ತುಮಕೂರು:
ಹೇಮಾವತಿ ನಾಲಾ ಅಗಲೀಕರಣ, ತುಂಗಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆ ತುರ್ತು ಅನುಷ್ಠಾನಕ್ಕೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ವಿವಿಧ ಬೇಡಿಕೆಗಳು ಈ ಕೆಳಕಂಡಂತಿವೆ,
ಹೇಮಾವತಿ ನಾಲೆಯನ್ನು ಅಗಲೀಕರಣ ಮಾಡಬೇಕು, ಹೂಳನ್ನು ಎತ್ತಿ 2500 ಕ್ಯುಸೆಕ್ಸ್ ನೀರು ಹರಿಯುವಂತೆ ಮಾಡಿದರೆ ಜಿಲ್ಲೆಯ ನೀರಿನ ಪಾಲು 24.81 ಟಿಎಂಸಿ ನೀರು ಹರಿಯಲು ಸಾಧ್ಯವಾಗುತ್ತದೆ. ತುಮಕೂರು, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳಿಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ಭೂಸ್ವಾಧೀನಕ್ಕೆ ಒಳಪಟ್ಟ ರೈತರಿಗೆ ಇನ್ನೂ ಪರಿಹಾರ ಪಾವತಿಸಿಲ್ಲ. ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲ್ಲೂಕುಗಳಲ್ಲಿ ಎತ್ತಿನಹೊಳೆ ನಾಲೆ ಹಾದುಹೋಗುವ ಅಕ್ಕಪಕ್ಕದಲ್ಲಿ ಬರುವ ಎಲ್ಲಾ ಕೆರೆಗಳಿಗೂ ನೀರು ಹರಿಸಲು ಯೋಜನೆಯಲ್ಲಿ ಅವಕಾಶ ಮಾಡಿಕೊಡಬೇಕು.
ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗಾಗಿ ಮತ್ತು ತುಮಕೂರು-ಶಿವಮೊಗ್ಗದವರೆಗೆ ರಸ್ತೆ ಅಗಲೀಕರಣಕ್ಕಾಗಿ, ವಿವಿಧ ಉದ್ದೇಶಗಳಿಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಎಲ್ಲ ರೈತರಿಗೆ 2013ರ ಕಾಯ್ದೆಯಲ್ಲಿರುವಂತೆ ವಿವಿಧ ಸೌಲಭ್ಯಗಳನ್ನು ಪಾವತಿಸಬೇಕು ಮತ್ತು ಪರಿಹಾರ ನೀಡಬೇಕು. ಯಾವುದೇ ದಾಖಲೆಗಳನ್ನು ಮತ್ತು ಸ್ಪಷ್ಟ ಮಾಹಿತಿ ನೀಡದೆ ಭೂಮಿ ಕಿತ್ತುಕೊಳ್ಳುವುದನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರ ಕೂಡಲೇ ಭೂಸ್ವಾಧೀನ ಕಾಯ್ದೆಯ ತಿದ್ದುಪಡಿಯನ್ನು ರದ್ದುಪಡಿಸಬೇಕು.
ಮಾಗಡಿ ಮತ್ತು ಕನಕಪುರಕ್ಕೆ ನೀರೊದಗಿಸಲು ಗುಬ್ಬಿ ತಾಲ್ಲೂಕಿನ 66ನೇ ಕಿ.ಮೀ. ಸುಂಕಾಪುರದಿಂದ ನೇರವಾಗಿ ಕುಣಿಗಲ್‍ವರೆಗೆ ನೀರು ಹರಿಸಲು ನೇರ ಸಂಪರ್ಕ ಕಾಲುವೆಗೆ ಸರ್ಕಾರ ಅನುಮತಿ ನೀಡಿರುವುದು ಸರಿಯಲ್ಲ. ಇದರಿಂದ ತುಮಕೂರು, ಗುಬ್ಬಿ, ಶಿರಾ, ಮಧುಗಿರಿ ತಾಲ್ಲೂಕುಗಳಿಗೆ ನೀರು ಹರಿಸುವುದು ಕಷ್ಟವಾಗುತ್ತದೆ. ಗುಬ್ಬಿ ತಾಲ್ಲೂಕಿನ ಬಿಕ್ಕೇಗುಡ್ಡ, ಹಾಗಲವಾಡಿ, ಕುಣಿಗಲ್ ತಾಲ್ಲೂಕಿನ ಶ್ರೀರಂಗ ನೀರಾವರಿ ಯೋಜನೆಗಳು ಪ್ರಾರಂಭವಾಗಿ ಮೂರು ವರ್ಷ ಕಳೆದರೂ ಇನ್ನೂ ನೀರು ಹರಿಸಲು ಸಾಧ್ಯವಾಗಿಲ್ಲ. ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ ಯೋಜನೆ ಪೂರ್ಣಗೊಳಿಸಬೇಕು. ಡಾ.ಸ್ವಾಮಿನಾಥನ್ ಮತ್ತು ಡಾ.ಪ್ರಕಾಶ್ ಕಮ್ಮರಡಿಯವರ ವರದಿಯನ್ನು ಕೂಡಲೇ ಜಾರಿಗೆ ತರಬೇಕು.
ಜಿಲ್ಲೆಯ 10 ತಾಲ್ಲೂಕುಗಳು ಬರಗಾಲ ಪ್ರದೇಶಗಳೆಂದು ಘೋಷಣೆಯಾಗಿದ್ದರೂ ಈವರೆಗೂ ಬೆಳೆ ನಷ್ಟ ಪರಿಹಾರ ತುಂಬಿಕೊಟ್ಟಿಲ್ಲ. ಪೂರ್ವ ಮುಂಗಾರು ವಿಫಲವಾಗಿರುವುದರಿಂದ ಪಂಚಾಯತಿಗೊಂದು ಮೇವಿನ ಬ್ಯಾಂಕ್ ತೆರೆದು ಗೋವುಗಳ ರಕ್ಷಣೆ ಮಾಡಬೇಕು. ನರೇಗಾ ಯೋಜನೆ ಭ್ರಷ್ಟಾಚಾರದ ಕೂಪವಾಗಿದ್ದು, ಕೆಲಸ ಮಾಡಿದವರಿಗೂ ಹಣ ಪಾವತಿಯಾಗಿಲ್ಲ. ಕೂಡಲೇ ಹಣ ಪಾವತಿಸಬೇಕು. ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕು, ಅಡಿಕೆ ಮತ್ತು ತೆಂಗಿನ ಮರಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕು.
ತಾಲ್ಲೂಕು ಕಚೇರಿಗಳು ಭ್ರಷ್ಟಾಚಾರದ ಕೇಂದ್ರಗಳಾಗಿವೆ. ಹಣ ಇಲ್ಲದೆ ಯಾವ ಕೆಲಸಗಳೂ ನಡೆಯುತ್ತಿಲ್ಲ. ಆಧಾರ್ ಲಿಂಕ್ ಮಾಡಲು ರೈತರು ರಾತ್ರಿಯಿಡೀ ರವಿನ್ಯೂ ಇಲಾಖೆ ಮತ್ತು ಬ್ಯಾಂಕ್‍ಗಳ ಮುಂದೆ ಕಾಯುತ್ತಿದ್ದಾರೆ. ಸಣ್ಣಪುಟ್ಟ ತಿದ್ದುಪಡಿಗಳಿಗಾಗಿ ರೈತರು ಉಪ ವಿಭಾಗಾಧಿಕಾರಿಗಳ ಕಛೇರಿಗೆ ಹೋಗಬೇಕಾಗಿದ್ದು, ವರ್ಷಗಳು ಕಳೆದರೂ ಕೆಲಸಗಳಾಗುತ್ತಿಲ್ಲ. ಆದಕಾರಣ ತಹಸೀಲ್ದಾರ್ ಅವರಿಗೆ ಅಧಿಕಾರ ನೀಡಬೇಕು. ರೇಷನ್ ಪಡೆಯಲು ಪ್ರತಿ ತಿಂಗಳು ಹೆಬ್ಬೆಟ್ಟು ಕೊಡುವುದನ್ನು ನಿಲ್ಲಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಪಿ.ಗೋಪಾಲ ರಾಮಸ್ವಾಮಿ, ರಾಮಕೃಷ್ಣಯ್ಯ, ಭೂತಯ್ಯ, ಲೋಕೇಶ್‍ರಾಜ ಅರಸ್, ಮಹೇಶ್ ,ಲಕ್ಷ್ಮಣಗೌಡ, ದೊಡ್ಡಮಾಳಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಡಿ.ಸಿ. ಕಚೇರಿಗೆ ನುಗ್ಗಲು ಯತ್ನ:
ನಗರದ ಬಿಜಿಎಸ್ ಸರ್ಕಲ್‍ನಿಂದ ಪ್ರತಿಭಟನೆ ಆರಂಭವಾಗಿ ಜಿಲ್ಲಾಧಿಕಾರಿಗಳ ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ಆಗಮಿಸಿತು. ಅಲ್ಲಿ ಮುಖಂಡರುಗಳು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಒಂದು ಹಂತದಲ್ಲಿ ಪ್ರತಿಭಟನಾಕಾರರ ಗುಂಪು ಬ್ಯಾರಿಕೇಡ್‍ಗಳನ್ನು ತಳ್ಳಿ ಜಿಲ್ಲಾಧಿಕಾರಿಗಳ ಕಛೇರಿ ಒಳ ನುಗ್ಗಲು ಪ್ರಯತ್ನಿಸಿತು. ಆದರೆ ಮುಖಂಡರುಗಳು ಶಾಂತಿಯುತವಾಗಿ ಪ್ರತಿಭಟನೆಗೆ ಸಹಕರಿಸುವಂತೆ ಮನವಿ ಮಾಡಿದರು. ಪೊಲೀಸರು ಒಳನುಗ್ಗಲೆತ್ನಿಸಿದವರನ್ನು ತಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
