ತುಮಕೂರು
ಕೇಂದ್ರ ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ದಿನಾಂಕವನ್ನು ಘೋಷಿಸಿರುವ ಬೆನ್ನಲ್ಲೇ ದೇಶಾದ್ಯಂತ “ಮಾದರಿ ನೀತಿ ಸಂಹಿತೆ” (ಎಂ.ಸಿ.ಸಿ.) ಜಾರಿಗೆ ಬಂದಿದ್ದು, ಅದರಂತೆ ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲೂ “ನೀತಿ ಸಂಹಿತೆ” ಜಾರಿಗೊಂಡಿದೆ. ಮೇ 23 ರವರೆಗೂ “ನೀತಿ ಸಂಹಿತೆ” ಜಾರಿಯಲ್ಲಿರುತ್ತದೆ.
“ಮಾದರಿ ನೀತಿ ಸಂಹಿತೆ”ಯು ಭಾನುವಾರ ಸಂಜೆಯಿಂದಲೇ ಜಾರಿಗೆ ಬಂದಿದ್ದು, ಅಂದು ಪಾಲಿಕೆ ಕಚೇರಿಗೆ ರಜೆ ಇದ್ದುದರಿಂದ ಅದರ ಪರಿಣಾಮ ಸಾರ್ವಜನಿಕರಿಗೆ ಕಂಡುಬಂದಿರಲಿಲ್ಲ. ಆದರೆ ಸೋಮವಾರ ಬೆಳಗ್ಗೆ ಕಚೇರಿ ಆರಂಭದ ಹೊತ್ತಿಗೆ `ಮಾದರಿ ನೀತಿ ಸಂಹಿತೆ’ ಜಾರಿಗೆ ಬಂದಿರುವುದು ಸಾರ್ವಜನಿಕರ ಗಮನಕ್ಕೆ ಬಂತು
ಮೇಯರ್ ಮತ್ತು ಉಪಮೇಯರ್ ಅವರಿಗೆ ಪಾಲಿಕೆ ವತಿಯಿಂದ ನೀಡಲಾಗಿರುವ ಅಧಿಕೃತ ವಾಹನ (ಕಾರು)ವನ್ನು ವಾಪಸ್ ಪಡೆಯಲಾಗಿದೆ. ಮೇಯರ್, ಉಪಮೇಯರ್ ಕೊಠಡಿಗಳು ಮತ್ತು ನಾಲ್ಕು ಸ್ಥಾಯಿ ಸಮಿತಿ ಕೊಠಡಿ (ಚೇಂಬರ್)ಗಳ ಹೊರಗೆ ಮತ್ತು ಒಳಗಿರುವ ನಾಮಫಲಕಗಳು ಕಾಣದಂತೆ ಬಿಳಿ ಬಣ್ಣದ ಕಾಗದವನ್ನು ಅಂಟಿಸಲಾಗಿದೆ.
ಇದಲ್ಲದೆ ಈ ಎಲ್ಲ ಆರು ಕೊಠಡಿಗಳನ್ನು ಚುನಾವಣಾ ಆಯೋಗದ ವಶಕ್ಕೆ ಪಡೆದುಕೊಳ್ಳಲಾಗುವುದೆಂದು ಹೇಳಲಾಗಿದೆ.
ಪ್ರತಿನಿತ್ಯ ಬೆಳಗ್ಗೆ 10-30 ರ ಹೊತ್ತಿಗೆಲ್ಲ ಪಾಲಿಕೆಯ ಅಧಿಕೃತ ವಾಹನದಲ್ಲಿ ಪಾಲಿಕೆ ಕಚೇರಿಗೆ ಆಗಮಿಸುತ್ತಿದ್ದ ಮೇಯರ್ ಲಲಿತಾ ರವೀಶ್ (ಜೆಡಿಎಸ್) ಮತ್ತು ಉಪಮೇಯರ್ ರೂಪಶ್ರೀ (ಕಾಂಗ್ರೆಸ್) ಸೋಮವಾರ ಬೆಳಗ್ಗೆ ಪಾಲಿಕೆ ಕಚೇರಿಗೆ ಆಗಮಿಸಿರಲಿಲ್ಲ. ಈರ್ವರ ವಾಹನಗಳೂ ಪಾಲಿಕೆ ಕಚೇರಿಯಲ್ಲೇ ನಿಲುಗಡೆ ಆಗಿದ್ದವು. ಈ ಮಧ್ಯೆ ಬೆಳಗ್ಗೆ 11 ಗಂಟೆ ಬಳಿಕ ಪಾಲಿಕೆ ಕಚೇರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ಅನೇಕ ಸದಸ್ಯರುಗಳು ಎಂದಿನಂತೆ ಆಗಮಿಸಿದರು. ಎಲ್ಲರೂ ಮೇಯರ್ ಕೊಠಡಿ, ಸ್ಥಾಯಿ ಸಮಿತಿಗಳ ಕೊಠಡಿಗಳಲ್ಲಿ ಆಸೀನರಾಗಿದ್ದರು. ಸಂಜೆ ವೇಳೆಗೆ ಕಚೇರಿಗೆ ಮೇಯರ್ ಬಂದರೆಂದು ತಿಳಿದುಬಂದಿದೆ.
ಜಾಹಿರಾತು ಫಲಕಗಳ ತೆರವು
“ನೀತಿ ಸಂಹಿತೆ”ಗೆ ಅನುಗುಣವಾಗಿ ಸೋಮವಾರ ಬೆಳಗಿನಿಂದಲೇ ನಗರಾದ್ಯಂತ ವಿವಿಧೆಡೆಗಳಲ್ಲಿ ರಾಜಕಾರಣಿಗಳ ಭಾವಚಿತ್ರ ಇತ್ಯಾದಿ ಇದ್ದ ಜಾಹಿರಾತು ಫಲಕಗಳು, ಫ್ಲೆಕ್ಸ್ ಫಲಕಗಳು, ಭಿತ್ತಿಪತ್ರ, ಬ್ಯಾನರ್ ಮೊದಲಾದವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಟ್ಟುನಿಟ್ಟಾಗಿ ನಡೆಸಿದರು.
ಮಾರ್ಚ್ 12 ನಡೆಯಬೇಕಿದ್ದ
ಬಜೆಟ್ ಸಭೆ ಮುಂದೂಡಿಕೆ ಮಾರ್ಚ್ 12 ರಂದು 2019-20 ನೇ ಸಾಲಿನ ವಾರ್ಷಿಕ ಬಜೆಟ್ ಸಭೆಯನ್ನು ನಡೆಸಲು ಉz್ದÉೀಶಿಸಲಾಗಿತ್ತು. ತೆರಿಗೆ-ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (ಜೆಡಿಎಸ್) ಬಜೆಟ್ ಮಂಡಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದ್ದರು. ಆದರೆ “ನೀತಿ ಸಂಹಿತೆ” ಜಾರಿಗೊಂಡ ಹಿನ್ನೆಲೆಯಲ್ಲಿ ಬಜೆಟ್ ಸಭೆಯನ್ನು ಮುಂದೂಡಲಾಗಿದೆ. “ನೀತಿ ಸಂಹಿತೆ” ಮುಕ್ತಾಯವಾಗುವ ಮೇ 23 ರ ಬಳಿಕವಷ್ಟೇ ಬಜೆಟ್ ಸಭೆಯನ್ನು ನಡೆಸಬಹುದಾಗಿದೆ.
“ಬಜೆಟ್ ಅನುಮೋದನೆ ಇಲ್ಲದೆ ಪಾಲಿಕೆಯ ದೈನಂದಿನ ವ್ಯವಹಾರಗಳು ನಡೆಯುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ವೇತನ ಹಾಗೂ ಇತರೆ ತುರ್ತು ವೆಚ್ಚಗಳನ್ನು ಮಾತ್ರ ಪಾಲಿಕೆಯ ಆಡಳಿತವು ಸರ್ಕಾರದ ಅನುಮೋದನೆ ಮೇರೆಗೆ ಭರಿಸಬಹುದಾಗಿರುತ್ತದೆ. ಅದೂ ಸಹ ಮೂರು ತಿಂಗಳುಗಳ ಕಾಲಾವಧಿಗೆ ಮಾತ್ರ ಇಂತಹ ಅವಕಾಶವಿರುತ್ತದೆ” ಎಂದು ಮೂಲಗಳು ಹೇಳುತ್ತವೆ.
ಆಯುಕ್ತರು ಚಂಡೀಗಡಕ್ಕೆ
ಈ ಮಧ್ಯೆ `ಸ್ಮಾರ್ಟ್ ಸಿಟಿ’ಗೆ ಸಂಬಂಧಿಸಿದ ಎರಡು ದಿನಗಳ ಅವಧಿಯ ಸಭೆ ಮಾರ್ಚ್ 11 ಮತ್ತು 12 ರಂದು ಚಂಡೀಗಡದಲ್ಲಿ ಏರ್ಪಟ್ಟಿದ್ದು, ಅದರಲ್ಲಿ ಭಾಗವಹಿಸಲು ಪಾಲಿಕೆ ಆಯುಕ್ತ ಟಿ.ಭೂಪಾಲನ್ ಚಂಡೀಗಡಕ್ಕೆ ತೆರಳಿದ್ದಾರೆ.