ಪಾವಗಡ
ಅಧಿಕಾರಿಗಳು ಸಾರ್ವಜನಿಕರ ಕೆಲಸಕಾರ್ಯ ಮಾಡುವಲ್ಲಿ ಸೋಮಾರಿತನ ತೋರಿದರೆ ಜಾಗ ಖಾಲಿ ಮಾಡಿಸುವೆ ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ಕೆಂಡಾಮಂಡಲವಾದ ಪ್ರಸಂಗ ನಡೆಯಿತು. ಸೋಮವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯು ಕಾರ್ಮಿಕ ಸಚಿವ ವೆಂಕಟರವಣಪ್ಪರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇಲಾಖಾವಾರು ಅಭಿವೃದ್ಧಿ ಪಡಿಸಿದ ಮಾಹಿತಿ ನೀಡುವುದರಲ್ಲಿ ನಿರ್ಲಕ್ಷ್ಯ ಭಾವನೆ ತೋರಿಸಿದ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಲು ಸೋಮಾರಿಗಳಾದರೆ ಇಲ್ಲಿಂದ ಜಾಗ ಖಾಲಿ ಮಾಡಬೇಕೆಂದು ಸಚಿವರು ಅಧಿಕಾರಿಗಳ ಮೇಲೆ ಕೆಂಡಾಮಂಡಲವಾದ ಪ್ರಸಗ ನಡೆಯಿತು.
ತಾಲ್ಲೂಕಿನಲ್ಲಿ ರೈತರು ಮಳೆ ಬೆಳೆಯಾಗದೇ ಕಷ್ಟದಲ್ಲಿ ಸಿಲುಕಿದ್ದಾರೆ. ಬೆಸ್ಕಾಂ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಅಕ್ರಮ-ಸಕ್ರಮದ ಯೋಜನೆಯಡಿ 555 ಫಲಾನುಭವಿಗಳಿಂದ ಹಣ ಕಟ್ಟಿಸಿಕೊಂಡು ಇದುವರೆಗೂ 195 ರೈತರಿಗೆ ಮಾತ್ರ ವಿದ್ಯುತ್ ಅಳವಡಿಸಿ, ಉಳಿಕೆ ಫಲಾನುಭವಿಗಳಿಗೆ ನೀಡಿಲ್ಲ. ಸರ್ಕಾರದ ಯೋಜನೆಗಳನ್ನು ದುರುಪಯೋಗ ಮಾಡಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರಿಗೆ ಅಕ್ರಮ-ಸಕ್ರಮ ಯೋಜನೆಯಡಿ ನೀಡಬೇಕಾದ ಕಂಬಗಳು ಮತ್ತು ಟ್ರಾನ್ಸ್‍ಫಾರ್ಮರ್‍ಗೆ ರೈತರಿಂದ 20 ರಿಂದ 30 ಸಾವಿರ ರೂ. ಲಂಚ ಕೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಯಾವ ಗುತ್ತಿಗೆದಾರ ಹಣ ಪಡೆಯುತ್ತಾನೋ ಅಂತಹ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಜರುಗಿಸಲು ಬೆಸ್ಕಾಂ ಎಇಇ ಹರೀಶ್‍ರವರಿಗೆ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ಯೋಜನೆಯಲ್ಲಿ 257 ಕೊಳವೆ ಬಾವಿಗಳನ್ನು ಕೊರೆಸಿದ್ದು, ವಿದ್ಯುತ್ ಸರಬರಾಜು ಮಾಡಲು ಟೆಂಡರ್ ಕರೆದಿದೆ. ಸ್ವಲ್ಪ ದಿನಗಳಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದೆಂದು ಅಧಿಕಾರಿಗಳು ಮಾಹಿತಿ ನೀಡಿದರು. ಸರ್ಕಾರದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸದಿದ್ದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.
ಕೃಷಿ ಇಲಾಖೆಯಿಂದ ರೈತರಿಗೆ ನೀಡುತ್ತಿರುವ ಸೌಲಭ್ಯಗಳು ರೈತರಿಗೆ ಮುಟ್ಟುತ್ತಿಲ್ಲ. ಅಧಿಕಾರಿಗಳು ಕಚೆರಿಯಲ್ಲಿ ಕುಳಿತು ಕೆಲಸ ಮಾಡುವುದು ಬಿಟ್ಟು ರೈತರ ಕಡೆ ನಡೆಯಬೇಕು. ರೈತ ಯಾವ ಬೆಳೆ ಬೆಳೆಯುತ್ತಾನೆ ಎಂಬ ಮಾಹಿತಿ ಪಡೆಯಬೇಕು. ರೈತರಿಗೆ ಮೇವು ಬೆಳೆಸಲು ಮಾರ್ಗದರ್ಶನವನ್ನು ಕೃಷಿ ಇಲಾಖೆ ಅಧಿಕಾರಿಗಳು ನೀಡಬೇಕು. ಮೇವು ಬೆಳೆದ ರೈತನಿಗೆ ಸರ್ಕಾರದಿಂದ ಬರುವ ಹಣ ಕೊಡಿಸಲು ಉಸ್ತುವಾರಿ ಮಾಡಬೇಕಾಗಿದೆ. ಯಾವುದೇ ಅಧಿಕಾರಿಗಳು ರೈತ ಮೇವು ಬೆಳೆದಿದ್ದನ್ನು ಕಂಡಿಲ್ಲ ಎಂದರೆ ಎಷ್ಟರ ಮಟ್ಟಿಗೆ ರೈತರನ್ನು ಭೆಟಿಯಾಗಿದ್ದಾರೆ ಎಂದು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕೃಷಿ ಹೊಂಡಗಳ ನಿರ್ಮಾಣ ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ಮಾಡಿಸಬೇಕು. ಒಂದೇ ಗ್ರಾಮದಲ್ಲಿ ಒಬ್ಬರಿಗೆ 4-5 ಕೃಷಿ ಹೊಂಡಗಳು ಕೊಡಬಾರದು. ಈ ಸೌಲಭ್ಯ ಎಲ್ಲ ರೈತರಿಗೆ ಸಿಗಬೇಕು. ಇದರಲ್ಲಿ ಏನಾದರು ದೋಷವಾದರೆ ಚಳಿ ಬಿಡಿಸುವುದಾಗಿ ಎಚ್ಚರಿಕೆ ನೀಡಿದರು.ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸಿದ ಉಪಕರಣಗಳು ಮತ್ತು ಸೌಲಭ್ಯದ ಮಾಹಿತಿ ಇಲ್ಲದೆ, ಸಭೆಯಲ್ಲಿ ಹಾಜರಿದ್ದ ಕೃಷಿ ಅಧಿಕಾರಿಯ ಮೇಲೆ ಕಿಡಿಕಾರಿದರು.
ಅಕ್ಷರ ದಾಸೋಹ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಗಳು 1 ರಿಂದ 10 ನೆ ತರಗತಿ ಶಾಲೆಗಳು 113, 6 ರಿಂದ 8 ನೆ ತರಗತಿ ಶಾಲೆಗಳು 118, 9 ರಿಂದ 10 ನೆ ತರಗತಿ ಶಾಲೆಗಳು 21 ಇವೆ. ಅನುದಾನಿತ ಶಾಲೆಗಳು 1 ರಿಂದ 10 ನೆ ತರಗತಿ 64 ಇದ್ದು, ಒಟ್ಟು 20,311 ವಿದ್ಯಾರ್ಥಿಗಳು ಬಿಸಿಯೂಟದ ಸೌಲಭ್ಯ ಪಡೆಯುತ್ತಿದ್ದಾರೆ. ಅಡುಗೆ ಸಿಬ್ಬಂದಿ ಒಟ್ಟು 575 ಜನ ಇದ್ದಾರೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಸಭೆಗೆ ಮಾಹಿತಿ ನೀಡಿದರು.
ನಂತರ ಸಚಿವರ ಆಹಾರ ಪದಾರ್ಥಗಳು ಸರಬರಾಜು ಮಾಡುವುದರಲ್ಲಿ ವಿಳಂಬ ಉಂಟಾಗುತ್ತಿರುವ ಮಾಹಿತಿ ಇದೆ ಎಂಬ ಪ್ರಶ್ನೆಗೆ, ಅಧಿಕಾರಿಗಳು ಆಹಾರ ಪದಾರ್ಥಗಳು ಸರಬರಾಜು ಮಾಲಿಕರಿಂದ ಟೆಂಡರ್ ಪಕ್ರಿಯೆಯಲ್ಲಿ ತೊಂದರೆ ಆಗಿರುವುದರಿಂದ ತಾಲ್ಲೂಕು ಕೇಂದ್ರದಿಂದ ಶಾಲೆಗಳಿಗೆ ಇಲ್ಲಿಂದಲೇ ಸರಬರಾಜು ಮಾಡಬೇಕಾಗಿರುವುದರಿಂದ ಸ್ವಲ್ಪ ತಡವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಕ್ಷರ ದಾಸೋಹ ಸಹಾಯಕರು ಶಾಲೆಗಳಿಗೆ ಭೇಟಿ ನೀಡದೇ ಸುಳ್ಳು ಮಾಹಿತಿ ನೀಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ತರಿಕಾರಿ ಬಳಸಬೇಕು. ಗುಣ ಮಟ್ಟದ ಶಿಕ್ಷಣ ಕೊಡಿಸಲು ಟ್ಯೂಷನ್ ವ್ಯವಸ್ಥೆ ಕಲ್ಪಿಸಬೇಕು. ಗುಣ ಮಟ್ಟದ ಆಹಾರ ಮತ್ತು ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಆದೇಶಿಸಿದರು.ಪಾವಗಡ ತಾಲ್ಲೂಕಿನಲ್ಲಿ ನಿರುದ್ಯೋಗಿ ಯುವಕರು ಮತ್ತು ಯುವತಿಯರು ತುಮಕೂರಿನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗ ಪಡೆಯಲು ಕರೆ ನೀಡಿದ್ದಾರೆ.
ಕಾರ್ಮಿಕ ಆಯುಕ್ತ ಪಾಲಯ್ಯ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಇತ್ತೀಚೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅರ್ಹ ಫಲಾನುಭವಿಗಳನ್ನು ಗ್ರಾಮೀಣ ಕಟ್ಟಡ ಮತ್ತಿತರೆ ನಿರ್ಮಾಣ ಕಾರ್ಮಿಕರೆಂದು ಗುರುತಿಸಲಾಗಿದೆ. ಇವರು ಹೊಸ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆದು ಕಾರ್ಮಿಕರಿಗೆ ಬರುವ ಸೌಲಭ್ಯ ಪಡೆಯಬೇಕು. ಜಿ.ಪಂ, ತಾಪಂ ಮತ್ತು ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ .
ಇದರ ಜೊತೆಗೆ ಕಾರ್ಮಿಕ ಇಲಾಖೆಯಿಂದ ವಿವಿಧ ಸೌ¯ಭ್ಯಗಳು ದೊರೆಯುತ್ತಿದ್ದು, ಇದರ ಸೌಲಭ್ಯ ಪಡೆಯಲು ಇಲಾಖೆ ಅಧಿಕಾರಗಳ ಜೊತೆ ಮಾಹಿತಿ ಪಡೆಯ ಬೇಕು ಎಂದು ತಿಳಿಸಿದರು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಫಲಾನುಭವಿಗಳಿಗೆ ಕಿಟ್‍ಗಳನ್ನು ವಿತರಿಸಲಾಯಿತು.
ಆರೋಗ್ಯ ಇಲಾಖೆ, ಪಶುವೈಧ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ನಿರ್ಮಿತಿ ಕೇಂದ್ರ, ಎನ್.ಆರ್.ಎಲ್.ಎಂ.ಇಲಾಖೆ, ಶಿಕ್ಷಣ ಇಲಾಖೆ, ಕೃಷಿ ಮಾರುಕಟ್ಟೆ ಸಮಿತಿ,ಸಾಮಾಜಿಕ ಅರಣ್ಯ ಇಲಾಖೆ, ಪ್ರಾದೇಶಿಕಾ ಅರಣ್ಯ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆಹಾರ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ, ಪುರಸಭೆ, ಭೂಸೇನಾ, ಉಪನೋಂದಣಿ ಅಧಿಕಾರಿಗಳು, ಮೀನುಗಾರಿಕೆ, ಅಬಕಾರಿ ಇಲಾಖೆ ಹಾಗೂ ಕೈಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಸೊಗಡುವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ.ವೆಂಕಟೇಶ್, ಚನ್ನಮಲ್ಲಯ್ಯ, ಪಾಪಣ್ಣ, ಗೌರಮ್ಮತಿಮ್ಮಯ್ಯ, ತಾ.ಪಂ.ಸದಸ್ಯ ಹನುಮಂತರಾಯಪ್ಪ, ಕಾರ್ಮಿಕ ಇಲಾಖೆ ಆಯುಕ್ತ ಪಾಲಯ್ಯ, ಇ.ಓ.ನರಸಿಂಹಮೂರ್ತಿ, ಶಿಕ್ಷಣಾಧಿಕಾರಿ ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅನಿಲ್‍ಕುಮಾರ್, ಪಂಚಾಯತ್ ರಾಜ್ ಎ.ಇ.ಇ ಈಶ್ವರಯ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಎ.ಇ.ಇ ಬಿ.ಪಿ.ನಾಗರಾಜು, ತೋಟಗಾರಿಕೆ ಸಹಾಯಕ ನಿರ್ದೇಶಕ ಸುಧಾಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಜ್, ಸಿ.ಡಿ.ಪಿ.ಓ ಶಿವಕುಮಾರ್, ಅರಣ್ಯ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಅಕ್ಷರ ದಾಸೋಹ ನಿರ್ದೇಶಕ ಹನುಮಂತರಾಯಪ್ಪ, ಪಶುವೈದ್ಯಾಧಿಕಾರಿ ಸಿದ್ದಲಿಂಗಪ್ಪ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
