ತುರುವೇಕೆರೆ
ತಾಲ್ಲೂಕಿನ ಬಾಣಸಂದ್ರ ಗ್ರಾಮದ ರೈಲ್ವೇ ನಿಲ್ದಾಣ ಹಿಂಭಾಗದ ರಂಗಸ್ವಾಮಿ ಅಂಗಡಿಯ ಫ್ರಿಡ್ಜ್‍ನಲ್ಲಿದ್ದ ನಾಗರಹಾವನ್ನು ಉರಗ ತಜ್ಞ ಬಿ.ಜಿ.ರವಿಕುಮಾರ್ ಹಿಡಿದು ರಕ್ಷಿಸಿದ್ದಾರೆ.
ರಂಗಸ್ವಾಮಿ ಅವರ ಪತ್ನಿ ಶಶಿಕಲಾ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಯಾವಾಗಲೋ ಅಂಗಡಿಯವರಿಗೆ ಗೊತ್ತಿಲ್ಲದಂತೆ ನಾಗರಹಾವು ಫ್ರಿಡ್ಜ್‍ನೊಳಗೆ ಬಂದು ಸೇರಿಕೊಂಡಿದೆ. ಗುರುವಾರ ಸಂಜೆ ಗ್ರಾಹಕರೊಬ್ಬರು ತಂಪು ಪಾನೀಯ ಕೇಳಿದ್ದಾರೆ. ಆಗ ಅಂಗಡಿಯಲ್ಲಿದ್ದ ಶಶಿಕಲಾ ಫ್ರಿಡ್ಜ್ ತೆರೆದಿದ್ದಾರೆ. ತಕ್ಷಣ ಹಾವು ಹೆಡೆ ಬಿಚ್ಚಿದೆ. ಹೆದರಿದ ಶಶಿಕಲಾ ದಿಢೀರನೆ ಫ್ರಿಡ್ಜ್ ಬಾಗಿಲು ಮುಚ್ಚಿ, ಉರಗತಜ್ಞ ಬಿ.ಜಿ.ರವಿಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬಿ.ಜಿ.ರವಿಕುಮಾರ್ ಫ್ರಿಡ್ಜ್‍ನಲ್ಲಿ ಎಲ್ಲ ವಸ್ತುಗಳನ್ನು ತೆಗೆದು ಹಾಕಿ ಅದರಲ್ಲಿದ್ದ ನಾಲ್ಕೂವರೆ ಅಡಿ ಉದ್ದದ ನಾಗರ ಹಾವನ್ನು ಹಿಡಿದು ಕೋಣನ ಕಾವಲಿನ ಫಾರೆಸ್ಟ್‍ಗೆ ಕೊಂಡೊಯ್ದು ಬಿಟ್ಟಿದ್ದಾರೆ.