ಬ್ಯಾಡಗಿ:
ಮಾಜಿ ಪುರಸಭಾ ಅಧ್ಯಕ್ಷ ಎಸ್.ಆರ್.ಪಾಟೀಲ ಅವರಿಗೆ ಪಟ್ಟಣದ ಸಮಗ್ರ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೇ ಸರಕಾರದ ಪುಗಸಟ್ಟೆ ಜಾಗೆಯಿಂದ ಮೊದಲು ಹೊರ ಬಂದು ಪುರಸಭೆಯ ಆದಾಯಕ್ಕೆ ಆದ್ಯತೆ ನೀಡಲಿ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ವ್ಯಂಗ್ಯವಾಡಿದರು.
ಅವರು ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಪುರಸಭೆಯ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗೆಯನ್ನು ಲೀಜ್ ಆಧಾರದ ಮೇಲೆ ಕಡಿಮೆ ದರದಲ್ಲಿ ಪಡೆದು ಮನೆ ನಿರ್ಮಿಸಿಕೊಂಡು ಈಗ ತಮ್ಮದೇ ಸ್ವಂತ ಜಾಗೆ ಎಂಬುವಂತೆ ವರ್ತಿಸುತ್ತಿರುವುದು ಯಾವ ಪುರುಷಾರ್ಥ.!! ಎಂದು ಪ್ರಶ್ನಿಸಿದರಲ್ಲದೇ ಈಗಾಗಲೇ ಅಲ್ಲಿ ವಾಸವಾಗಿರುವ ಜನರಿಗೆ ಅದೇ ಜಾಗೆಯನ್ನು ಸರಕಾರದಿಂದ ನಿರ್ಧಿಷ್ಟ ಪಡಿಸಿದ ಒಂದು ದರದಲ್ಲಿ ನೀಡಲು ಮುಂದಾದ ಸಂದರ್ಭದಲ್ಲಿ ಅದಕ್ಕೂ ಸಹ ಹಸ್ತಕ್ಷೇಪ ಮಾಡಿ ಕಡತ ಮೂಲೆ ಸೇರುವಂತೆ ಮಾಡಿದ್ದು ಯಾರೆಂಬುದನ್ನು ತಾವೇ ಪ್ರಶ್ನಿಸಿಕೊಳ್ಳಬೇಕು ಎಂದರು.
ಉಚಿತ ನೋಂದಣಿ: ಹಳೆ ಮೆಣಿಸಿನಕಾಯಿ ಪೇಟೆಯಲ್ಲಿ ಬರುವ ಸುತ್ತಮುತ್ತಲಿನ ಪ್ರದೇಶ ದೇವರಗುಡ್ಡ ದೇವಸ್ಥಾನದ ವ್ಯಾಪ್ತಿಗೆ ಸೇರಿದ್ದು, ಈಗಾಗಲೇ ಆ ಸ್ಥಳದಲ್ಲಿ ಹಲವಾರು ವರ್ಷಗಳಿಂದ ಜನರು ವಾಸಿಸುತ್ತಲಿದ್ದು, ಅವರಿಗೂ ಸಹ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ದರವನ್ನು ನಿಗಧಿಪಡಿಸಿದೆ. ಅದರಂತೆ ಅಲ್ಲಿನ ನಿವಾಸಿಗಳು ಆ ಜಾಗೆಯನ್ನು ಖರೀಧಿಸಲು ಮುಂದಾದರೇ ತಾವು ಉಚಿತವಾಗಿ ನೋಂದಣಿ ಮಾಡಿಸುವುದಾಗಿ ತಿಳಿಸಿದ್ದೇವೆ, ತಾವು ಈಗಲೂ ಸಹ ಆ ಮಾತಿಗೆ ಬದ್ದರಾಗಿದ್ದು, ಜನರು ಆ ಜಾಗೆಯ ಖರೀಧಿಗೆ ಮುಂದೆ ಬಂದರೇ ಉಚಿತ ನೋಂದಣಿ ಮಾಡಿಸುವುದಾಗಿ ಹೇಳಿದರು.
ಮಾಜಿ ಪುರಸಭಾ ಅಧ್ಯಕ್ಷ ಬಸವಣ್ಣೆಪ್ಪ ಛತ್ರದ ಮಾತನಾಡಿ ತಾವು ಕಳೆದ ಎರಡು ವರ್ಷದ ಅವಧಿಯಲ್ಲಿ ಪುರಸಭೆಯ ಅಧ್ಯಕ್ಷರಾಗಿ ಜನಪರ ಕಾರ್ಯಕ್ಕೆ ಮುಂದಾಗಿದ್ದೇವೆ. ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಸರಕಾರಿ ಆಸ್ತಿಯನ್ನು ಯಾರ್ಯಾರೋ ಹೆಸರಿನಲ್ಲಿ ನುಂಗಿ ಹಾಕಿಲ್ಲ. ಆದರೇ ಈ ಹಿಂದೆ ಪುರಸಭೆಯ ಅಧ್ಯಕ್ಷರಾಗಿದ್ದ ಎಸ್.ಆರ್.ಪಾಟೀಲರು ಕಳೆದ 35 ವರ್ಷಗಳ ಹಿಂದೆ ಪುರಸಭೆಯ 14 ಗುಂಟೆ ಸ್ಥಳವನ್ನು ತಮ್ಮ ಸಂಬಧಿಯೋರ್ವರ ಕ್ರೀಡಾ ಸಂಸ್ಥೆಗೆ ಕೇವಲ 4800 ರೂ.ಗಳಿಗೆ ಮಂಜೂರಿ ಮಾಡಿಸಿದ್ದು, ಆದರೇ ಆ ಸ್ಥಳವು ಕ್ರೀಡಾ ಚಟುವಟಿಕೆಗಳಿಗೆ ಬಳಕೆಯಾಗದೇ ಅವರ ಸಂಬಂಧಿಯೋರ್ವರ ಹೆಸರಿನಲ್ಲಿಯೇ ನೋಂದಣಿಯಾಗಿ ಮುಂದೆ ಕೆಎಸ್‍ಎಫ್‍ಸಿಯಿಂದ 32 ಲಕ್ಷ ರೂ.ಗಳ ಸಾಲವನ್ನು ಪಡೆದು ದುರುಪಯೋಗ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹಲವಾರು ಕ್ರೀಡಾಭಿಮಾನಿಗಳು ವಿರೋಧ ವ್ಯಕ್ತ ಪಡಿಸಿದ್ದರೂ ಸಹ ಅದಕ್ಕೆ ಸೊಪ್ಪು ಹಾಕದೇ ಮುಂದೆ ಆ ಸ್ಥಳವನ್ನು 63 ಲಕ್ಷ ರೂ.ಗಳಿಗೆ ಮಾರಾಟ ಮಾಡಿರುವುದು ಕಂಡು ಬಂದಿದ್ದು, ಪಟ್ಟಣದ ಕಾಳಜಿ ಬಗ್ಗೆ ಮಾತನಾಡುವ ತಾವು ಪುರಸಭೆಯ ಸರಕಾರಿ ಆಸ್ತಿ ನುಂಗಿ ಹಾಕುವ ಮೂಲಕ ಪುರಸಭೆಯ ಆದಾಯಕ್ಕೆ ನಷ್ಟವನ್ನುಂಟು ಮಾಡಿದ್ದನ್ನು ಮರೆತಂತಿದೆ ಎಂದರು.
ಪುರಸಭಾ ಮಾಜಿ ಸದಸ್ಯ ಸುರೇಶ ಆಸಾದಿ ಮಾತನಾಡಿ ರಾಮನಕಟ್ಟೆ ಕೆರೆ ಸ್ಥಳವನ್ನು ಅತೀ ಕಡಿಮೆ ದರದಲ್ಲಿ ಕಾಂಗ್ರೆಸ್ ಭವನಕ್ಕೆ ಮಂಜೂರಿ ಮಾಡಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಎಸ್.ಆರ್.ಪಾಟೀಲರು ಅದೇ ಕಾಂಗ್ರೆಸ್ ಭವನಕ್ಕೆ ಸುಭಾಶನಗರದಲ್ಲಿ ಜಾಗೆಯನ್ನು ಮಂಜೂರಿ ಮಾಡಿಸಿಕೊಂಡು ಅದನ್ನು ದುರಪಯೋಗ ಮಾಡಿಕೊಂಡಿದ್ದನ್ನು ಮರೆತು ಹೋಗಿದ್ದಾರೆ. ಯಾವುದೇ ಸಂಘ ಸಂಸ್ಥೆಗಳಿಗೆ ಹಾಗೂ ಪಕ್ಷಗಳಿಗೆ ಸರಕಾರಿ ಜಾಗೆಯನ್ನು ನೀಡುವ ಸಂದರ್ಭದಲ್ಲಿ ನಿಯಮಗಳನ್ನು ಅನುಸರಿಸುತ್ತಾರೆ.
ಆದರೇ ಕಾಂಗ್ರೆಸ್ ಭವನಕ್ಕೆ ರಾಮನಕಟ್ಟೆ ಕೆರೆಯ ಸ್ಥಳವನ್ನು ನೀಡುವಾಗ ಎಲ್ಲ ಮಾನದಂಡಗಳನ್ನು ಗಾಳಿಗೆ ತೂರಿ ಕೇವಲ 1.5 ಲಕ್ಷಕ್ಕೇ 44 ಗುಂಟೆ ಸ್ಥಳವನ್ನು ನೀಡಲಾಗಿದೆ. ಅದೇ ಸಂದರ್ಭದಲ್ಲಿ ರಾಮನಕಟ್ಟೆಯ ಕೆರೆಯ ಇನ್ನೂಳಿದ 2 ಎಕರೇ ಸ್ಥಳವನ್ನು ಸ್ಥಳೀಯ ಎಪಿಎಂಸಿಗೆ 22 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಇಲ್ಲಿ ಅಂದಾಜು ಎಕರೇಗೆ 11 ಲಕ್ಷ ಮೊತ್ತ ನಿಗಧಿಯಾಗಿದೆ. ಆದರೇ ಕಾಂಗ್ರೆಸ್ ಪಕ್ಷಕ್ಕೆ ಸ್ಥಳವನ್ನು ನೀಡುವಾಗ ನಿಗಧಿಗೊಂಡ ದರಕ್ಕಿಂತಲೂ ಶೇ.0.10 ರಷ್ಟು ದರಕ್ಕೆ ನೀಡಿರುವುದು ಯಾವ ಮಾನದಂಡದ ಆಧಾರದ ಮೇಲೆ ಎಂದರಲ್ಲದೇ ಇದನ್ನು ಎಸ್.ಆರ್.ಪಾಟೀಲರೇ ಹೇಗೆ ? ಸಮರ್ಥಿಸಿಕೊಳ್ಳುವಿರಿ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಮಾಜಿ ಪುರಸಭಾ ಅಧ್ಯಕ್ಷರಾದ ಮುರಿಗೆಪ್ಪ ಶೆಟ್ಟರ, ರಾಮಣ್ಣ ಕೋಡಿಹಳ್ಳಿ, ಸುರೇಶ ಯತ್ನಳ್ಳಿ, ವಿಜಯಕುಮಾರ ಮಾಳಗಿ, ಸುರೇಶ ಉದ್ಯೋಗಣ್ಣನವರ, ರಾಮಣ್ಣ ಉಕ್ಕುಂದ, ಪ್ರಶಾಂತ ಯಾದವಾಡ, ಬಸವರಾಜ ಹಂಜಿ, ಸುರೇಶ ಕಳ್ಯಾಳ, ಹೊನ್ನೂರಪ್ಪ ಕಾಡಸಾಲಿ ಸೇರಿದಂತೆ ಇನ್ನಿತರರಿದ್ದರು.