ಬೆಂಗಳೂರು
ರಾಜ್ಯದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯಗಳಿಸಿದ ಹಿನ್ನೆಲೆಯಲ್ಲಿಯೇ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮೈತ್ರಿಕೂಟ ಸರ್ಕಾರ ಉರುಳುವ ಆತಂಕ ಕಾಣಿಸಿಕೊಂಡಿದೆ.
ಬಿಜೆಪಿಯ ಪ್ರಚಂಡ ಅಲೆಯ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಕೀಯ ಸ್ಥಿತಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬ ಕುತೂಹಲ ಎಲ್ಲೆಡೆ ಕಾಣಿಸಿಕೊಂಡಿದೆ.
ಫಲಿತಾಂಶದ ಪರಿಣಾಮವಾಗಿ ಕಾಂಗ್ರೆಸ್‍ನ ಹಲ ಶಾಸಕರು ರಾಜೀನಾಮೆ ನೀಡಿ ಕಮಲ ಪಾಳೆಯಕ್ಕೆ ಸೇರಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುತ್ತಾರೆಯೇ?ಅಥವಾ ಮೈತ್ರಿಕೂಟದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವ ಪರಿಸ್ಥಿತಿ ಬರುತ್ತದೆಯೇ?ಆ ಮೂಲಕ ಮಧ್ಯಂತರ ಚುನಾವಣೆಗೆ ವೇದಿಕೆ ಸಿದ್ಧವಾಗಲಿದೆಯೇ?ಎಂಬುದು ಈಗ ಬಹುಚರ್ಚಿತ ವಿಷಯ.
ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಬಿಜೆಪಿಯ ನೆಲೆಯನ್ನು ಗಟ್ಟಿ ಮಾಡಿರುವುದರಿಂದ ಮಧ್ಯಂತರ ಚುನಾವಣೆ ಎದುರಾಗುತ್ತದೆ ಎಂಬ ಲಕ್ಷಣ ಕಂಡರೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಹಲ ಶಾಸಕರು ಸರ್ಕಾರ ಬೇಕಿದ್ದರೆ ಹೋಗಲಿ ಎನ್ನುತ್ತಾರೆಯೇ ಹೊರತು ಮಧ್ಯಂತರ ಚುನಾವಣೆಗೆ ಅಣಿಯಾಗುವುದಿಲ್ಲ ಎಂಬುದು ರಾಜಕೀಯ ವಲಯಗಳ ಮಾತು.
ಇವತ್ತಿನ ಸ್ಥಿತಿಯಲ್ಲಿ ಮಧ್ಯಂತರ ಚುನಾವಣೆ ಎದುರಿಸುವುದು ಬಹಳ ಕಷ್ಟದ ಕೆಲಸ.ಹೋದರೂ ನಾವು ಗೆದ್ದು ಬರುತ್ತೇವೆ ಎಂದು ಹೇಳುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಬಹುತೇಕ ಶಾಸಕರು ಇಲ್ಲ.ಹೀಗಾಗಿ ಸರ್ಕಾರ ಬೇಕಿದ್ದರೆ ಹೋಗಲಿ.ಆದರೆ ಮಧ್ಯಂತರ ಚುನಾವಣೆ ಬರದಿರಲಿ ಎಂದು ಅವರು ಬಯಸುತ್ತಾರೆ.
ಈ ಪರಿಸ್ಥಿತಿಯನ್ನು ರಾಜ್ಯ ಬಿಜೆಪಿ ಎನ್‍ಕ್ಯಾಷ್ ಮಾಡಿಕೊಂಡು ಅಧಿಕಾರಕ್ಕೆ ಬರುವುದು ಸುಲಭ ಅನ್ನುವುದೇನೋ ನಿಜ.ಆದರೆ ಬಿಜೆಪಿಯ ವರಿಷ್ಟರ ಲೆಕ್ಕಾಚಾರ ಬೇರೆಯೇ ಇದ್ದಂತಿದೆ.ಸಾಧ್ಯವಾದರೆ ಅವರು ಮೈತ್ರಿಕೂಟ ಸರ್ಕಾರದಲ್ಲಿ ಬಿಕ್ಕಟ್ಟು ಉಲ್ಬಣವಾಗುವಂತೆ ನೋಡಿಕೊಂಡು ರಾಷ್ಟ್ರಪತಿ ಆಳ್ವಿಕೆ ಹೇರುತ್ತಾರೆ.
ಹಾಗೆಯೇ ರಾಜಸ್ತಾನ,ಮಧ್ಯಪ್ರದೇಶದಲ್ಲಿರುವ ಕಾಂಗ್ರೆಸ್ ಸರ್ಕಾರಗಳನ್ನೂ ಉರುಳಿಸಿ ನವೆಂಬರ್ ಇಲ್ಲವೇ ಡಿಸೆಂಬರ್ ವೇಳೆಗೆ ಕರ್ನಾಟಕವೂ ಸೇರಿದಂತೆ ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವಂತೆ ನೋಡಿಕೊಳ್ಳುತ್ತಾರೆ ಎಂಬುದು ಕಮಲ ಪಾಳೆಯದ ಹಿರಿಯ ನಾಯಕರೊಬ್ಬರ ಅಭಿಪ್ರಾಯ.ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರಮೋದಿ ಅವರು ನೀಡಿದ್ದ ಆಫರ್ ಅನ್ನು ಸಿಎಂ ಕುಮಾರಸ್ವಾಮಿ ಒಪ್ಪಿಕೊಂಡಿದ್ದರೆ ಮಾತುಕತೆಯಂತೆ,ಜೆಡಿಎಸ್-ಕಾಂಗ್ರೆಸ್ ಸರ್ಕಾರ ಉರುಳಿ ಜೆಡಿಎಸ್-ಬಿಜೆಪಿ ಸರ್ಕಾರ ರಚನೆಯಾಗುತ್ತಿತ್ತು.
ಹಾಗೆಯೇ ಯಡಿಯೂರಪ್ಪ ಸಿಎಂ ಆಗಿ,ಹೆಚ್.ಡಿ.ರೇವಣ್ಣ ಡಿ.ಸಿ.ಎಂ ಆಗಿ ಹಾಗೆಯೇ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗುತ್ತಿದ್ದರು.ಆದರೆ ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರಮೋದಿ ಅವರು ನೀಡಿದ ಆಫರ್ ಅನ್ನು ಒಪ್ಪದ ಕುಮಾರಸ್ವಾಮಿ,ದೇಶದಲ್ಲಿ ತೃತೀಯ ಶಕ್ತಿಗಳ ಬೆಂಬಲದೊಂದಿಗೆ ಯಾರೇ ಆದರೂ ಸರ್ಕಾರ ರಚಿಸುವ ಸ್ಥಿತಿ ಬರುತ್ತದೆ.ಆಗ ನಮ್ಮ ತಂದೆಯವರಿಗೆ(ದೇವೇಗೌಡ)ಪ್ರಧಾನಿ ಪಟ್ಟ ಸಿಗುವ ಲಕ್ಷಣಗಳಿವೆ.ಹೀಗಾಗಿ ನಾವು ನಿಮ್ಮ ಜತೆ ಬರುವುದಿಲ್ಲ ಎಂದು ನಿರಾಕರಿಸಿದ್ದರು.
ಆಗ ಪ್ರಧಾನಿ ನರೇಂದ್ರಮೋದಿ ಅವರು,ಓಹ್,ನಿಮ್ಮ ಪಕ್ಷ ಪ್ರಧಾನಿ ಸ್ಥಾನದ ನಿರೀಕ್ಷೆಯಲ್ಲಿದೆಯೇ?ಎಂದು ಕೌತುಕ ವ್ಯಕ್ತಪಡಿಸಿ ಬೀಳ್ಕೊಟ್ಟಿದ್ದರು.ಹೀಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಕೈಗೂಡಿಸಿ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಇಲ್ಲ.ಈಗ ಯಾರದಾದರೂ ಬೆಂಬಲ ಪಡೆದು ಸರ್ಕಾರ ರಚಿಸುವುದಕ್ಕಿಂತ ಕುಮಾರಸ್ವಾಮಿ ಸರ್ಕಾರದಲ್ಲಿ ಕಾಣಿಸಿಕೊಳ್ಳುವ ಬಿಕ್ಕಟ್ಟು ಸರ್ಕಾರದ ಪತನಕ್ಕೆ ಕಾರಣವಾಗುವುದು ಖಚಿತ.ಹೀಗಾಗಿ ಅದು ಪತನವಾಗುವವರೆಗೆ ಕಾಯ್ದು ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಬೇಕು.
ಆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಪ್ರಭಾವಿ ಶಾಸಕರಾಗಿದ್ದವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಧ್ಯಂತರ ಚುನಾವಣೆಗೆ ಟಿಕೆಟ್ ನೀಡಬೇಕು ಎಂಬ ಲೆಕ್ಕಾಚಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಲ್ಲಿದೆ.ಹೀಗಾಗಿ ಕರ್ನಾಟಕದ ಲೋಕಸಭಾ ಚುನಾವಣೆ ಫಲಿತಾಂಶ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ಡೋಲಾಯಮಾನಗೊಳಿಸಿದ್ದು ಮುಂದಿನ ದಿನಗಳಲ್ಲಿ ಅದು ಪತನವಾಗುವ ಸಾಧ್ಯತೆಗಳೇ ಹೆಚ್ಚು ಎಂಬುದು ಮೂಲಗಳ ಹೇಳಿಕೆ.