ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ಬಸವರಾಜು ಜಿಲ್ಲಾ ಆಸ್ಪತ್ರೆಗೆ ಭೇಟಿ ಪರಿಶೀಲನೆ

ಬಳ್ಳಾರಿ

    ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ಬಸವರಾಜು ಅವರು ನಗರದ ಜಿಲ್ಲಾ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇವರಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಾಥ್ ನೀಡಿದರು.

    ಇ.ಎನ್.ಟಿ., ಲೇಬರ್ ವಾರ್ಡ್, ಮಕ್ಕಳ ವಿಭಾಗ, ಸ್ಪೀಚ್ ಥೆರಪಿ, ಒಪಿಡಿ, ಎಸ್.ಎನ್.ಸಿಯು, ಶಸ್ತ್ರಚಿಕಿತ್ಸೆ ವಿಭಾಗ ಸೇರಿದಂತೆ ಆಸ್ಪತ್ರೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿ ಹಾಜರಿದ್ದ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಬಸರೆಡ್ಡಿ ಅವರು ಆಸ್ಪತ್ರೆಯ ವಿವಿಧ ವಿಭಾಗಗಳ ಕುರಿತು ಮಾಹಿತಿ ನೀಡಿದರು. ವಿಕಲಚೇತನರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಮತ್ತು ತಮ್ಮಲ್ಲಿರುವ ಸೌಲಭ್ಯಗಳ ಕುರಿತು ಹೆಚ್ಚಿನ ಪ್ರಚಾರ ನೀಡುವ ಕೆಲಸ ಮಾಡಿ ಎಂದರು.

     ನಂತರ ಅವರು ಆಸ್ಪತ್ರೆ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು ಅಂಗವಿಕಲರ ಮಕ್ಕಳಿಗೆ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ, ಅಂಗವಿಕಲ ಮಕ್ಕಳನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಜಾರಿಗೆ ಬಂದಿದೆ. ಅಂಗವಿಕಲರ ಪುನಶ್ಚೇತನಕ್ಕೆ ಸರಕಾರಗಳು ನಾನಾ ಕ್ರಮಗಳನ್ನು ಕೈಗೊಂಡಿವೆ ಎಂದರು.

       ವಿಕಲಚೇತನರು ಜಿಲ್ಲಾ ಕೇಂದ್ರಕ್ಕೆ ಚಿಕಿತ್ಸೆ ಪಡೆಯಲು ಬರುವುದಕ್ಕೆ ಕಷ್ಟವಾಗುತ್ತಿದ್ದು, ವಿಮ್ಸ್ ಮತ್ತು ಜಿಲ್ಲಾಸ್ಪತ್ರೆ ವೈದ್ಯರು ಜಂಟಿಯಾಗಿ ವಾರಕ್ಕೆರಡು ದಿನಗಳಂತೆ ಯೋಜನೆ ಹಾಕಿಕೊಂಡು ತಾಲೂಕು ಮಟ್ಟಕ್ಕೆ ತೆರಳಿ ಶಿಬಿರಗಳನ್ನು ನಡೆಸಿ ಚಿಕಿತ್ಸೆ ಮಾಡುವ ಕೆಲಸ ಮಾಡಿ. ಥೆರಪಿಸ್ಟ್ ಗಳು ಸಹ ತಾಲೂಕುಮಟ್ಟಕ್ಕೆ ತೆರಳಿ ರೋಗಿಗಳಿಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡಿ ಎಂದು ಅವರು ಸೂಚಿಸಿದರು.
ಎನ್.ಆರ್.ಹೆಚ್.ಎಂ ಅನುಸಾರ ರೋಗಿಗಳು ಬರಲು ಸಾಧ್ಯವಿಲ್ಲದಿದ್ದರೇ ತಾವೇ ಹೋಗಿ ಅಲ್ಲಿಗೆ ಚಿಕಿತ್ಸೆ ನೀಡಬೇಕೆಂಬ ನಿಯಮವಿದ್ದು, ಅದನ್ನು ಪಾಲಿಸಬೇಕು ಎಂದರು.

    ವಿಕಲಚೇತನ ಮಕ್ಕಳ ಆರೋಗ್ಯ ಚಿಕಿತ್ಸೆ ವಿಷಯದಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸಮನ್ವಯದೊಂದಿಗೆ ಕೆಲಸ ಮಾಡಿ ಎಂದು ಸೂಚನೆ ನೀಡಿದ ಆಯುಕ್ತ ಬಸವರಾಜು ಅವರು ಬ್ಲಾಕ್ ಮಟ್ಟದಲ್ಲಿಯೂ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದರು.ಬಳ್ಳಾರಿ ಜಿಲ್ಲೆಯಲ್ಲಿ 32ಲಕ್ಷ ಜನಸಂಖ್ಯೆ ಇದ್ದು, ಶೇ.3ರಷ್ಟು ಜನ ಅಂಗವಿಕಲರಿದ್ದಾರೆ. 35ಸಾವಿರ ಮಕ್ಕಳು ನ್ಯೂನ್ಯತೆಯಿಂದ ಬಳಲುತ್ತಿದ್ದು, ಅವರಿಗೆ ನೆರವು ಬೇಕಿದೆ ಎಂದರು.

        ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಮುಂದಿನ ತಿಂಗಳ ಎರಡನೇ ವಾರದಲ್ಲಿ ಜಿಲ್ಲಾ ಆರೋಗ್ಯ ಸಮಿತಿ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ವಿಕಲಚೇತನರಿಗೆ ಕಲ್ಪಿಸಬೇಕಾದ ಆರೋಗ್ಯ ಸೌಲಭ್ಯಗಳು, ಪರಿಣಾಮಕಾರಿ ಆರೋಗ್ಯ ಸೇವೆ ಸೇರಿದಂತೆ ಇನ್ನೀತರ ವಿಷಯಗಳ ಕುರಿತು ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಉಪ ಆಯುಕ್ತ ಪದ್ಮನಾಭ, ಸಲಹೆಗಾರ ಹಂಪಣ್ಣ, ಉಪವಿಭಾಗಾಧಿಕಾರಿಗಳಾದ ರಮೇಶ ಕೋನರೆಡ್ಡಿ, ಡಿಹೆಚ್‍ಒ ಡಾ.ರಾಜಶೇಖರ ರೆಡ್ಡಿ, ಡಿಡಿಪಿಐ ಶ್ರೀಧರನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap