ಹಿರಿಯೂರು :
ಜವನಗೊಂಡನಹಳ್ಳಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಡ್ಯ ಜಿಲ್ಲೆಗೆ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಕಾಲೇಜನ್ನು ಜವಗೊಂಡನಹಳ್ಳಿಯಲ್ಲಿಯೇ ಉಳಿಸಿಕೊಳ್ಳಲು ಹೋರಾಟಕ್ಕೆ ಎಲ್ಲರು ಸಹಕರಿಸಬೇಕು ಎಂಬುದಾಗಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ವಿನಂತಿಸಿದರು.
ಈ ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳಿಂದ ಕೂಡಿದ್ದು, ಇಲ್ಲಿನ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುತ್ತಿದ್ದು, ಉತ್ತಮ ಫಲಿತಾಂಶ ಬರುತ್ತಿದೆ. ಈ ಭಾಗದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 60ಕ್ಕೂ ಹೆಚ್ಚು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪದವಿ ಶಿಕ್ಷಣ ಪಡೆದು, ತಮ್ಮ ಕನಸ್ಸನ್ನು ನನಸಾಗಿ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಚಾಲ್ತಿಯಲ್ಲಿರುವ ಬಿ.ಎ ಪದವಿ ಜೊತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ವಾಣಿಜ್ಯ ನಿಕಾಯದ ಕೋರ್ಸ್‍ಗೆ ಇಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ದಾಖಲಾತಿ ಹೊಂದಲಿದ್ದಾರೆ. ಅಲ್ಲದೆ 20ಕಿ.ಮೀ ವ್ಯಾಪ್ತಿಯಲ್ಲಿ ಬೇರೆ ಯಾವುದೇ ಪದವಿ ಕಾಲೇಜು ಇಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತದೆ.
ಈ ಗ್ರಾಮದಿಂದ ಬೇರೆ ಕಡೆ ಹೋಗಲು ಬಸ್ ಸೌಲಭ್ಯ ಇಲ್ಲದಿರುವುದರಿಂದ ಹೆಣ್ಣು ಮಕ್ಕಳು ಪದವಿ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳು ಹಾಗೂ ಜವಗೊಂಡನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಈ ಕಾಲೇಜನ್ನು ಇಲ್ಲಿಯೇ ಮುಂದುವರಿಸುವಂತೆ ಮನವಿ ಮಾಡಿರುವುದರಿಂದ ಈ ಕಾಲೇಜನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕು ಕಿತ್ತೂರು ಗ್ರಾಮಕ್ಕೆ ಸ್ಥಳಾಂತರಿಸಿರುವ ಆದೇಶವನ್ನು ರದ್ದುಪಡಿಸಿ ಇಲ್ಲಿಯೇ ಮುಂದುವರಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡರಿಗೆ ಮನವಿಪತ್ರ ಸಲ್ಲಿಸಿದ್ದಾರೆ.