ಕುಣಿಗಲ್
ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಒಂದಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿಕೂಟ ಇಂದು ಕರ್ನಾಟಕದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದರಿಂದ ಪ್ರತಿಯೊಬ್ಬರೂ ನಮ್ಮ ಮೈತ್ರಿ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಿ ಸರ್ಕಾರವನ್ನ ಉಳಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕರೆನೀಡಿದರು.
ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮೈತ್ರಿ ಪಕ್ಷಗಳ ಬೃಹತ್ ಸಮಾವೇಶವನ್ನು ಕುರಿತು ಮಾತನಾಡುತ್ತಾ, ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೆ ಕೊಡುಗೆಯನ್ನ ನೀಡಿಲ್ಲ. ಆದರೂ ಜನ ಮೋದಿ ಮೋದಿ ಎನ್ನುತ್ತಿದ್ದಾರೆ. ಇಲ್ಲಿ ಮೋದಿ ಅಲೆ ಇದೆ ಎನ್ನುತ್ತಾರೆ. ಆದರೆ ಅದು ಕೃತಕ ಅಲೆ ಎಂದು ವ್ಯಂಗ್ಯವಾಡಿದರು. ಕೇಂದ್ರದಲ್ಲಿ ಆಳ್ವಿಕೆ ಮಾಡಿದ ಬಿಜೆಪಿ ಸರ್ಕಾರ ಬಡವರಿಗೆ, ರೈತರಿಗೆ, ನಿರುದ್ಯೋಗಿಗಳಿಗೆ ಯಾವರೀತಿಯಲ್ಲಿಯೂ ಅನುಕೂಲ ಮಾಡದೆ ಬರಿ ಮನ್‍ಕೀ ಬಾತ್ ಭಾಷಣ ಮಾಡುವ ಮೂಲಕ ಕಾಲಹರಣ ಮಾಡಿದ್ದಾರೆ.
ರಾಜ್ಯ ಸರ್ಕಾರವನ್ನ ಅಭದ್ರಗೊಳಿಸಲು ಬಿಜೆಪಿಯವರು ಬರಿ ಕುತಂತ್ರ ರಾಜಕಾರಣ ಮಾಡುತ್ತಲೇ ಇದ್ದಾರೆ. ಅದಕ್ಕೆ ಯಾವುದೆ ಶಾಸಕರು ಮಣಿಯಲಿಲ್ಲ. ಸುಭದ್ರ ಸರ್ಕಾರ ನಡೆಸಲು ಕಾಂಗ್ರೆಸ್ ಜೆಡಿಎಸ್ ಒಂದಾಗಿದ್ದು ಯಾವುದೆ ಕಾರಣಕ್ಕು ಹಿಂದೆ ಸರಿಯುವ ಮಾತೇ ಇಲ್ಲ. ಒಂದೆ ಕುಟುಂಬದಂತೆ ಇವರು ನಾವು ಮುಂದೆ ರೈತರ ಅಭಿವೃದ್ದಿಗಾಗಿ 450 ಕೋಟಿ ವೆಚ್ಚದಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ದತಿ ಯೋಜನೆಗೆ ರೂಪಿಸಲಾಗುವುದು ಎಂದ ಅವರು, ಸಮೃದ್ದ ನೀರಿನಯೋಜನೆಗೆ 17 ಸಾವಿರ ಕೋಟಿ ಮೀಸಲಿರಿಸಿದ್ದು ಹೇಮಾವತಿ ಅಭಿವೃದ್ಧಿಗಾಗಿ 6 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ತುಮಕೂರಿನ ಜಿಲ್ಲೆಯ ಋಣ ನಮ್ಮ ಕುಟುಂಬದ ಮೇಲಿದ್ದು ನಾವು ಎಂದೂ ಅನ್ಯಾಯ ಮಾಡುವುದಿಲ್ಲ, ನಿಮ್ಮ ಒತ್ತಾಯದ ಮೇಲೆ ದೇವೇಗೌಡರು ಸ್ಪರ್ಧಿಸಿದ್ದು ನೀರಾವರಿ ಯೋಜನೆಯಲ್ಲಿ ಅವರ 60 ವರ್ಷದ ಅನುಭವವನ್ನು ಉಪಯೋಗಿಸಿ ಕೊಂಡು ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಒತ್ತುಕೊಡುವರು. ತುಮಕೂರು ಭಾಗಕ್ಕೆ 23 ಟಿಎಂಸಿ ನೀರು ಮೀಸಲಾಗಿದ್ದರೂ ಈ ಬಾರಿ 24.5 ಟಿ.ಎಂ.ಸಿ ನೀರು ಹರಿದು ಬಂದಿದೆ.
ಆದರೂ ಇಲ್ಲಿನ ಬಿಜೆಪಿ ಅವರು ಹಾಸನದಿಂದ ನೀರು ಬಿಟ್ಟಿಲ್ಲ ಎಂದು ಆರೋಪಿಸುತ್ತಾರೆ. ಇವರು ಚುನಾವಣೆಯ ವೇಳೆಯಲ್ಲಿ ಮಾತ್ರ ನೀರಿನ ರಾಜಕಾರಣ ಮಾಡುವುದನ್ನ ಬಿಟ್ಟು ಅಧಿಕಾರ ಇದ್ದಾಗ ಏನು ಮಾಡುತ್ತಿದ್ದರು ಎಂದು ಟೀಕಿಸಿದರು. ಕುಣಿಗಲ್ ಭಾಗಕ್ಕೆ ಶಿಂಷಾ ನದಿಯ ಮೂಲಕ ಆ ಭಾಗದ ನೀರನ್ನು ಸಮರ್ಪಕವಾಗಿ ಹರಿಸಿಕೊಂಡು ಹುಲಿಯೂರುದುರ್ಗದ 4 ಕೆರೆಗಳಿಗೂ ನೀರು ಹರಿಸಲಾಗುವುದೆಂದರು. ಈಗಾಗಲೇ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ 5 ಸಾವಿರ ಕೋಟಿ ಬಿಡುಗಡೆ ಮಾಡಿದ್ದು ವಿವಿಧ ಅಭಿವೃದ್ಧಿಗಳನ್ನ ಕೈಗೆತ್ತಿಕೊಳ್ಳಬೇಕಿದೆ ಎಂದರು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನ ಒಂದು ರೂ. ಹೆಚ್ಚಿಸಿ 6 ರೂ. ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಬಿಡಿಗಾಸು ನೀಡಲಿಲ್ಲ. ರೈತರು ಅರೆಬೆತ್ತಲೆ ಮಾಡುತ್ತ ಪ್ರತಿಭಟಿಸಿದರು ಸ್ಪಂದಿಸಲಿಲ್ಲ ಎಂದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೆ ಗೊಂದಲ ಇಲ್ಲ. ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೂಡಿ ಮೈತ್ರಿ ಪಕ್ಷದ ಅಭ್ಯರ್ಥಿ ಡಿ.ಕೆ.ಸುರೇಶ್ ಗೆಲವಿಗೆ ಶ್ರಮಿಸಿ ಎಂದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ವರಿಷ್ಠರುಗಳ ಆದೇಶದಂತೆ ಮೈತ್ರಿ ಸರ್ಕಾರವನ್ನ ರಚಿಸಿಕೊಂಡಿದ್ದು, ಕಾರ್ಯಕರ್ತರ ನೋವಿಗೆ ಸದಾ ಸ್ಪಂದಿಸಲು ಕುಮಾರಸ್ವಾಮಿ ಹಾಗೂ ನಾನು ಇದ್ದೇವೆ, ಅನ್ಯತಾ ಭಾವಿಸದೆ ಪ್ರತಿಯೊಬ್ಬರಲ್ಲಿಯೂ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮೈತ್ರಿ ಸರ್ಕಾರದ ಅಭ್ಯರ್ಥಿಗಳ ಪರ ನಿಂತು ಮತಹಾಕಿಸಿ ಎಂದರು. ಹೇಮಾವತಿ ನೀರು ಹರಿಸುವ ವಿಚಾರವಾಗಿ ತುಮಕೂರು ಜಿಲ್ಲೆಯಲ್ಲಿ ಗೊಂದಲ ಸೃಷ್ಟಿಸಿರುವ ಜಿ.ಎಸ್. ಬಸವರಾಜು ಚುನಾವಣೆಯ ಸಮಯದಲ್ಲಿ ಮಾತ್ರ ಬುಸ್‍ಗುಡುತ್ತಿದ್ದಾರೆ.
ಇವರಿಗೆ ಅಧಿಕಾರ ಇದ್ದಾಗ ಏನು ಮಾಡುತ್ತಿದ್ದರು ಎಂದು ಟೀಕಿಸಿದ ಅವರು, ಇಂದಿನ ಮೈತ್ರಿ ಸರ್ಕಾರದಿಂದ ತುಮಕೂರು ಜಿಲ್ಲೆಗೆ ಮತ್ತು ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರಿನಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ನೀರಾವರಿ ಯೋಜನೆಯ ಅಭಿವೃದ್ಧಿಗೆ ಈಗಾಗಲೇ 6 ಸಾವಿರ ಕೋಟಿ ರೂಪಿಸಲಾಗಿದೆ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ. ಡಿ.ಕೆ.ಸುರೇಶ್ ಕ್ಷೇತ್ರದಲ್ಲಿ 270 ಕುಡಿಯುವ ನೀರಿನ ಘಟಕಗಳನ್ನ ಸ್ಥಾಪಿಸುವ ಮೂಲಕ ಸಕ್ರಿಯ ಸಂಸದರಾಗಿದ್ದಾರೆ. ಎರಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ನಡೆಸುವಂತೆ ಮನವಿ ಮಾಡಿದರು.
ಜೆಡಿಎಸ್ ಮುಖಂಡ ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ದೇವೇಗೌಡರ ಆಣತಿಯಂತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು ಕುಮಾರಸ್ವಾಮಿ ಸಿ.ಎಂ. ಆಗಲು ಡಿ.ಕೆ.ಶಿ. ಅವರೇ ಮುಖ್ಯವೆಂಬ ಮಾತನ್ನ ಕುಮಾರಸ್ವಾಮಿಯವರು ನನಗೆ ಹೇಳಿದ್ದು, ಅದರಂತೆ ಇಲ್ಲಿನ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಕಹಿ ಘಟನೆಗಳನ್ನ ಮರೆತು ಅಭ್ಯರ್ಥಿಯ ಗೆಲುವಿಗೆ ಕೈಜೋಡಿಸಿ ಎಂದರು.
ಅಭ್ಯರ್ಥಿ ಡಿ.ಕೆ. ಸುರೇಶ್ ಮಾತನಾಡಿ ಹಿಂದೆ ಕ್ಷೇತ್ರದಲ್ಲಿದ್ದ ಪರಸ್ಪರ ವೈಮನಸ್ಸುಗಳನ್ನ ಬದಿಗಿರಿಸಿ ರಾಜ್ಯದಲ್ಲಿ ಕುಮಾರಸ್ವಾಮಿಯವರ ಕೈ ಬಲಪಡಿಸಲು ಜೆಡಿಎಸ್ ಕಾಂಗ್ರೆಸ್ ಪಕ್ಷದವರು ಒಂದಾಗಿ ಭೂತ್ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ನಮಗೆ ವಿರೋಧ ಪಕ್ಷವಾದ ಬಿಜೆಪಿಗೆ ತಕ್ಕ ಪಾಠಕಲಿಸಿ ಎಂದ ಅವರು, ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಶಾಸಕ ಡಾ. ರಂಗನಾಥ್ ಸ್ವಾಗತಿಸಿದರು. ಜೆಡಿಎಸ್ ಮುಖಂಡ ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಗಡಿ ಶಾಸಕ ಮಂಜುನಾಥ್, ವಿಧಾನಪರಿಷತ್ ಸದಸ್ಯ ರವಿ, ಜಿ.ಪಂ. ಮಾಜಿ ಅಧ್ಯಕ್ಷ ರವಿಬಾಬು, ಲತಾ ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಆಡಿಟರ್ ನಾಗರಾಜ್, ಅನಿಲ್‍ಗೋಷ್, ಜೆ.ಡಿ.ಎಸ್. ಮುಖಂಡ ಬಿ.ಎನ್. ಜಗದೀಶ್, ಹರೀಶ್‍ನಾಯ್ಕ, ನಳಿನಾಭೈರಪ್ಪ, ಸೇರಿದಂತೆ ಹಲವರು ಇದ್ದರು.
ಮಾಜಿ ಶಾಸಕ ಬಿಬಿಆರ್ ಗೈರು ಅನುಮಾನಕ್ಕೆ ಎಡೆ :- ಮೈತ್ರಿ ಪಕ್ಷದ ದಂಡೇ ಭಾಗವಹಿಸಿದ್ದರೂ ಸಭೆಯ ವೇದಿಕೆಯಲ್ಲಾಗಲಿ ರ್ಯಾಲಿಯಲ್ಲಾಗಲಿ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಭಾಗವಹಿಸದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅನುಮಾನಕ್ಕೆ ಎಡೆ ಉಂಟುಮಾಡಿದ್ದು, ಇಲ್ಲಿಯವರೆಗೂ ಯಾವುದೇ ಸಭೆಯಲ್ಲಿ ಗೋಚರಿಸದೆ ಇರುವುದು ಮತ್ತಷ್ಟು ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಉಂಟುಮಾಡಿದೆ.
ಮುಖ್ಯರಸ್ತೆಯಲ್ಲಿ ಸಭೆಯ ವೇದಿಕೆ ಪ್ರಯಾಣಿಕರ ಪರದಾಟ : ಬೆಳಿಗ್ಗೆ 10 ರಿಂದ 3 ಗಂಟೆಯವರೆಗೆ ಪಟ್ಟಣದ ಮುಖ್ಯ ರಸ್ತೆ ಹುಚ್ಚಮಾಸ್ತಿಗೌಡ ವೃತ್ತದ ಬಳಿ ವೇದಿಕೆಯನ್ನು ನಿರ್ಮಿಸಿದ್ದರಿಂದ ಬಸ್‍ಗಳು ಸೇರಿದಂತೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು ಅಲ್ಲದೆ ಪಟ್ಟಣದ ಹೊರವಲಯದ ಆಲಪ್ಪನ ಗುಡ್ಡೆ ಮತ್ತು ಅಂಜೆಪಾಳ್ಯದ ಬಳಿಯೇ ಪಟ್ಟಣಕ್ಕೆ ಬರದಂತೆ ಬಸ್ ಮಾರ್ಗ ಬದಲಿಸಿದ್ದರಿಂದ ಎಡೆಯೂರು ರಥೋತ್ಸವಕ್ಕೆ ಹೋಗುವ ಭಕ್ತರು ಸೇರಿದಂತೆ ಸಾರ್ವಜನಿಕರು ಪರದಾಡುತ್ತ ಚುನಾವಣಾ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಹಿಡಿ ಶಾಪ ಹಾಕಿದರೆ ಹಿರಿಯ ನಾಗರೀಕರು ಛೀಮಾರಿ ಹಾಕಿದ ಪ್ರಸಂಗ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
