ತುರುವೇಕೆರೆ :
ಕಾವೇರಿ ನೀರಾವರಿ ನಿಗಮದ ಹೇಮಾವತಿ ಟಿಬಿಸಿ ಕಾಲುವೆ ದುರಸ್ತಿ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಮಾವತಿ ನಾಲೆ 1-2, 0.70 ವೈ ಅಲೇಮೆಂಟ್‍ನಿಂದ 75 ಕಿಮೀ ವರೆಗೂ 475 ಕೋಟಿ ರೂ. ವೆಚ್ಚದಲ್ಲಿ ವಿಆರ್‍ಸಿ ಲೈನಿಂಗ್ ಮಾಡಲು ಎಸ್ಟಿಮೆಂಟ್ ಮಾಡಲಾಗಿದ್ದು, ಸರಿಯಾದ ಗುಣಮಟ್ಟದಲ್ಲಿ ಕಾಮಗಾರಿ ಮಾಡದೆ ಕೇವಲ 20 ಮತ್ತು 40 ಎಂಎಂ ಜಲ್ಲಿ ಹಾಕಿ ಕಾಮಗಾರಿಯನ್ನು ಮುಗಿಸಿ ಸುಮಾರು 207 ಕೋಟಿ ರೂ. ಹಣವನ್ನು ಗುತ್ತಿಗೆದಾರರು ಪಡೆದಿದ್ದಾರೆ. ಅಲ್ಲದೇ 90 ಲಕ್ಷ ರೂ. ಅಡಿಷನಲ್ ಗ್ರಾಂಟ್ ಹಾಕಿಸಿಕೊಂಡು ಜನಪ್ರತಿನಿಧಿಗಳು ಹಾಗೂ ಹೇಮಾವತಿ ನಾಲೆ ಇಂಜಿನಿಯರ್ ಶಾಮೀಲಾಗಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ತೈಲ ಬೆಲೆ ಏರಿಕೆ-ಪ್ರತಿಭಟನೆ : ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಅ.18 ರಂದು ಸೋಮವಾರ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿ.ಎಸ್.ಪುರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಲೋಕಾಯುಕ್ತಕ್ಕೆ ದೂರು:
ಹೇಮಾವತಿ ನಾಲಾ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಠಚಾರವಾಗಿದ್ದು, ಹೇಮಾವತಿ ನಾಲೆಯ ಕಾಮಗಾರಿಯನ್ನು ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನಿತ್ತಿನಲ್ಲಿಟ್ಟು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಹಾಗೂ ಜನರ ತೆರಿಗೆ ಹಣ ಪೋಲಾಗುತ್ತಿದ್ದು, ಈ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ತನಿಖೆ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
