ಜಿಲ್ಲಾ ಅಭಿವೃದ್ಧಿ ಸಮಿತಿ ರಚನೆ- ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್

ಹಾವೇರಿ:

         ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸಬರಾಬರಾಜು, ಹಜ್ ಹಾಗೂ ವಕ್ಫ್ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು.

        ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

        ಜಿಲ್ಲಾ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸಮಾಡೋಣ. ಪಕ್ಷಬೇಧ ಮರೆತು ಕೆಲಸಮಾಡೋಣ. ಇದಕ್ಕಾಗಿ ವಿಶೇಷವಾದ ಸಮಿತಿ ರಚನೆಮಾಡೋಣ. ಪ್ರತಿ ತಿಂಗಳು ಸಭೆ ನಡೆಸೋಣ, ಹಾವೇರಿಯಲ್ಲಿ ಒಂದು ತಿಂಗಳು ಬೆಂಗಳೂರಿನಲ್ಲಿ ಮತ್ತೊಂದು ತಿಂಗಳಿನಂತೆ ಸಭೆ ನಡೆಸಿ ಚರ್ಚಿಸೋಣ. ಜಿಲ್ಲೆಯ ಸಮಸ್ಯೆಗಳನ್ನು ಪಟ್ಟಿಮಾಡಿ ಬೆಂಗಳೂರಿನ ಸಭೆಯಲ್ಲಿ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರನ್ನು ಆಹ್ವಾನಿಸಿ ಪರಿಹಾರ ಕಂಡುಕೊಳ್ಳೋಣ ಎಂದು ತಿಳಿಸಿದರು.

       ಸಭೆಯ ಆರಂಭದಲ್ಲೇ ಬೈರನಪಾದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆದಿದೆ ಎಂದು ಶಾಸಕ ಬಿ.ಸಿ.ಪಾಟೀಲ ಸೇರಿದಂತೆ ವಿವಿಧ ಶಾಸಕರು ಆಕ್ಷೇಪಣೆ ವ್ಯಕ್ತಪಡಿಸಿದರು. ಈ ಕುರಿತಂತೆ ಸಮಗ್ರ ತನಿಖೆಗೆ ಜಿಲ್ಲಾ ಮಟ್ಟದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಹಿಸಲು ನಿರ್ಧರಿಸಲಾಯಿತು.

        ಮುಂಗಾರು ಮತ್ತು ಹಿಂಗಾರು ಹಂಗಾಮಿನ ಮಳೆ ಅಭಾವದಿಂದ ತೀವ್ರವಾದ ಬೆಳೆ ನಷ್ಟವಾಗಿದೆ. ಸರ್ಕಾರ ಕೇವಲ ರಾಣೇಬೆನ್ನೂರು ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಿದೆ. ಇಡಿ ಹಾವೇರಿ ಜಿಲ್ಲೆಯಲ್ಲಿ ಬೆಳೆಹಾನಿಯಾಗಿದೆ. ಬರಪೀಡಿತ ಜಿಲ್ಲೆಯಂದು ಘೋಷಣೆ ಮಾಡಬೇಕು, ಬರ ಘೋಷಣೆ ಹಾಗೂ ಬರಪರಿಹಾರ ಎಂದು ಸರ್ಕಾರಕ್ಕೆ ಒತ್ತಾಯಿಸಲು ಶಾಸಕರಾದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ ಅವರುಗಳು ಸಭೆಯಲ್ಲಿ ಮನವಿ ಮಾಡಿಕೊಂಡರು.

        ಈ ಕುರಿತಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್‍ಖಾನ್ ಅವರು ನಾನು ರಾಜ್ಯ ಬರ ಅಧ್ಯಯನ ಸಮಿತಿಯ ಸದಸ್ಯನಾಗಿದ್ದೇನೆ. ಜಿಲ್ಲೆಯ ಸ್ಥಿತಿಗತಿ ಕುರಿತಂತೆ ಪೂರ್ಣ ಮಾಹಿತಿ ಪಡೆದು ಬರ ಘೋಷಣೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಸಚಿವ ಜಮೀರ್ ಅಹ್ಮದ್‍ಖಾನ್ ಅವರು ವಿವರಿಸಿದರು.

       ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಕ್ಷಣ ಅಧಿಕಾರಿಗಳು ಕ್ರಿಯಾಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಪಟ್ಟಿಮಾಡಬೇಕು. ಪಯಾರ್ಯವಾಗಿ ನೀರಿನ ಮೂಲಗಳನ್ನು ಗುರುತಿಸಿಕೊಳ್ಳಬೇಕು. ತಳಮಟ್ಟದಲ್ಲಿ ಗ್ರಾಮವಾರು ಸರ್ವೇನಡೆಸಿ ವರದಿ ಸಲ್ಲಿಸಬೇಕು.

        ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷ್ಯ ಹಾಗೂ ಹುಡಗಾಡಿಕೆ ಮಾತುಗಳನ್ನು ನಾನು ಸಹಿಸುವುದಿಲ್ಲ. ಜನರು ನೀರಿನ ಸಮಸ್ಯೆಯಿಂದ ಬಳಲಿದರೆ, ಕಾರ್ಯ ವಿಳಂಬಮಾಡಿದರೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

       ವಾರದಲ್ಲಿ ಸಭೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ನೀಗಿಸಲು ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಶಾಸಕರು ಗಮನಕ್ಕೆ ತಂದಾಗ ವಸತಿ ನಿಲಯಗಳ ವ್ಯವಸ್ಥಪಾಕ ನಿರ್ದೇಶಕರೊಂದಿಗೆ ದೂರವಾಣಿ ಸಂಪರ್ಕಮಾಡಿ 15ದೊಳಗಾಗಿ ಜಿಲ್ಲೆಯ ವಿವಿಧ ಇಲಾಖೆಯ ವಸತಿ ಶಾಲೆಗಳ ಕುಡಿಯುವ ನೀರಿನ ಸಮಸ್ಯೆಗಳನ್ನು ನೀಗಿಸಲು ತಿಳಿಸಿದರು.

         ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ಕೊಳವೆಬಾವಿ ಕೊರೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಿ ದೂರು ದಾಖಲಿಸುವ ಕುರಿತಂತೆ ಶಾಸಕರು ಸಭೆಯ ಗಮನಕ್ಕೆ ತಂದಾಗ ಜಿಲ್ಲಾ ಅರಣ್ಯ ಡಿ.ಎಫ್.ಓ ಗಿರೀಶ ಅವರಿಗೆ ಸೂಚನೆ ನೀಡಿ ಕುಡಿಯುವ ನೀರಿನ ಸಮಸ್ಯೆಗೆ ಅಡ್ಡಿಪಡಿಸಬೇಡಿ. ಈ ಕುರಿತಂತೆ ನಿಮ್ಮ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.

          ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದಿಂದ 3054 ರಸ್ತೆ ನಿರ್ವಹಣೆ ಕ್ರಿಯಾಯೋಜನೆ ಮಂಜೂರಾತಿ ಪಡೆಯದೇ ವಿಳಂಬಮಾಡಿರುವ ಕುರಿತಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಹಿರ್ವಾಹಕ ಇಂಜನೀಯರ ಸಮಪರ್ಕ ಉತ್ತರ ನೀಡಲು ವಿಫಲರಾದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮಗೆ ಮಾತನಾಡಲು ಬರುವುದಿಲ್ಲ, ಕೆಲಸಮಾಡಲು ಬರುವುದಿಲ್ಲ. ಮುಂದಿನ ಸಭೆಯೊಳಗೆ ಕಾಮಗಾರಿ ಆರಂಭಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

          ಡಿಡಿಪಿಐ/ಬಿಇಓ ಹುದ್ದೆ ಯಾಕೇಬೇಕು: ಶಾಲಾ ಕಟ್ಟಡಗಳ ನಿರ್ವಹಣೆಗೆ ಸರ್ಕಾರದಿಂದ ಹಣಬಿಡುಗಡೆಯಾದರೂ ಅದನ್ನು ಅನುಷ್ಠಾನಗೊಳಿಸಲು ವಿಳಂಬವಾಗಿದೆ. ಈ ಕಾರಣದಿಂದ ಶೀಥಿಲವಾದ ಅಪಾಯಕಾರಿ ಕಟ್ಟಡದಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ. ನಿಮ್ಮ ಆಡಳಿತದ ನಿರ್ಲಕ್ಷ್ಯದಿಂದ ಮಕ್ಕಳು ಕಷ್ಟ ಅನುಭವಿಸುತ್ತಿದ್ದಾರೆ. ಕೇವಲ ಪಾಠಮಾಡುವುದಾದರೆ ಬಿಇಓ, ಡಿಡಿಪಿಐ ಹುದ್ದೆಗಳು ಏತಕ್ಕೆ ಬೇಕು. ಶಾಲಾ ಮುಖ್ಯೋಪಾಧ್ಯಾಯರು ಸಾಕಲ್ಲವೇ ಎಂದು ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ ಸೇರಿದಂತೆ ತೀವ್ರವಾಗಿ ಶಿಕ್ಷಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

       ಸಚಿವರು ಕೂಡ ಶಿಕ್ಷಣ ಇಲಾಖೆಯ ಪ್ರಗತಿ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಡಿಸೆಂಬರ್ 28ರೊಳಗೆ ಮತ್ತೊಮ್ಮೆ ಕೆಡಿಪಿ ಸಭೆ ನಡೆಸಲಾಗುವುದು. ಈ ಸಭೆಯ ಒಳಗಾಗಿ ಹಣ ಬಿಡುಗಡೆಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಖುದ್ದಾಗಿ ನಾನೇ ಶಾಲೆಗೆ ಅನಿರೀಕ್ಷತ ಭೇಟಿ ನೀಡಿ ತಪಾಸಣೆ ನಡೆಸುವೆ ಎಂದು ಸೂಚಿಸಿದರು.

         ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಕುರಿತಂತೆ ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ಬಿ.ಸಿ.ಪಾಟೀಲ ಅವರು ಸಚಿವರ ಗಮನಕ್ಕೆ ತಂದು ಕೇಂದ್ರಿಕೃತ ನೇಮಕಾತಿಯ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ವೈದ್ಯರಿಲ್ಲದಂತಾಗಿದೆ. ವಾಸ್ತವದ ಅರಿವಿಲ್ಲದೆ ಕೇಂದ್ರ ಕಚೇರಿಯ ಆಯುಕ್ತರೇ ವೈದ್ಯರನ್ನು ವರ್ಗಾವಣೆ ಮಾಡುವುದರಿಂದ ಸ್ಥಳೀಯ ಅಗತ್ಯತೆಗಳು ಅವರ ಅರಿವಿಗಿಲ್ಲದೆ ಮಾಸೂರನಂತಹ ಪ್ರಮುಖ ಕೇಂದ್ರಗಳಲ್ಲಿ ವೈದ್ಯರಿಲ್ಲದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಚಿವ ಜಮೀರ್ ಅಹ್ಮದ್ ಖಾನ್ ಅವರು ಈ ಕುರಿತಂತೆ ಉತ್ತರಿಸಿ ಜಿಲ್ಲೆಯಲ್ಲಿ ವೈದ್ಯರು ಹಾಗೂ ಅರೇವೈದ್ಯಕೀಯ ಸಿಬ್ಬಂದಿಗಳ ಕೊರತೆ ಕುರಿತಂತೆ ಪಟ್ಟಿ ನೀಡಿ ಆಯುಕ್ತರೊಂದಿಗೆ ಚರ್ಚಿಸಿ ನೇಮಕಾತಿಗೆ ಅಗತ್ಯ ಕ್ರಮವಹಿಸುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

          ಬೆಳೆವಿಮೆ ಬೆಳಗಾವಿಯಲ್ಲಿ ಸಭೆ: ಬಂಕಾಪುರ, ಹಾನಗಲ್ ಸೇರಿದಂತೆ ಸ್ಥಳೀಯ ಕೃಷಿ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಿಮಿಯಂ ತುಂಬಿದರು ರೈತರಿಗೆ 30 ರಿಂದ 40 ಕೋಟಿ ರೂ. ಪರಿಹಾರ ಹಣ ಬಂದಿಲ್ಲ. ಕೆಲವೆಡೆ ಮಳೆಯಾಶ್ರಿಯ ಬೆಳೆಗಳನ್ನು ನೀರಾವರಿ ಎಂದು ನಮೂದಿಸಲಾಗಿದೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ ಎಂದು ಶಾಸಕರುಗಳು ಸಭೆಯ ಗಮನ ಸೆಳೆದರು.

            ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಈ ಕುರಿತಂತೆ ಪ್ರತ್ಯೇಕ ಸಭೆ ನಡೆಸೋಣ. ಕೃಷಿ, ತೋಟಗಾರಿಕೆ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಕೃಷಿ ಸಚಿವರನ್ನು ಸಭೆ ಆಹ್ವಾನಿಸಿ ಜಿಲ್ಲೆಯ ಎಲ್ಲ ಪ್ರತಿನಿಧಿಗಳು ಈ ಕುರಿತಂತೆ ಚರ್ಚಿಸೋಣ ಎಂದು ತಿಳಿಸಿದರು.

       ಹೊಸ ಕೆರೆ:

       ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕಿಗೊಂದು ಹೊಸದಾದ ಕೆರೆ ನಿರ್ಮಾಣಕ್ಕೆ ಪ್ರಸ್ತಾನೆ ಸಲ್ಲಿಸುವಂತೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಡಿಸೆಂಬರ್ 22 ರಿಂದ 30ರೊಳಗಾಗಿ ಮತ್ತೊಮ್ಮೆ ಕೆಡಿಪಿ ಸಭೆ ಕರೆಯೋಣ. ಈ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು, ಸೂಚನೆಗಳನ್ನು ಮುಂದಿನ ಸಭೆಯಲ್ಲಿ ಅನುಷ್ಠಾನಗೊಳಿಸಿ ವರದಿ ಸಲ್ಲಿಸಬೇಕು ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚರಿಸಿದರು.

          ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಶಾಸಕರಾದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ, ನೆಹರು ಓಲೇಕಾರ, ವಿರಪಾಕ್ಷಪ್ಪ ಬಳ್ಳಾರಿ, ಜಿ.ಪಂ.ಉಪಾಧ್ಯಕ್ಷೆ ಶ್ರೀಮತಿ ದೀಪಾ ಅತ್ತಿಗೇರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಲೀಲಾವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿ.ಪಂ.ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಹಾಗೂ ಜಿ.ಪಂ.ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ನಾಮನಿರ್ದೇಶಿತ ಕೆಡಿಪಿ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link