ಬೆಂಗಳೂರು
ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆಯ ಪ್ರಚಾರದ ವೇಳೆ ಸಂಸ್ಕೃತಿ ಮತ್ತು ಸಂಸ್ಕಾರ ರಹಿತ ಹೇಳಿಕೆ ನೀಡುತ್ತಾ ನಾಲಿಗೆ ಹರಿಯ ಬಿಡುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ,ಈಶ್ವರಪ್ಪ ಸೇರಿ ಬಿಜೆಪಿಯ ಕೆಲವು ನಾಯಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರದೇಶ ಕಾಂಗ್ರೆಸ್ ಮುಖಂಡರ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದೆ.
ಪ್ರಚಾರದ ವೇಳೆ ನಾಲಿಗೆ ಹರಿಯ ಬಿಡುತ್ತಾ ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ನಾಯಕರ ವಿರುದ್ದ ಕ್ರಮ ಕೈಗೊಳ್ಳುವಂತೆ ನಿಯೋಗದ ನೇತೃತ್ವ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಆಗ್ರಹಿಸಿದರು.
ದೂರು ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಥೋಡ್ ಅವರು ಲಿಂಗಾಯತ ಧರ್ಮದವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವುದು ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಎರಡು ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ಯಡಿಯೂರಪ್ಪ ಅವರು ಇಂತಹ ಹೇಳಿಕೆ ನೀಡಿ ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿದ್ದಾರೆ ಎಂದು ಆಪಾದಿಸಿದರು.
ಬಿಜೆಪಿಯ ಬಸವನಗೌಡ ಯತ್ನಾಳ್ ಅವರು ರಾಜಕೀಯ ದಿವಾಳಿತನ ಅನುಭವಿಸುತ್ತಿದ್ದರೂ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧವೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಮಾಜಿ ಸಂಸದ ವಿಜಯಸಂಕೇಶ್ವರ ಅವರು ಭಾರತ ದೇಶವನ್ನು ಇದುವರೆಗೆ ಆಳಿದ್ದು ಭಾರತೀಯರಲ್ಲ. ನಾವು ಗುಲಾಮರಾಗಿದ್ದೆವು. ಇನ್ನು ಮುಂದೆ ಮುಕ್ತರಾಗಬೇಕು ಎಂದು ನೆಹರು ಇಂದಿರಾಗಾಂಧಿ, ರಾಜೀವ್ ಗಾಂಧಿಯವರ ವಿರುದ್ಧ ವಾಟ್ಸಾಪ್‍ಗಳ ಮೂಲಕ ಅವಹೇಳನ ಮಾಡಿದ್ದಾರೆ. ಇವರ ಬಗ್ಗೆಯೂ ಸೈಬರ್ ಕ್ರೈಂಗೆ ದೂರು ಸಲ್ಲಿಸುವುದಾಗಿ ಪ್ರಕಾಶ್ ರಾಥೋಡ್ ತಿಳಿಸಿದರು.
ವಿಶ್ಲೇಷಣೆ ಬೇಡ
ಇಂತಹ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು. ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ನವದೆಹಲಿಯಿಂದ ಬೆಂಗಳೂರುವರೆಗೆ ಇಂತಹ ಸಂಸ್ಕಾರರಹಿತ ಹೇಳಿಕೆಗಳು ಬರುತ್ತಿವೆ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕೋಪಯೋಗಿ ಸಚಿವ ರೇವಣ್ಣ ಅವರು ಮಾತ್ರವಲ್ಲ ಎಲ್ಲ ಶಾಸಕರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ಟ್ವಿಟ್ಟರ್‍ನಲ್ಲಿ ಹೇಳಿದ್ದಾರೆ. ಇದರ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಳೆ ತೊಡಿಸಬೇಕು ಎಂದು ಸಂಸದೆ ಶೋಭಾಕರಂದ್ಲಾಜೆ ಅವರು ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಸ್ಮೃತಿ ಇರಾನಿ ಅವರು ಮನಮೋಹನ್ ಸಿಂಗ್ ಅವರಿಗೆ ಬಳೆ ತೊಡಿಸಬೇಕೆಂದು ಹೇಳಿಕೆ ನೀಡಿದ್ದರು. ಇಂದು ಪೆಟ್ರೋಲ್ -ಡೀಸಲ್ ಬೆಲೆ ಏರಿಕೆಯಾಗುವುದಕ್ಕೆ ಕಾರಣರಾಗಿರುವ ಪ್ರಧಾನಿ ನರೇಂದ್ರಮೋದಿ ಅವರಿಗೆ ಬಳೆ ತೊಡಿಸುವುದು ಸೂಕ್ತ ಎಂದು ವ್ಯಂಗ್ಯವಾಡಿದರು.