒಂದು ದೊಡ್ಡ ಗುಂಪೇ ಈ ಕಾಯಿದೆ ಅನುಷ್ಠಾನಕ್ಕೆ ಶ್ರಮಿಸಿದೆ ಎಂದು ಆರೋಪಿಸಿ, ಮುಖ್ಯಮಂತ್ರಿಗಳ ಗೋಮುಖ ಕಳಚಿ ವ್ಯಾಘ್ರ ಮುಖ ದರ್ಶನವಾಗಿದೆ ಎಂದು ವ್ಯಂಗ್ಯವಾಡಿದರು.

     ಕೈಗಾರಿಕೆ ವಲಯಗಳ ಅಭಿವೃದ್ದಿಗೆ ಭೂಮಿ ಅವಶ್ಯವಿರುವುದಾಗಿ ಹೇಳುವ ಸರ್ಕಾರ ಮೊದಲು ಕೈಗಾರಿಕಾ ಅಭಿವೃದ್ದಿ ಮಂಡಲಿಯು ಭೂಮಿ ವಶಕ್ಕೆ ಪಡೆದ 36 ಸಾವಿರ ಎಕರೆ ಪ್ರದೇಶವನ್ನು ಮೊದಲು ಹಂಚಲಿ. ಜತೆಗೆ ಕೈಗಾರಿಕೆ ಉದ್ದೇಶಕ್ಕೆ ಪರಿವರ್ತನೆಯಾದ 12 ಸಾವಿರ ಎಕರೆ ಪ್ರದೇಶವನ್ನು ವಿಲೇವಾರಿ ಮಾಡಲಿ ಎಂದು ಪ್ರಶ್ನಿಸಿದ ಅವರು, ಬಂಜರು ಭೂಮಿ ಎಂದೇ ಗುರುತಿಸಲ್ಪಟ್ಟ 22 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕೈಗಾರಿಕಾ ವಲಯಕ್ಕೆ ಬಳಸಿಕೊಳ್ಳದೆ ಫಲವತ್ತಾದ ಜಮೀನುಗಳು, ಅದೂ ನಗರ ಪ್ರದೇಶಗಳ ಸುತ್ತಮುತ್ತಲಿನ ಜಮೀನಿಗೆ ಒತ್ತು ನೀಡಲಾಗುತ್ತದೆ. ಕಳೆದ 46 ವರ್ಷಗಳ ಹಿಂದೆ ಭೂ ಸುಧಾರಣಾ ಕಾಯಿದೆ ಉಲ್ಲಂಘನೆಗೆ ಸಂಬಂಧಪಟ್ಟ 83 ಸಾವಿರ ಪ್ರಕರಣಗಳು ವಿವಿಧ ನ್ಯಾಯಾಲಯದಲ್ಲಿವೆ. 12 ಸಾವಿರ ಪ್ರಕರಣಗಳು ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದ ಜಮೀನು ಮುಟ್ಟುಗೋಲು ಹಾಕಿಕೊಳ್ಳದೆ ಸರ್ಕಾರ ಪೂರ್ವಾನ್ವಯ ತಿದ್ದುಪಡಿ ಮಾಡಿ ಅಕ್ರಮವನ್ನು ಸಕ್ರಮಗೊಳಿಸಿದಂತಾಗಿದೆ ಎಂದು ಕಿಡಿಕಾರಿದರು.

     ಸರ್ಕಾರ ಅಕ್ರಮದಾರರ ಪರ ನಿಂತಿರುವುದನ್ನು ಗಮನಿಸಿದರೆ ಬಲಾಢ್ಯರ ಮುಷ್ಠಿಯಲ್ಲಿ ಸರ್ಕಾರ ನಲುಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಅವಶ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಬಂದೊದಗಿದೆ. ರೈತಕುಲವೇ ಮಾಯವಾಗುವ ಕಾಲ ಸನ್ನಿಹಿತವಾಗಿದೆ. ಆಹಾರ ಕೊರತೆ ಜತೆ ಅರಾಜಕತೆ ಸೃಷ್ಟಿಯಾಗುವ ಮುನ್ನ ಸರ್ಕಾರದ ವಿರುದ್ದ ದನಿ ಎತ್ತಲು ಕಿಸಾನ್‍ಸಂಘ ನಿರಂತರ ಮೂರು ದಿನಗಳ ಕಾಲ ಪತ್ರಿಕಾ ಹೇಳಿಕೆ ಮೂಲಕ ವಿರೋಧ ವ್ಯಕ್ತಪಡಿಸಿ, ನಂತರ ಈ ತಿಂಗಳ 27 ರಿಂದ 31 ರವರೆಗೆ ರಾಜ್ಯದ ಎಲ್ಲಾ ತಾಲ್ಲೂಕು ಕಚೇರಿ ಮುಂದೆ ಸರ್ಕಾರದ ಭೂ ಸುಧಾರಣೆ ತಿದ್ದುಪಡಿ ಗೆಜೆಟ್ ಪ್ರತಿಯನ್ನು ಸುಡುವುದರ ಮೂಲಕ ಪ್ರತಿಭಟನೆ ಮಾಡಲಿದೆ. ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯಪಾಲರು, ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಸಜ್ಜಾಗಿದ್ದೇವೆ ಎಂದು ತಮ್ಮ ಹೋರಾಟದ ರೂಪುರೇಷೆ ವಿವರಿಸಿದರು.

      ಈ ಸಂದರ್ಭದಲ್ಲಿ ಭಾರತೀಯ ಕಿಸಾನ್‍ಸಂಘ-ಕರ್ನಾಟಕ ಪ್ರದೇಶ ಜಿಲ್ಲಾ ಉಪಾಧ್ಯಕ್ಷ ವಿಜಯ್‍ಕುಮಾರ್, ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್, ತಾಲ್ಲೂಕು ಕಾರ್ಯದರ್ಶಿ ನರಸೇಗೌಡ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap