ಬೆಂಗಳೂರು:
ರಾಜ್ಯದಲ್ಲಿ ಕೊರೊನಾ ಮತ್ತು ಓಮಿಕ್ರಾನ್ ರೂಪಾಂತರಿ ತಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇದು ಹೀಗೆಯೆ ಮುಂದುವರೆದರೆ ಸೋಂಕು ತಡೆಗೆ ರಾಜ್ಯಾದ್ಯಂತ ಲಾಕ್‍ಡೌನ್ ಮಾಡುವುದು ಅನಿವಾರ್ಯವಾಗಲಿದೆ ಎಂದು ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟಿದೆ.
ರಾಜ್ಯದಲ್ಲಿ ಶನಿವಾರದವರೆಗೂ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ. 0.86 ರಷ್ಟಿದೆ. ಈಗ 3ನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆಯ ಸಂದೇಶ ರವಾನಿಸಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕೆ ಏರಿಕೆಯಾದರೆ, ಲಾಕ್‍ಡೌನ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ.
ಸೋಂಕಿನ ತೀವ್ರತೆಗೆ ಆಸ್ಪತ್ರೆಗಳಲ್ಲಿ ದಾಖಲಾಗಿ ಶೇ. 40 ರಷ್ಟು ಹಾಸಿಗೆಗಳು ಭರ್ತಿಯಾದರೆ ಲಾಕ್‍ಡೌನ್ ಮಾಡಬೇಕಾಗುತ್ತದೆ ಎಂದು ತಾಂತ್ರಿಕಾ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ರಾಜ್ಯದಲ್ಲಿ ಸೋಂಕು ತಡೆಯಲು ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಬೇಕು. ಮಾಸ್ಕ್, ಸಾಮಾಜಿಕ ಅಂತರ, ಜನದಟ್ಟಣೆ ಪ್ರದೇಶಗಳಲ್ಲಿ ಪರೀಕ್ಷೆ ಚುರುಕುಗೊಳಿಸುವಂತೆಯೂ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ.
ಮತ್ತೊಂದೆಡೆ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮತ್ತೆ ರಾತ್ರಿ ಕರ್ಫ್ಯೂ ಮುಂದುವರೆಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ಆಯುಕ್ತ ರಣದೀಪ್, ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಮುಂದುವರೆಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ ಈ ತಿಂಗಳ ಏಳರವರೆಗೆ ರಾತ್ರಿ ಕರ್ಫ್ಯೂಜಾರಿಯಲ್ಲಿದೆ. 6 ತಿಂಗಳ ಬಳಿಕ ಶನಿವಾರ ರಾಜ್ಯದಲ್ಲಿ 1033 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಒಟ್ಟು 7876 ಸೋಂಕಿನ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ ಬೆಂಗಳೂರಿನಲ್ಲಿ 46 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿದೆ. ಈ ಮೂಲಕ ಓಮಿಕ್ರಾನ್ ಸೋಂಕಿತರ ಸಂಖ್ಯೆ 66ಕ್ಕೇರಿದೆ.
ವಿದೇಶಿ ಪ್ರಯಾಣಿಕರಿಗೆ ಸೋಂಕು ತಗುಲುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ಚುರುಕುಗೊಳಿಸಲಾಗಿದೆ. ಇದುವರೆಗೆ ವಿದೇಶದಿಂದ ಬಂದವರಲ್ಲಿ 106 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇಂಗ್ಲೆಂಡ್ ಮತ್ತು ಫ್ರಾನ್ಸ್‍ನಿಂದ ಬಂದ ಪ್ರಯಾಣಿಕರಿಗೆ ಸೋಂಕು ತಗುಲಿದೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
3ನೇ ಅಲೆ ಭೀತಿ :
ರಾಜ್ಯದಲ್ಲೂ 3ನೇ ಅಲೆ ಭೀತಿ ಎದುರಾಗಿದ್ದು, ಫೆಬ್ರ್ರುವರಿ ತಿಂಗಳಿನಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಲಿದೆ ಎಂದು ತಜ್ಞರು ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ ಪ್ರತಿನಿತ್ಯ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಿ 3ನೇ ಅಲೆಯ ಸುಳಿವು ನೀಡಿದ್ದು, ದೆಹಲಿ ಮಾದರಿಂಲ್ಲಿ ಕ್ರಮಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದಾರೆ.
ಡೆಲ್ಟಾ ರೂಪಾಂತರಿ ಮೂಲಕ 2ನೇ ಅಲೆ ಕಾಣಿಸಿಕೊಂಡ ವೇಳೆ ದೇಶಾದ್ಯಂತ ಅಪಾರ ಸಾವು-ನೋವು ಸಂಭವಿಸಿತ್ತು. ಇದು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ತಜ್ಞರು ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿರುವ ವಸತಿ ಶಾಲೆ, ಹಾಸ್ಟೆಲ್, ಅಪಾರ್ಟ್‍ಮೆಂಟ್, ಮಾಲ್ ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ನಿಯಮ ಪಾಲಿಸಬೇಕು. ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು, ಕ್ಲಸ್ಟರ್‍ಗಳಿಂದ ಶೇ. 30 ರಷ್ಟು ಎಲ್ಲ ಮಾದರಿಗಳನ್ನು ಕಡ್ಡಾಯವಾಗಿ ಜಿನೋಮಿಕ್ ಸೀಕ್ವೆನ್ಸಿಂಗ್‍ಗೆ ಕಳುಹಿಸಬೇಕೆಂದು ತಜ್ಞರು ಶಿಫಾರಸ್ಸು ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
