ತುಮಕೂರು:
ವಿಶೇಷ ವರದಿ:-ಸಾ.ಚಿ.ರಾಜಕುಮಾರ
ತುಮಕೂರು ಮಹಾನಗರ ಪಾಲಿಕೆಯ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಲಕ್ಷಣಗಳು ಕಂಡುಬರುತ್ತಿವೆ. ಮೇಲ್ನೋಟಕ್ಕೆ ಮೇಯರ್ ವರ್ಸಸ್ ಕಮೀಷನರ್ ಎಂಬಂತೆ ಕಂಡುಬಂದರೂ ನೌಕರಶಾಹಿ ಮತ್ತು ಜನಪ್ರತಿನಿಧಿಗಳ ನಡುವಿನ ಮುಸುಕಿನ ಗುದ್ದಾಟ ಇದೆ. ಉತ್ತಮ ಆಡಳಿತ ನೀಡಬೇಕಾದ ಮಹಾನಗರ ಪಾಲಿಕೆಯಲ್ಲಿ ಇಂತಹ ಅನಿರೀಕ್ಷಿತ ತಿರುವುಗಳಿಂದಾಗಿ ಆಡಳಿತದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳೇ ಹೆಚ್ಚಿವೆ.
ತುಮಕೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ನೂತನ ಕಾರ್ಪೋರೇಟರ್‍ಗಳು ಅಧಿಕಾರದ ಚುಕ್ಕಾಣಿ ಹಿಡಿದು ವರ್ಷವಾಗುತ್ತಾ ಬಂದಿದೆ. 2018ರ ಆಗಸ್ಟ್ 31 ರಂದು ನಡೆದ ಚುನಾವಣೆಗೆ 3.9.2018 ರಂದು ಫಲಿತಾಂಶ ಹೊರಬಿದ್ದಿತ್ತು. ಹಲವು ಸದಸ್ಯರು ಇದೇ ಬಾರಿಗೆ ಪ್ರಥಮವಾಗಿ ಆಯ್ಕೆಯಾದರು. ನಂತರದ ದಿನಗಳಲ್ಲಿ ಮೇಯರ್, ಉಪ ಮೇಯರ್ ಚುನಾವಣೆ ವಿಳಂಬದಿಂದಾಗಿ ಸಭೆಗಳೇ ನಡೆಯಲಿಲ್ಲ.
ಆನಂತರ 2019ರ ಮಾರ್ಚ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಚುನಾವಣೆ ಮುಗಿದು ಮೂರು ತಿಂಗಳಾಗುತ್ತಾ ಬಂದಿದೆ. ತುಮಕೂರು ನಗರ ಪಾಲಿಕೆಯ ಆಡಳಿತ ಯಂತ್ರ ಇನ್ನೂ ಸುಸ್ಥಿತಿಗೆ ಬಂದಂತೆ ಕಾಣುತ್ತಿಲ್ಲ. ಒಂದು ಕಡೆ ಮೇಯರ್ ಒಳಗೊಂಡ ಜನಪ್ರತಿನಿಧಿಗಳ ವರ್ಗ ಮತ್ತೊಂದು ಕಡೆ ಪಾಲಿಕೆಯ ಕಮೀಷನರ್ ಕಾರ್ಯ. ಇವರಿಬ್ಬರ ಕಾರ್ಯವೈಖರಿ ಸಾಮಾಜಿಕವಾಗಿ ಬಹಿರಂಗಗೊಂಡಿದ್ದು ಹೊಂದಾಣಿಕೆಯ ಆಡಳಿತದ ಮನಸ್ಥಿತಿ ಕಂಡುಬರುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಅಪ್ಪಾ ಮಕ್ಕಳ ಜಗಳದಲ್ಲಿ ಕೂಸು ಬಡವಾಯಿತು ಎಂಬಂತಹ ಪರಿಸ್ಥಿತಿ ತುಮಕೂರು ನಗರಕ್ಕೆ ಬರಲಿದೆ.
ನಗರ ಪಾಲಿಕೆಗೆ ಐ.ಎ.ಎಸ್. ಅಧಿಕಾರಿಯೊಬ್ಬರು ಕಮೀಷನರ್ ಆಗಿ ಬಂದು ಆಡಳಿತ ಸ್ವಚ್ಛತೆಗೆ ಗಮನ ಹರಿಸಿದರು. ಕ್ರಿಯಾಶೀಲರಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡರು. ನಗರಕ್ಕೆ ಇಂತಹ ಅಧಿಕಾರಿಯೊಬ್ಬರು ಬೇಕಿತ್ತು ಎಂಬ ಮಾತುಗಳು ಕೇಳಿಬಂದವು. ತಿಂಗಳುಗಳು ಉರುಳಿದಂತೆ ನಗರ ಪಾಲಿಕೆಯೊಳಗೆ ಮುಸುಕಿನ ಗುದ್ದಾಟ ಆರಂಭವಾಯಿತು. ಕಮೀಷನರ್ ನಮ್ಮ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ, ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಮೇಯರ್ ಬಹಿರಂಗ ಹೇಳಿಕೆ ನೀಡಿದರು.
ಮೇಯರ್ ಹಾಗೂ ಕಮೀಷನರ್ ನಡುವಿನ ಶೀತಲ ಸಮರವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಪ್ರಯತ್ನಗಳೇ ನಡೆಯಲಿಲ್ಲ. ಕಾನೂನು ಕಟ್ಟಳೆ ಮುಂದಿಟ್ಟುಕೊಂಡು ಕಮೀಷನರ್ ತನ್ನದೇ ಆದ ಕಾರ್ಯವೈಖರಿಯಲ್ಲಿ ಮುಳುಗಿದ್ದಾರೆ. ಪಾಲಿಕೆಯ ಮುಖ್ಯಸ್ಥರಾಗಿ ನನ್ನ ಮಾತುಗಳಿಗೆ ಬೆಲೆ ಇಲ್ಲವೆ ಎಂದು ಮೇಯರ್ ಗುಡುಗಿದ್ದಾರೆ.
ಸ್ಮಾರ್ಟ್‍ಸಿಟಿಯಾಗಿ ತುಮಕೂರು ಬೆಳೆಯುತ್ತಿದೆ. ಒಂದು ಕಡೆ ಕೇಂದ್ರ ಹಾಗೂ ರಾಜ್ಯದಿಂದ ಸ್ಮಾರ್ಟ್‍ಸಿಟಿಗಾಗಿ ಹರಿದು ಬರುತ್ತಿರುವ ಕೋಟ್ಯಂತರ ರೂ. ಅನುದಾನ ಮತ್ತೊಂದೆಡೆ ನಗರ ಪಾಲಿಕೆಗಾಗಿಯೇ ಬರುವ ಅನುದಾನ. ಒಂದು ನಗರ ಏನೆಲ್ಲಾ ಅಭಿವೃದ್ಧಿ ಹೊಂದಬಹುದೋ ಅಷ್ಟೂ ಮಾಡಲು ಈಗ ಅವಕಾಶವಿದೆ. ಅನುದಾನದ ಸದ್ಬಳಕೆಯಾಗಬೇಕಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಂಡು ಈ ನಗರ ಒಂದು ಸುಸಜ್ಜಿತ ನಗರವಾಗಲು ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳ ನಡುವೆ ಪರಸ್ಪರ ಸಹಕಾರ ಇರಬೇಕು. ಕಾಮಗಾರಿಗಳ ಬಗ್ಗೆ ಚರ್ಚೆಯಾಗಬೇಕು. ಲೋಪದೋಷಗಳ ಬಗ್ಗೆ ಮಾತನಾಡಬೇಕು. ಆದರೆ ಅಂತಹ ಪರಿಸ್ಥಿತಿಯೇ ಇಲ್ಲವಾದರೆ ಕೇಳುವುದಾದರೂ ಯಾರನ್ನು?
ನಗರ ಸುಸಜ್ಜಿತವಾಗಿ ರೂಪುಗೊಳ್ಳಬೇಕಾದರೆ ಅಲ್ಲಿನ ಸ್ಥಳೀಯ ಆಡಳಿತದ ಕಾರ್ಯವೈಖರಿ ಮೇಲೆ ಅವಲಂಬಿತವಾಗಿರುತ್ತದೆ. ನಗರದ ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ತೆರಿಗೆ ಸಂಗ್ರಹ ಇವೆಲ್ಲವೂ ಬಹಳ ಮುಖ್ಯವಾದ ಅಂಶಗಳು. ಸ್ಥಳೀಯ ಆಡಳಿತ ಎಷ್ಟರ ಮಟ್ಟಿಗೆ ಚುರುಕಾಗಿರುತ್ತದೆಯೋ ಅಷ್ಟೂ ನಗರ ವೇಗವಾಗಿ ಬೆಳೆಯುತ್ತದೆ. ಮೂಲಭೂತ ಸೌಕರ್ಯಗಳು ಜನತೆಗೆ ತಲುಪುತ್ತವೆ.
ಆಡಳಿತ ಚುರುಕಾಗಬೇಕಾದರೆ ಅಲ್ಲಿನ ಮನಸ್ಸುಗಳು ಸಕಾರಾತ್ಮಕವಾಗಿರಬೇಕು. ಅಭಿವೃದ್ಧಿಯ ಕಾಳಜಿ ಹೊಂದಬೇಕು. ಕಡತಗಳು ತ್ವರಿತವಾಗಿ ವಿಲೇವಾರಿಯಾಗಬೇಕು. ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು. ಮನಸ್ಸುಗಳು ಕಹಿಯಾದಾಗ, ಒಬ್ಬರ ಮೇಲೊಬ್ಬರು ಈಷ್ರ್ಯೆ ಸಾಧಿಸುತ್ತಾ ಹೋದರೆ ಕಡತಗಳ ವಿಲೇವಾರಿಗೆ ಮುಕ್ತಿ ಹೇಗೆ ಸಿಕ್ಕೀತು?
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಾರ್ಯಬಾಹುಳ್ಯವನ್ನು ಗಮನಿಸಿದರೆ ಇಬ್ಬರಿಗೂ ತಮ್ಮದೇ ಆದ ಹಕ್ಕು ಮತ್ತು ಕರ್ತವ್ಯಗಳಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಪ್ರತ್ಯೇಕ ಅಂಗಗಳಾಗಿದ್ದರೂ ಸಮನ್ವಯತೆಯ ತತ್ವದ ಅಡಿಯಲ್ಲಿ ಕೆಲಸ ಮಾಡುತ್ತಾ ಬಂದಿವೆ. ನಗರಸಭೆ ಅಥವಾ ನಗರ ಪಾಲಿಕೆ ಆಡಳಿತದಲ್ಲಿ ಮೇಯರ್ ಅವರಿಗೆ ಒಂದು ಗೌರವದ ಸ್ಥಾನವಿದೆ. ಪ್ರಥಮ ಪ್ರಜೆ ಎಂದೂ ಕರೆಯಲಾಗುತ್ತದೆ. ಅವರದ್ದೇ ಆದ ಶಿಷ್ಟಾಚಾರವೂ ಇದೆ. ಹೀಗಾಗಿ ಎಲ್ಲರಿಂದಲೂ ಗೌರವಕ್ಕೆ ಒಳಗಾಗುವ ವ್ಯಕ್ತಿಯಾಗಿ ಮೇಯರ್ ನಿಲ್ಲುತ್ತಾರೆ.
ವಿವಿಧ ವಾರ್ಡ್‍ಗಳಿಂದ ಚುನಾಯಿತರಾಗಿ ಆಯ್ಕೆಯಾಗುವ ಕಾರ್ಪೋರೇಟರ್‍ಗಳು ತಮ್ಮೊಳಗಿನ ಒಬ್ಬರನ್ನು ಮೇಯರ್ ಆಗಿ ಆಯ್ಕೆ ಮಾಡುತ್ತಾರೆ. ಮೇಯರ್ ಜೊತೆಯಲ್ಲಿ ಕಾರ್ಪೋರೇಟರ್‍ಗಳು ಸೇರಿಯೇ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ತೀರ್ಮಾನಗಳನ್ನು ಕೈಗೊಳ್ಳುವುದಕ್ಕಾಗಿಯೇ ಸಭೆಗಳು ನಡೆಯುತ್ತವೆ. ವಾರ್ಡ್‍ಗಳಿಗೆ ಸಂಬಂಧಿಸಿದಂತೆ ವಾರ್ಡ್ ಸಭೆಗಳು ಜರುಗುತ್ತವೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸ್ಥಾಯಿ ಸಮಿತಿಗಳಿದ್ದು, ಅವೆಲ್ಲದಕ್ಕೂ ಒಬ್ಬೊಬ್ಬ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ.
ಮೇಯರ್, ಕಾರ್ಪೋರೇಟರ್ ಇವರೆಲ್ಲರೂ ಜನರಿಂದ ಆಯ್ಕೆಯಾಗುವುದರಿಂದ ವಾರ್ಡ್‍ವಾರು ಸಮಸ್ಯೆಗಳು ಎದುರಾದಾಗ ಜನತೆಗೆ ಇವರೆ ಉತ್ತರ ನೀಡಬೇಕು. ಸಮಸ್ಯೆಗಳು ಎದುರಾದಾಗ ಸಾರ್ವಜನಿಕರು ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವುದಿಲ್ಲ. ತಕ್ಷಣಕ್ಕೆ ಸಿಗುವುದು ಜನಪ್ರತಿನಿಧಿಗಳೇ. ಹೀಗಾಗಿ ಯಾರು ಹೆಚ್ಚಾಗಿ ಸಾರ್ವಜನಿಕರಿಗೆ ಸ್ಪಂದಿಸುತ್ತಾರೋ… ಕೆಲಸ ಮಾಡಿಸುತ್ತಾರೋ ಅಂತಹವರು ಜನಸಾಮಾನ್ಯರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತಾರೆ. ಅವರನ್ನು ಗೌರವಿಸುತ್ತಾರೆ.
ಜನಪ್ರತಿನಿಧಿಗಳು ಏನೇ ನಿರ್ಣಯ ಕೈಗೊಂಡರೂ ಅದು ಜಾರಿಯಾಗಬೇಕಾಗಿರುವುದು ಅಧಿಕಾರಿಶಾಹಿಯಿಂದ. ನಗರ ಪಾಲಿಕೆಯ ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿ ವರ್ಗಕ್ಕೆ ಕಮೀಷನರ್ ಸುಪ್ರೀಂ. ಅವರ ಕೈಕೆಳಗೆ ಇತರೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಸರ್ಕಾರದ ಆದೇಶಗಳನ್ನು ಪಾಲನೆ ಮಾಡುವುದು, ಸಭೆಗಳನ್ನು ನಿಗದಿಗೊಳಿಸುವುದು, ಸಭೆಯಲ್ಲಿನ ತೀರ್ಮಾನಗಳನ್ನು ಜಾರಿಗೊಳಿಸುವುದು, ಕಂದಾಯ ಸಂಗ್ರಹ ಇತ್ಯಾದಿ ವಿಷಯಗಳಲ್ಲಿ ಬಹುದೊಡ್ಡ ಜವಾಬ್ದಾರಿ ಈ ಅಧಿಕಾರಿಯ ಮೇಲಿರುತ್ತದೆ. ಸರ್ಕಾರಿ ಆಡಳಿತ ಯಂತ್ರದಲ್ಲಿ ಏನಾದರೂ ಏರುಪೇರುಗಳಾದರೆ ಕಮೀಷನರ್ ಅದಕ್ಕೆ ಉತ್ತರ ಕೊಡಬೇಕು. ಅಂತಹ ಜವಾಬ್ದಾರಿ ಮತ್ತು ಹೊಣೆಗಾರಿಕೆಗಳು ಇರುತ್ತವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿ ಸಂಘರ್ಷಕ್ಕೆ ಒಳಗಾಗುವ ಅನೇಕ ಸಂದರ್ಭಗಳನ್ನು ನಾವು ಕಂಡಿದ್ದೇವೆ. ಅದರಿಂದ ಒಟ್ಟಾರೆ ವ್ಯವಸ್ಥೆಗೆ ಹಾನಿಯೇ ಹೊರತು ಯಾರಿಗೂ ಅನುಕೂಲವಿಲ್ಲ. ಕೆಲವೊಮ್ಮೆ ಜನಪ್ರತಿನಿಧಿಗಳ ಮಾತಿಗೆ ಅಧಿಕಾರಿಗಳು ಗೌರವ ಕೊಡಬೇಕಾಗುತ್ತದೆ. ಅವರ ಕಚೇರಿಗಳಿಗೆ ಹೋಗಬೇಕಾಗುತ್ತದೆ. ಮೇಯರ್ ಕಚೇರಿಯಲ್ಲಿ ಮಹಿಳಾ ಕಾರ್ಪೋರೇಟರ್‍ಗಳ ಪತಿಯಂದಿರು, ಇತರೆ ವ್ಯಕ್ತಿಗಳು ಕುಳಿತಿರುತ್ತಾರೆ. ಅಲ್ಲಿಗೆ ತೆರಳಿದರೆ ಅವಮಾನವಾಗುತ್ತದೆ ಎಂಬುದು ಕಮೀಷನರ್ ದೃಷ್ಟಿಕೋನದಲ್ಲಿ ಸರಿ ಇರಬಹುದು. ಆದರೆ ಪ್ರಜಾತಂತ್ರ ವ್ಯವಸ್ಥೆ ಇದನ್ನು ಒಪ್ಪದು.
ಕಮೀಷನರ್ ಮೇಯರ್ ಕೊಠಡಿಗೆ ಬಂದು ಹೋಗುವುದು, ಅವರ ಜೊತೆ ಚರ್ಚಿಸುವುದಕ್ಕೆ ಯಾವ ಅಡ್ಡಿಗಳೂ ಇಲ್ಲ. ಆದರೆ ಅಲ್ಲಿನ ಪರಿಸರ ಅವರಿಗೆ ಇಷ್ಟವಾಗದೇ ಇರಬಹುದು. ಆಡಳಿತದ ಸುಗಮ ನಿರ್ವಹಣೆಗೆ ನಾನಾ… ನೀನಾ? ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅಧಿಕಾರ ಚಲಾಯಿಸುವುದಕ್ಕಿಂತ ಸಮನ್ವಯತೆ ದಾರಿ ಕಂಡುಕೊಳ್ಳುವ ಅಗತ್ಯವಿದೆ. ಜನಪ್ರತಿನಿಧಿಗಳಿರಲಿ, ಅಧಿಕಾರಿಗಳಿರಲಿ ಎಲ್ಲರೂ ಜನಸೇವಕರೇ ಆಗಿರುತ್ತಾರೆ.
ಅಷ್ಟು ಅರಿತುಕೊಂಡರೆ ಇಲ್ಲಿ ಯಾವ ತಾಪತ್ರಯವೂ ಬಾರದು.ಗ್ರಾಮ ಪಂಚಾಯತಿಯಿಂದ ಹಿಡಿದು ನಗರ ಸ್ಥಳೀಯ ಸಂಸ್ಥೆಗಳ ಆಡಳಿತದ ಎಲ್ಲಾ ಆಡಳಿತದಲ್ಲೂ ಪತ್ನಿಯರ ಪರವಾಗಿ ಪತಿಯಂದಿರೇ ದರ್ಬಾರು ನಡೆಸುತ್ತಾ ಬಂದಿದ್ದಾರೆ. ಹಿಂದೆಲ್ಲ ತಮ್ಮ ಪತ್ನಿಯರ ಕುರ್ಚಿಯಲ್ಲಿ ಪತಿಯರೇ ಕುಳಿತಿದ್ದ ಉದಾಹರಣೆಗಳೂ ಇವೆ. ಆನಂತರ ಕಾಲ ಬದಲಾದಂತೆ ಪತಿಯಂದಿರು ಎಚ್ಚರಿಕೆ ವಹಿಸುತ್ತಾ ಬಂದರು. ಆದರೂ ಅಧಿಕಾರವನ್ನಂತು ಮಾತ್ರ ಬಿಟ್ಟುಕೊಟ್ಟಿಲ್ಲ. ಕುರ್ಚಿಯಲ್ಲಿ ಪತ್ನಿ ಕುಳಿತರೂ ಬೇರೆಲ್ಲ ವ್ಯವಹಾರಗಳನ್ನು ಪತಿಯಂದಿರೇ ನಡೆಸುತ್ತಾ ಬಂದಿದ್ದಾರೆ. ಇದು ಎಲ್ಲರಿಗೂ ತಿಳಿದಿರುವ ವಿಷಯವೇ.
ನಮ್ಮ ವ್ಯವಸ್ಥೆಯಲ್ಲಿ ಎಲ್ಲವೂ ಅಧಿಕಾರಿಗಳಿಂದಲೇ ಆಗುತ್ತದೆ ಎಂಬುದು ಭ್ರಮೆಯಷ್ಟೇ. ಕಮೀಷನರ್ ಒಬ್ಬರು ಪ್ರಾಮಾಣಿಕವಾಗಿ , ಕ್ರಿಯಾಶೀಲರಾಗಿದ್ದರೆ ಸಾಲದು. ಅವರ ಸುತ್ತ ಇರುವ ಎಲ್ಲರೂ ಅವರಂತೆಯೇ ಇದ್ದಾರೆಯೇ?, ಇರುತ್ತಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲಾರದು. ಕಮೀಷನರ್ ಸಹ ಎಲ್ಲವನ್ನೂ ನನ್ನ ಅಧಿಕಾರಿಗಳಿಂದಲೇ ಮಾಡಿಸಿಕೊಳ್ಳುತ್ತೇನೆ ಎಂದು ಹೊರಟರೆ ಅದು ಸಾಧುವಲ್ಲದ ನಿಲುವಾದೀತು. ನಗರ ಪಾಲಿಕೆಯೊಳಗೆ ಹೊಕ್ಕು ನೋಡಿದರೆ ಬ್ರಹ್ಮಾಂಡ ಬಯಲಾಗುತ್ತದೆ. ಅಲ್ಲಿ ನಡೆಯುವ
ಭ್ರಷ್ಟಾಚಾರ, ನಿರ್ಲಕ್ಷ್ಯತೆ ಪ್ರಕರಣಗಳು ಕಮೀಷನರ್ ಗಮನಕ್ಕೆ ಬರಲು ಸಾಧ್ಯವೇ?
ಕಮೀಷನರ್‍ನ್ನು ದಿಕ್ಕು ತಪ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅವರನ್ನೇ ನಂಬಿರುವುದು ನೌಕರರ ಭ್ರಷ್ಟಾಚಾರಕ್ಕೆ ಸಹಕಾರಿಯಾದೀತು. ಇಂದಿಗೂ ಕಾರ್ಪೋರೇಷನ್ ವಲಯದಲ್ಲಿ ಲಂಚರುಷುವತ್ತಿಲ್ಲದೆ ಯಾವ ಕೆಲಸ ಆಗುತ್ತಿದೆ? ಸಾರ್ವಜನಿಕರ ಸಾಮಾನ್ಯ ಕೆಲಸಗಳು ಅಷ್ಟು ಸುಲಭವಾಗಿ ನಡೆಯುತ್ತಿವೆಯೇ? ನೌಕರರು ತಿಮಿಂಗಿಲಗಳಾಗುತ್ತಿದ್ದಾರೆ.
ಅವರನ್ನು ಮಾತನಾಡಿಸುವುದೇ ಕಷ್ಟಕರ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದಲೇ ಕೇಳಿಬರುತ್ತಿವೆ. ಇಂತಹವರನ್ನೇ ನಂಬಿ ಆಡಳಿತ ನಡೆಸುವ ಕಮೀಷನರ್‍ಗೆ ಹೊರಗಿನ ಬೆಳವಣಿಗೆಗಳು, ವಿಷಯಗಳು ಗೊತ್ತಾಗುವು ದಾದರೂ ಹೇಗೆ?ಸಾಮಾನ್ಯ ನಾಗರಿಕನೊಬ್ಬ ನಗರ ಪಾಲಿಕೆಗೆ ಹೋಗಿ ಒಂದು ಸಣ್ಣ ಕೆಲಸ ಮಾಡಿಸಿಕೊಳ್ಳಲಿಕ್ಕೂ ಲಂಚ ತೆರಬೇಕು. ಇಲ್ಲವಾದರೆ ವಾರಗಟ್ಟಲೆ ಮಾತ್ರವಲ್ಲ, ತಿಂಗಳು ಕಳೆದರೂ ಕಾರ್ಯ ಸಿದ್ಧಿಸಲಾರದು.
ಕೈಬಿಸಿ ಮಾಡಿದರೆ ಯಾವ ಕಾನೂನು ಕಟ್ಟಳೆಗಳೂ ಲೆಕ್ಕಕ್ಕಿಲ್ಲ. ಇವುಗಳಿಗೆಲ್ಲ ಕಡಿವಾಣ ಹಾಕಲು ಕಮೀಷನರ್ ಅವರಿಂದ ಸಾಧ್ಯವೆ ಎಂಬ ಪ್ರಶ್ನೆಗಳು ಕೆಲವರಿಂದ ವ್ಯಕ್ತವಾಗುವುದು ಸಹಜ. ಇದೇ ಕಾರಣಕ್ಕಾಗಿಯೇ ಕೆಲವರು ಅನಿವಾರ್ಯ ಎಂಬಂತೆ ತಮ್ಮ ವಾರ್ಡ್‍ನ ಕಾರ್ಪೋರೇಟರ್‍ಗಳ ಹಿಂದೆ ಬೀಳುತ್ತಾರೆ. ಆ ಕೆಲಸ ಆಗುವುದೋ ಬಿಡುವುದೋ ಬೇರೆ ಮಾತು. ಆದರೆ ಜನರಿಗೆ ಸ್ಥಳೀಯವಾಗಿ ಸಿಗುವವರು ಇವರೇ ಆಗಿರುತ್ತಾರೆ. ಅವರನ್ನು ನಂಬಿ ಹಿಂದೆ ಹೋಗುತ್ತಾರೆ.
ನಗರದಲ್ಲಿ ಬಹಳಷ್ಟು ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳ ಅರಿವೇ ಕಾರ್ಪೋರೇಟರ್‍ಗಳಿಗೆ ಇಲ್ಲವೆಂದಾದರೆ ಅದಕ್ಕಿಂತ ಅವಮಾನ ಮತ್ತೊಂದಿಲ್ಲ. ಕಾಮಗಾರಿಗಳ ಮಾಹಿತಿ ಕಾರ್ಪೋರೇಟರ್‍ಗಳಿಗೆ ತಿಳಿಸಬೇಕು. ಅಲ್ಲೇನಾದರೂ ಅವ್ಯವಹಾರಗಳು ನಡೆಯುತ್ತಿದ್ದರೆ ಅವರೂ ಪ್ರಶ್ನಿಸುವಂತಿರಬೇಕು. ದುರಂತವೆಂದರೆ ಅವ್ಯವಹಾರಗಳನ್ನು ಪ್ರಶ್ನಿಸುವವರೇ ವಿರಳ. ತಮ್ಮ ಪಾಲಿಗೆ ಬರುವುದೆಷ್ಟು ಎಂಬುದರ ಕಡೆಗೆ ಹೆಚ್ಚು ಗಮನ. ಇದಕ್ಕೆ ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳು ಇಬ್ಬರೂ ಹೊಣೆಗಾರರು.
ಆಡಳಿತದಲ್ಲಿ ಸಣ್ಣಪುಟ್ಟ ಲೋಪಗಳು ಬರುವುದು ಸಾಮಾನ್ಯ. ಇವು ಬಹಿರಂಗವಾಗಿ ನಗೆಪಾಟಿಲಿಗೆ ಈಡಾಗುವಂತಹ ಸ್ಥಿತಿಗೆ ಬರಬಾರದು. ಒಟ್ಟಾರೆ ನಗರದ ಹಿತದೃಷ್ಟಿ ಎಲ್ಲರ ಆದ್ಯತೆಯಾಗಬೇಕು. ತಪ್ಪು ಕಂಡಾಗ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಆಡಳಿತದಲ್ಲಿ ಪರಸ್ಪರ ಸಮನ್ವಯತೆ ಮೂಡಿದಲ್ಲಿ ಮಾತ್ರವೇ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯ.