ಎಲ್ಲಾ ಇಲಾಖೆಗಳ ಸಮಗ್ರ ಮಾಹಿತಿ ಪ್ರಕಟಿಸಬೇಕು: ಕುಂದರನಹಳ್ಲಿ ರಮೇಶ್

ತುಮಕೂರು

      ಜಿಲ್ಲೆಯ ಗ್ರಾಮ ಪಂಚಾಯ್ತಿಗಳಿಂದ ಎಲ್ಲಾ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ವಿವರ, ಬಳಸಿರುವ ವೆಚ್ಚ, ಸರ್ಕಾರದಿಂದ ಮಂಜೂರಾಗಿರುವ ಹಣ, ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ಸಾಗಿರುವ ಹಣ, ಬಾಕಿ ಇರುವ ಯೋಜನೆಗಳು, ಉದ್ದೇಶಿತ ಯೋಜನೆಗಳು ಸೇರಿದಂತೆ ಎಲ್ಲದರ ಸಂಪೂರ್ಣ ವಿವರವನ್ನು ಸಾರ್ವಜನಿಕರಿಗೆ ಪ್ರಕಟಿಸಬೇಕು ಎಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂನ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಒತ್ತಾಯ ಮಾಡಿದ್ದಾರೆ.

     ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಶಾ ಸಮಿತಿ ಸದಸ್ಯರಾದ ತಾವು, 118 ದಿವಸಗಳಲ್ಲಿ ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ಮಾಡಲು ಗುರಿ, ಅವರಿಗೆ ಪೂರ್ಣಗೊಳಿಸಲು ಇರುವ ಅಡಚಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಯೋಚಿಸಲಾಗಿದೆ. ನಿಗದಿತ ಸಮಯದೊಳಗೆ ಪೂರ್ಣಗೊಳಿಸದಿದ್ದಲ್ಲಿ ಆಯಾ ಇಲಾಖೆಯ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

     ಜಿಲ್ಲೆಯ ಅನೇಕ ಚುನಾಯಿತ ಪ್ರತಿನಿಧಿಗಳು ಕೆಡಿಪಿ ಸಭೆಗಳಲ್ಲಿ ಭಾಗಿಯಾಗುವ ಆಸಕ್ತಿ ತೋರುವುದಿಲ್ಲ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಳಕಳಿ ಹೊಂದಿರುವುದಿಲ್ಲ. ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವುದಿಲ್ಲ ಎಂದರು.

     ತುಮಕೂರು ಜಿಐಎಸ್ ಇಲಾಖಾವಾರು ಗ್ರಾಮದ ಅಂಗನವಾಡಿಯಿಂದ ಆರಂಭಿಸಿ ಇಸ್ರೋವರೆಗೆ ಎಷ್ಟೆಷ್ಟು ಲೇಯರ್ ಅಪ್‍ಲೋಡ್ ಮಾಡಿದ್ದಾರೆ. ಇನ್ನೂ ಎಷ್ಟೆಷ್ಟು ಲೇಯರ್ ಅಪ್‍ಲೋಡ್ ಮಾಡಲಿದ್ದಾರೆ, ಇತಿಹಾಸ ಸಹಿತ ಪೂರ್ಣಗೊಳಿಸಲು ಎಷ್ಟು ಸಮಯ ಬೇಕಾಗುವುದು ಎಂದು ಪ್ರಶ್ನೆ ಮಾಡಿದರು.

      ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ವರದಿಯಂತೆ ವಿಧಾನಸಭಾ ಕ್ಷೇತ್ರವಾರು ನೀರಿನ ಲೆಕ್ಕ ಮಾಡಿ ಜಿಲ್ಲೆಗೆ ಕೊರತೆ ಇರುವ 16.83 ಟಿಎಂಸಿ ಅಡಿ ನೀರಿನ ಯೋಜನೆಗೆ ರೂ. 10,700 ಕೋಟಿ ಸರಿ ಇದೆಯೇ ಅಥವಾ ಬದಲಾವಾಣೆ ಮಾಡಬೇಕೆ ನಿರ್ಣಯ ಮಾಡಿ, ತುಮಕೂರು ಜಿಲ್ಲಾ ಸಮಗ್ರ ನೀರಾವರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

     ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ 341 ಸ್ಥಳೀಯ ಸಂಸ್ಥೆಗಳ ನೀರಿನ ಆಯ-ವ್ಯಯ, ಆಡಿಟ್ ಮತ್ತು ಸ್ಟ್ರಾಟಜಿ ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಎಲ್ಲಾ ಇಲಾಖೆಗಳಿಂದ 2019-20 ನೇ ಸಾಲಿನ ವರ್ಷದಲ್ಲಿ ಮಂಜೂರಾದ, ಖರ್ಚಾದ, ಉಳಿಕೆ ಹಣ ಅಥವಾ ಬಿಡುಗಡೆ ಮಾಡಬೇಕಾಗಿರುವ ಮೊತ್ತದ ಇಂಡೆಕ್ಸ್ ಅನ್ನು ವಿಧಾನಸಭಾ ಕ್ಷೇತ್ರವಾರು ಪ್ರಕಟಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳ ವಿವಿಧ ಇಲಾಖೆಗಳ ಹಣವನ್ನು ವಿವಿಧ ಬ್ಯಾಂಕ್‍ಗಳಲ್ಲಿ ಡಿಪಾಸಿಟ್ ಮಾಡಿರುವ ಹಣದ ಮಾಹಿತಿವುಳ್ಳ ಇಂಡೆಕ್ಸ್ ಅನ್ನು ಪ್ರಕಟಿಸಬೇಕು ಎಂದು ಕುಂದರನಹಳ್ಳಿ ರಮೇಶ್ ಒತ್ತಾಯಿಸಿದರು.

    ನದಿ ಜೋಡಣೆಗೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಾರಿಗೆ ತಂದು ಭಾರತ ದೇಶದ ಪ್ರತಿಯೊಂದು ಸರ್ವೆ ನಂಬರ್, ಗ್ರಾಮ, ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ, ರಾಜ್ಯವಾರು ಜನತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರು, ಕೃಷಿಗೆ ನೀರು, ಹೀಗೆ ವಾಟರ್ ಬಜೆಟ್, ವಾಟರ್ ಆಡಿಟ್, ವಾಟರ್ ಸ್ಟ್ರಾಟಜಿ ಮಾಡಲು ದೇಶದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು ತುಮಕೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿಯೂ ಸಹ ‘ಡಿಸ್ಟ್ರಿಕ್ಟ್ ಇರಿಗೇಷನ್ ಪ್ಲಾನ್’ ಮಾಡಿ ವರದಿ ಸಲ್ಲಿಸಿದ್ದಾರೆ.

     ಈ ವರದಿ ಪ್ರಕಾರ ತುಮಕೂರು ಜಿಲ್ಲೆಗೆ 2020 ಇಸವಿ ವೇಳೆಗೆ ಜನರಿಗೆ ಕುಡಿಯುವ ನೀರಿಗಾಗಿ 5.1 ಟಿ.ಎಂ.ಸಿ ಅಡಿ ನೀರು, ಜಾನುವಾರುಗಳಿಗೆ 1.12 ಟಿ.ಎಂ.ಸಿ ಅಡಿ ನೀರು, ಕೃಷಿಗೆ 84.03 ಟಿ.ಎಂ.ಸಿ ಅಡಿ ನೀರು, ಕೈಗಾರಿಕೆಗಳಿಗೆ 1.56 ಟಿ.ಎಂ.ಸಿ ಅಡಿ ನೀರು, ಇತರೆ ಉದ್ದೇಶಕ್ಕೆ 0.51 ಟಿ.ಎಂ.ಸಿ ಅಡಿ ನೀರು

    ಒಟ್ಟು 92.32 ಟಿ.ಎಂ.ಸಿ ಅಡಿ ನೀರಿನ ಅಗತ್ಯವಿದೆ ಎಂದು ವರದಿ ಸಿದ್ಧಪಡಿಸಿದ್ದಾರೆ. ಈ ನೀರಿನ ಬಜೆಟ್ ಮಾಡಿ ಮಳೆ, ಕೆರೆ, ನದಿ ಮೂಲ ಎಲ್ಲಾ ಸೇರಿ 45.802 ಟಿ.ಎಂ.ಸಿ ಅಡಿ ನೀರು, ಅಂತರ್ಜಲದಿಂದ 29.686 ಟಿ.ಎಂ.ಸಿ ಅಡಿ ನೀರು ಸೇರಿ ಒಟ್ಟು 83.88 ಟಿ.ಎಂ.ಸಿ ಅಡಿ ನೀರು ಈಗಾಗಲೆ ಜಿಲ್ಲೆಗೆ ದೊರೆಯುತ್ತಿದೆ. ಜಿಲ್ಲೆಗೆ ಕೇವಲ 16.83 ಟಿ.ಎಂ.ಸಿ ಅಡಿ ನೀರು ಕೊರತೆಯಾಗಲಿದೆ ಎಂದಿದ್ದಾರೆ ಎಂದು ಹೇಳಿದರು.

    ಹೇಮಾವತಿ ಯೋಜನೆಯಿಂದ ಅಚ್ಚುಕಟ್ಟಿಗೆ 14.41 ಟಿ.ಎಂ.ಸಿ ಅಡಿ ನೀರು, ಕುಡಿಯುವ ನೀರಿಗೆ 5.455 ಟಿ.ಎಂ.ಸಿ ಅಡಿ ನೀರು, ಒಟ್ಟು 19.865 ಟಿ.ಎಂ.ಸಿ ಅಡಿ ನೀರು, ಭದ್ರ್ರಾ ಮೇಲ್ದಂಡೆಯಿಂದ ಅಚ್ಚುಕಟ್ಟಿಗೆ 1.385 ಟಿ.ಎಂ.ಸಿ ಅಡಿ ನೀರು, ಕೆರೆಗಳಿಗೆ/ಕುಡಿಯುವ ನೀರಿಗೆ 3.025 ಟಿ.ಎಂ.ಸಿ ಅಡಿ ನೀರು, ಒಟ್ಟು 4.41 ಟಿ.ಎಂ.ಸಿ ಅಡಿ ನೀರು, ಎತ್ತಿನಹೊಳೆ ಯೋಜನೆಯಿಂದ ಕುಡಿಯುವ ನೀರಿಗೆ 2.433 ಟಿ.ಎಂ.ಸಿ ಅಡಿ ನೀರು, ಕೆರೆಗಳಿಗೆ 2.958 ಟಿ.ಎಂ.ಸಿ ಅಡಿ ನೀರು ಒಟ್ಟು 4.59 ಟಿ.ಎಂ.ಸಿ ಅಡಿ, ತುಂಗಭದ್ರಾ ನದಿಯಿಂದ ಕುಡಿಯುವ ನೀರಿಗಾಗಿ 0.745 ಎಂಸಿಎಫ್‍ಟಿ (0.75 ಟಿ.ಎಂ.ಸಿ ಅಡಿ), ಒಟ್ಟು 29.666 ಟಿ.ಎಂ.ಸಿ ಅಡಿ ನೀರು ಅಲೋಕೇಷನ್ ಆಗಿದೆ ಎಂದು ಕುಂದರನಹಳ್ಳಿ ರಮೇಶ್ ಹೇಳಿದ್ದಾರೆ.

    ಈ ಮಾಹಿತಿ ಪ್ರಕಾರ ಕೃಷಿಗೆ 15.846 ಟಿ.ಎಂ.ಸಿ ಅಡಿ ನೀರು ಮತ್ತು ಕುಡಿಯುವ ನೀರು ಹಾಗೂ ಕೆರೆಗಳಿಗೆ ತುಂಬಿಸಲು 13.82 ಟಿ.ಎಂ.ಸಿ ಅಡಿ ನದಿ ನೀರಿನ ಅಲೋಕೇಷನ್ ಇದೆ ಎಂದು ತಿಳಿಸಿದ ಅವರು, ನಿಗದಿತ ಸಮಯದೊಳಗೆ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link