ಕೂಡ್ಲಿಗಿ:
ವಸತಿ ಯೋಜನೆಯಲ್ಲಿ ಬಡವರಿಗೆ ನೀಡುತ್ತಿರುವ ಮನೆಗಳ ಅವ್ಯವಹಾರ ಕುರಿತು ಅನೇಕ ದೂರುಗಳು ಬಂದಿವೆ. ಈ ಕಾರಣಕ್ಕೆ ವಸತಿ ವೀಕ್ಷಣೆ(ವಿಜಲ್)ಯ ಮೊಬೈಲ್ ಆ್ಯಫ್ ಬಿಡುಗಡೆ ಮಾಡಿದ್ದು, ಈ ಆ್ಯಫ್ ಮೂಲಕ ಫಲನುಭವಿ ಹಾಗೂ ಮನೆಗಳ ಪ್ರಗತಿ ಕುರಿತು ಜಿಪಿಎಸ್ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ್ ಗುಡಿ ಹೇಳಿದರು. ತಾಲ್ಲೂಕಿನ ವಿವಿಧ ವಸತಿ ಯೋಜನೆಗೆ ಸಂಬಂಧಿಸಿದಂತೆ ವಸತಿ ವೀಕ್ಷಣೆ ಆ್ಯಫ್ ಬಳಕೆ ಕುರಿತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಒಟ್ಟು 536 ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಅವುಗಳು ಯಾವ ಹಂತದಲ್ಲಿವೆ ಎನ್ನುವುದನ್ನು ಆ್ಯಫ್ನಲ್ಲಿ ದಾಖಲಿಸಬೇಕು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ವಸತಿ ಯೋಜನೆಯ ಫಲಾನುಭವಿಯನ್ನು ಜೊತೆಯಲ್ಲಿ ನಿಲ್ಲಿಸಿಕೊಂಡು ಪೋಟೋ ತೆಗೆಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಫಲಾನುಭವಿ ಗ್ರಾಮ ಸಭೆಯಲ್ಲಿ ಆಯ್ಕೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ನಂತರ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಆ್ಯಫ್ನಲ್ಲಿ ನಮೂದಿಸಬೇಕು. ನಂತರ ಅವರ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಆ್ಯಫ್ ಮುಖಾಂತರ ಅಫ್ ಲೋಡ್ ಮಾಡಬೇಕು. ಒಂದು ವೇಳೆ ಈ ಫಲಾನುಭವಿ ವಸತಿ ಯೋಜನೆಯಲ್ಲಿ ಮೊದಲೇ ಮನೆ ಪಡೆದಿದ್ದರೆ, ಆ್ಯಫ್ ಅಲ್ಲಿಗೆ ಸ್ಥಗಿತಗೊಳ್ಳುತ್ತದೆ. ನೀವು ಮಾಡಿದ ಜಿಪಿಎಸ್ನ ಎಲ್ಲಾ ಮಾಹಿತಿಗಳನ್ನು ನಿಮ್ಮ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪರಿಶೀಲಿಸಿ ಜಿಲ್ಲಾ ಪಂಚಾಯ್ತಿಗೆ ಕಳಿಸುತ್ತಾರೆ.
ಅಲ್ಲಿಂದ ವಸತಿ ನಿಗಮಕ್ಕೆ ಕಳಿಸಲಾಗುವುದು ಎಂದು ವಿವರಿಸಿದ ಅವರು, ಆ್ಯಫ್ ಬಳಕೆಯಿಂದ ಅನರ್ಹರಿಗೆ ವಸತಿ ಯೋಜನೆಯಲ್ಲಿ ಮನೆ ನೀಡುವುದು ತಪ್ಪಿಸಿದಂತಾಗುತ್ತದೆ. ಅದಕ್ಕಾಗಿ ಎಲ್ಲರು ಪ್ರಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ, ತಹಶೀಲ್ದಾರ್ ಎಸ್. ಮಹಾಬಲೇಶ್ವರ ಇದ್ದರು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯಗಾರದಲ್ಲಿ ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ