ತುಮಕೂರು
ಪ್ರಜಾಪ್ರಗತಿ ಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ಪಾರ್ಕ್‍ನಲ್ಲಿ ಯುಜಿಡಿ ನೀರು ಸ್ವಚ್ಛತೆ ಮರೀಚಿಕೆ ಎಂಬ ತಲೆಬರಹದಡಿ ವಿಶೇಷ ವರದಿ ಪ್ರಕಟ ಮಾಡಲಾಗಿತ್ತು. ಈ ವರದಿಯನ್ನು ಗಮನಿಸಿದ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಹಾಗೂ ಮೇಯರ್ ಫರೀದಾಬೇಗಂ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಾಲಿಕೆ ಆಯುಕ್ತ ಟಿ.ಭೂಬಾಲನ್ ಮಾತನಾಡಿ, ಟೂಡಾದಿಂದ ಅನುಮತಿ ಪಡೆದು ಲೇಔಟ್ ಮಾಡಿದಾಗ, ಮನೆ ನಿರ್ಮಾಣದ ವೇಳೆಯಲ್ಲಿ ಪಿಟ್‍ಗಳನ್ನು ತೆಗೆಸಿಕೊಳ್ಳಬೇಕಿತ್ತು. ಆ ಕೆಲಸ ಮಾಡದೆ ಪಾರ್ಕ್‍ಗೆ ಹರಿಬಿಟ್ಟಿದ್ದು ಲೇಔಟ್‍ನಲ್ಲಿನ ಮನೆಗಳವರ ತಪ್ಪು. ಜನರ ತಪ್ಪು ಇದ್ದಾಗಲೂ ಪ್ರತಿಯೊಂದಕ್ಕೂ ಪಾಲಿಕೆಯನ್ನು ದೂಷಿಸುವುದು ಸರಿಯಲ್ಲ. ಈಗ ಪಾರ್ಕ್‍ನಲ್ಲಿ ತುಂಬಿಕೊಂಡಿರುವ ಯುಜಿಡಿ ನೀರು ತೆಗೆಸಲು ಹಣ ಖರ್ಚು ಮಾಡಬೇಕಿದೆ. ಅದನ್ನು ಪಾಲಿಕೆಯ ಪೌರ ಕಾರ್ಮಿಕರಿಂದಲೆ ತೆರವುಗೊಳಿಸಲಾಗುತ್ತದೆ. ಆದರೆ ಅದಕ್ಕಾಗುವ ಖರ್ಚನ್ನು ಸ್ಥಳೀಯರೇ ಭರಿಸಬೇಕು ಎಂದರು.
ಈ ಬಗ್ಗೆ ಹಲವಾರು ಜನ ದೂರುಗಳನ್ನು ನೀಡಿದ್ದರು. ಜೊತೆಗೆ ಪಾಲಿಕೆಯ ಸಭೆಗಳಲ್ಲಿ ಸದಸ್ಯ ಸಿ.ಎನ್.ರಮೇಶ್ ಚರ್ಚೆ ಮಾಡಿದ್ದರು. ಅಲ್ಲದೆ ಪ್ರಜಾಪ್ರಗತಿ ಪತ್ರಿಕೆಯಲ್ಲೂ ವರದಿ ಪ್ರಕಟವಾಗಿತ್ತು. ಈ ನಿಟ್ಟಿನಲ್ಲಿ ಸಮಸ್ಯೆಯ ತೀವ್ರತೆ ತಿಳಿದು ಸ್ಥಳ ಪರಿಶೀಲನೆ ಮಾಡಿದ್ದೇವೆ. ಈಗಲೇ ಇದನ್ನು ಸ್ವಚ್ಛಗೊಳಿಸಲು ಆದೇಶ ಮಾಡುತ್ತೇನೆ. ಅಲ್ಲದೆ ಇಲ್ಲಿ ಉಳಿದಿರುವ 2ನೆ ಹಂತದ ಯುಜಿಡಿ ಕಾಮಗಾರಿ ಬಗ್ಗೆಯೂ ಕರ್ನಾಟಕ ಒಳಚರಂಡಿ ಮಂಡಳಿ ಹಾಗೂ ಟೂಡಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡುತ್ತೇವೆ. ಇದಕ್ಕೆ ಜನರ ಸಹಕಾರವೂ ಮುಖ್ಯ ಎಂದರು.
ಪಾಲಿಕೆ ಮೇಯರ್ ಫರೀದಾಬೇಗಂ ಮಾತನಾಡಿ, 31 ಮತ್ತು 35ನೆ ವಾರ್ಡ್‍ನ ಗಡಿಭಾಗದಲ್ಲಿರುವ ಉದ್ಯಾನವನದಲ್ಲಿ ಯುಜಿಡಿ ನೀರು ತುಂಬಿಕೊಂಡಿರುವುದರ ಬಗ್ಗೆ ಪ್ರಜಾಪ್ರಗತಿ ಪತ್ರಿಕೆಯಲ್ಲಿ ವರದಿ ಪ್ರಕಟ ಮಾಡಲಾಗಿತ್ತು. ಈ ಬಗ್ಗೆ ಈ ಹಿಂದೆಯೂ ಮಹಿಳೆಯರು ದೂರು ನೀಡಿದ್ದರು. ಆಯುಕ್ತರೊಂದಿಗೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕು ಎಂದು ಕಾಯುತ್ತಿದ್ದೆವು. ಈಗಿನ ತುರ್ತು ಪರಿಸ್ಥಿತಿಯಲ್ಲಿ ಸ್ವಚ್ಛತೆ ಎಂಬುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯರು ಪಿಟ್‍ಗಳನ್ನು ಮಾಡಿಸಿಕೊಳ್ಳಬೇಕು. ಯುಜಿಡಿ ನೀರನ್ನು ಆಚೆಗೆ ಬಿಡುವುದರಿಂದ ರೋಗ ರುಜಿನಗಳು ಬರುತ್ತವೆ. ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.
ಇಲ್ಲಿನ ಸಮಸ್ಯೆಗಳ ಬಗ್ಗೆ ಹಲವು ಬಾರಿ ಚರ್ಚೆ ಮಾಡಲಾಗಿತ್ತು. ಇದೀಗ ಪೌರ ಕಾರ್ಮಿಕರನ್ನು ಕಳುಹಿಸಿ ಸ್ವಚ್ಛ ಮಾಡಿಸುತ್ತೇವೆ. ಮುಂದೆ ಇದು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ಥಳೀಯರದ್ದಾಗಿದೆ. ಸ್ಥಳೀಯರ ಸಹಕಾರ ಇದ್ದರೆ ನಗರದ ಯಾವುದೇ ಸಮಸ್ಯೆಗಳಿದ್ದರೂ ಸುಲಭವಾಗಿ ಪರಿಹರಿಸಬಹುದಾಗಿದೆ. ನಾಲ್ಕು ತಿಂಗಳೊಳಗೆ 2ನೆ ಹಂತದ ಯುಜಿಡಿ ಕಾಮಗಾರಿ ಪೂರ್ಣವಾಗು ವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಸದಸ್ಯ ಸಿ.ಎನ್.ರಮೇಶ್ ಸ್ಥಳೀಯ ನಿವಾಸಿಗಳಾದ ತರಕಾರಿ ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶನಿವಾರದಂದು ಪ್ರಜಾಪ್ರಗತಿ ಮತ್ತು ಪ್ರಗತಿ ವಾಹಿನಿಯ ವರದಿಗಾರರನ್ನು ಕರೆಯಿಸಿ ಸಮಸ್ಯೆ ಬಗ್ಗೆ ನಮ್ಮ ಅಳಲನ್ನು ತೋಡಿಕೊಂಡಿದ್ದೆವು. ಈ ಬಗ್ಗೆ ಭಾನುವಾರದ ಸಂಚಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಅದಕ್ಕೆ ಎಚ್ಚೆತ್ತುಕೊಂಡ ಆಯುಕ್ತರು, ಮೇಯರ್ ಹಾಗೂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಪತ್ರಿಕೆಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
ತರಕಾರಿ ಮಹೇಶ್, ಸ್ಥಳೀಯ ನಿವಾಸಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ