ಫೆ.17 ರಂದು ಅಬಕಾರಿ ಉಪ ನಿರೀಕ್ಷಕರ ಹುದ್ದೆಗೆ ಸ್ಮರ್ಧಾತ್ಮಕ ಪರೀಕ್ಷೆ

ದಾವಣಗೆರೆ 

      ಕರ್ನಾಟಕ ಲೋಕಸೇವಾ ಆಯೋಗದಿಂದ ಅಬಕಾರಿ ಇಲಾಖೆಯಲ್ಲಿನ ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯು ಫೆ.17 ರಂದು ನಗರದ 08 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಯಾವುದೇ ಅವ್ಯವಹಾರ ನಡೆಯದಂತೆ ಶಾಂತ ಮತ್ತು ಸುವ್ಯವಸ್ಥೆ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

      ಶುಕ್ರವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪರೀಕ್ಷಾ ಮೇಲ್ವಿಚಾರಕರು, ವೀಕ್ಷಕರು, ಮಾರ್ಗಾಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಫೆ.17 ರ ಬೆಳಿಗ್ಗೆ 10 ರಿಂದ 11.30 ರವರೆಗೆ ವಿವರಣಾತ್ಮಕ ಪತ್ರಿಕೆ ಹಾಗೂ ಮಧ್ಯಾಹ್ನ 2 ರಿಂದ 3.30 ರವರೆಗೆ ವಸ್ತು ನಿಷ್ಟ ಬಹು ಆಯ್ಕೆ ಮಾದರಿ ಪತ್ರಿಕೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಅಂದು ಬೆಳಿಗ್ಗೆ ಮೊದಲ ಗಂಟೆ ಬಾರಿಸುವ ಸಮಯ 9-40ರೊಳಗೆ ಪರೀಕ್ಷಾ ಕೇಂದ್ರದೊಳಗೆ ಹಾಜರಿರಬೇಕು.

       ನಗರದ 8 ಪರೀಕ್ಷಾ ಕೇಂದ್ರಗಳಿಂದ ಒಟ್ಟು 2,673 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಭ್ಯರ್ಥಿಗಳಿಗೆ ಸೂಕ್ತ ಆಸನ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಸಂವೀಕ್ಷರಿಗೆ ಪೂರ್ವಭಾವಿಯಾಗಿ ತರಬೇತಿ ನೀಡಬೇಕು. ಸಂವೀಕ್ಷಕರು ಕೂಡ ಪರೀಕ್ಷಾ ಕೊಠಡಿಗೆ ಮೊಬೈಲ್ ತೆಗೆದುಕೊಂಡು ಹೋಗುವ ಹಾಗಿಲ್ಲ. ನ್ಯೂಸ್ ಪೇಪರ್‍ನ್ನು ಸಹ ಕೇಂದ್ರಗಳ ಒಳಗೆ ತೆಗೆದುಕೊಂಡ ಹೋಗಬಾರದು ಎಂದ ಅವರು ಸಂವೀಕ್ಷಕರು ಅತ್ಯಂತ ಲಕ್ಷ್ಯದಿಂದ ಪರೀಕ್ಷೆ ಪ್ರಕ್ರಿಯೆಯನ್ನು ಸಂವೀಕ್ಷಿಸಬೇಕು ಹಾಗೂ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಯಮಾನುಸಾರ ಜಾಗೃತೆಯಿಂದ ಅನುಸರಿಸಬೇಕೆಂದರು.

ಗುರುತಿನ ಚೀಟಿ ಕಡ್ಡಾಯ 

       ಅಭ್ಯರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಕಡ್ಡಾಯವಾಗಿ ಚುನಾವಣಾ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಪಾಸ್‍ಪೋರ್ಟ್, ಸರ್ಕಾರಿ ನೌಕರರ ಐಡಿ ಇವುಗಳಲ್ಲಿ ಯಾವುದಾದರೊಂದು ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರಕ್ಕೆ ತರಬೇಕು.

       ಮೊಬೈಲ್, ವಾಚ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ನಿಷೇಧ: ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಯಾವುದೇ ರೀತಿಯ ಮೊಬೈಲ್‍ಗಳನ್ನು ತರುವಂತಿಲ್ಲ. ಕೈಗಡಿಯಾರಗಳನ್ನು ಬಳಸುವಂತಿಲ್ಲ. ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಾದ ಬ್ಲೂಟೂತ್ ಡಿವೈಸ್, ಕ್ಯಾಲುಕಿಲೇಟರ್, ಸ್ಲೈಡ್ ರೂಲ್, ಮಾರ್ಕರ್ ಇತ್ಯಾದಿಗಳನ್ನು ಪರೀಕ್ಷಾ ಆವರಣದೊಳಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿಡಿಯೋಗ್ರಫಿ ಮಾಡಲಾಗುವುದು.

ಎರಡು ಭಾವಚಿತ್ರ ತರಬೇಕು 

        ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಇತ್ತೀಚಿಗ ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳನ್ನು ತರಬೇಕು.

ಪರೀಕ್ಷಾ ಕೇಂದ್ರ ಸುತ್ತಮುತ್ತ ನಿಷೇಧಾಜ್ಞೆ 

       ಸಿಆರ್‍ಪಿಸಿ ಕಲಂ 144 ರ ಪ್ರಕಾರ ಪರೀಕ್ಷೆ ನಡೆಯುವ 8 ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪರಿದಿ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶವೆಂದು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಬೇಕೆಂದು ಘೋಷಿಸಿ ಪ್ರಭಾರ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.

       ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಟಿ.ಜೆ ಉದೇಶ್ ಮಾತನಾಡಿ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಮಹಿಳಾ ಪೇದೆಯೊಂದಿಗೆ ಒಟ್ಟು 4 ಪೇದೆಗಳನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗುವುದು ಎಂದರು.ಶಿಕ್ಷಣಾಧಿಕಾರಿ ಎಂ. ನಿರಂಜನ ಮೂರ್ತಿ ಮಾತನಾಡಿ, ಪರೀಕ್ಷಾ ಮೇಲ್ವಿಚಾರಕರು, ವೀಕ್ಷಕರು, ಸಂವೀಕ್ಷಕರು, ಮಾರ್ಗಾಧಿಕಾರಿಗಳ ಕರ್ತವ್ಯಗಳು ಮತ್ತು ಅನುಸರಿಸಬೇಕಾದ ಸೂಚನೆಗಳ ಕುರಿತು ವಿವರವಾಗಿ ತಿಳಿಸಿದರು.

        ಸಭೆಯಲ್ಲಿ ಅಬಕಾರಿ ಜಿಲ್ಲಾ ಅಧಿಕಾರಿ ಟಿ.ನಾಗರಾಜಪ್ಪ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ಡಿಡಿಪಿಐ ಪರಮೇಶ್ವರಪ್ಪ, ಡಿಡಿಪಿಯು ಶೇಖರಪ್ಪ, ಬಿಇಓ ಸಿದ್ದಪ್ಪ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ವೀಕ್ಷಕರು, ಮಾರ್ಗಾಧಿಕಾರಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link