ದಾವಣಗೆರೆ:
ನಗರದ ಹಳೇ ಬ್ಯಾಂಕ್ಗಳಲ್ಲಿ ಒಂದಾದ ಮಿಲ್ಲತ್ ಕೋ-ಆಪರೇಟಿವ್ ಬ್ಯಾಂಕ್ ಲಿ., 40 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ವಹಿವಾಟಿಗೆ ಪ್ರೋತ್ಸಾಹಿಸುತ್ತಾ ಬಂದಿದೆ. ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕಠಿಣ ಆರ್ಥಿಕ ಹಿನ್ನಲೆಯಲ್ಲಿ ಅನೇಕ ಬ್ಯಾಂಕುಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿವೆ. ಮಿಲ್ಲತ್ ಬ್ಯಾಂಕಿಗೆ ಆರ್.ಬಿ.ಐ. ತಂಡ ವಾರ್ಷಿಕ ತಪಾಸಣೆ ನಡೆಸುವ ಸಂದರ್ಭದಲ್ಲಿ ಸಾಲ ವಸೂಲಾತಿ ಮತ್ತು ಠೇವಣಿ ಸಂಗ್ರಹದಲ್ಲಿ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಗುರಿಯನ್ನು ತಲುಪದ ಹಿನ್ನಲೆಯಲ್ಲಿ ಸದರಿ ತಂಡ ನೀಡಿದ ವರದಿಯ ಹಿನ್ನಲೆಯಲ್ಲಿ ದಿನಾಂಕ : 8-5-2019ರಂದು ಕೆಲವು ನಿರ್ಬಂಧಗಳನ್ನು ಎದುರಿಸಿ ನಿಗದಿಪಡಿಸಿದ ಗುರಿಯನ್ನು ತಲುಪಲು ಆರು ತಿಂಗಳ ಕಾಲವಕಾಶ ನೀಡಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 3 ಸಾರ್ವತ್ರಿಕ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಹಾಗೂ ವಿಧಿಸಲಾದ ಮಾದರಿ ನೀತಿ ಸಂಹಿತೆಯಿಂದ ಆರ್.ಬಿ.ಐ. ನಿಗದಿಪಡಿಸಿದ ಠೇವಣಿ ಸಂಗ್ರಹ ಸಾಲ ವಸೂಲಾತಿ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಆರ್.ಬಿ.ಐ. ವಿಧಿಸಿದ ನಿಬಂಧನೆಗಳನ್ನು ರದ್ದುಗೊಳಿಸಲು ಆಡಳಿತ ಮಂಡಳಿ ಮನವಿ ಮಾಡಿದೆ. ಕಳೆದ 40 ವರ್ಷಗಳಿಂದ ಬ್ಯಾಂಕ್ನ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿರುವ ಗ್ರಾಹಕರು ಮತ್ತು ಬ್ಯಾಂಕಿನ ಹಿತೈಷಿಗಳು ಗೊಂದಲಕ್ಕೊಳಗಾಗದೆ ಎಂದಿನಂತೆ ಆಡಳಿತ ಮಂಡಳಿಯೊಂದಿಗೆ ಸಹಕರಿಸಿ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಸಹಕರಿಸಲು ಆಡಳಿತ ಮಂಡಳಿಯ ಪರವಾಗಿ ಸಂಸ್ಥಾಪಕ ಅಧ್ಯಕ್ಷರಾದ ಜನಾಬ್ ಸೈಯದ್ ಸೈಫುಲ್ಲಾರವರು ಮನವಿ ಮಾಡಿದ್ದಾರೆ.