ಚೀನಾದ ಡಿಂಗ್‌ಲಿರೇನ್ ಮಣಿಸಿದ ವಿಶ್ವದ ಅತಿಕಿರಿಯ ಚೆಸ್ ಚಾಂಪಿಯನ್
ಬೆಂಗಳೂರು:
ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಿದ್ದು ಚನ್ನೈನ ೧೮ ರ ಹರೆಯದ ಡಿ ಗುಕೇಶ್, ಕಳೆದ ಬಾರಿಯ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸುವ ಮೂಲಕ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವನಾಥನ್ ಆನಂದ್ ನಂತರ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಹಾಗೂ ವಿಶ್ವದ ಅತಿ ಕಿರಿಯ ಚೆಸ್ ಆಟಗಾರ ಎಂಬ ಹೆಗ್ಗಳಿಕೆಗೂ ಗುಕೇಶ್ ಪಾತ್ರರಾಗಿದ್ದಾರೆ.
ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆದ ೨೦೨೪ ರ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಕೊನೆಯ ಹಾಗೂ ೧೪ನೇ ಗೇಮ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ೧೮ ವರ್ಷದ ಗ್ರ್ಯಾಂಡ್ಮಾಸ್ಟರ್ ಡಿ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಈ ರೋಚಕ ಹಣಾಹಣಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ಚೀನಾದ ಡಿಂಗ್ ಲಿರೆನ್‌ಗೆಚೆಕ್ ಮೇಟ್ ನೀಡಿದ ಗುಕೇಶ್, ವಿಶ್ವನಾಥನ್ ಆನಂದ್ ನಂತರ ವಿಶ್ವ ಚೆಸ್ ಚಾಂಪಿಯನ್ ಷಿಪ್ ಗೆದ್ದ ಎರಡನೇ ಭಾರತೀಯನೆನಿಸಿಕೊಂಡಿದ್ದಾರೆ. ಇದಲ್ಲದೆ ಕೇವಲ ೧೮ನೇ ವಯಸ್ಸಿಗೆ ಚಾಂಪಿಯನ್ ಆಗುವ ಮೂಲಕ ಚೆಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ಪಟು ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.
೧೪ ಸುತ್ತುಗಳಲ್ಲೂ ರೋಚಕ ಹಣಾಹಣಿ: ಹದಿನೈದು ದಿನಗಳ ಕಾಲ ನಡೆದ ಈ ವಿಶ್ವ ಚೆಸ್ ಪಂದ್ಯಾವಳಿಯಲ್ಲಿ ಉಭಯ ಆಟಗಾರರು ಪ್ರಬಲ ಪೈಪೋಟಿ ನೀಡಿದರು. ಅಂತಿಮ ಸುತ್ತಿಗೂ ಮುನ್ನ ಆಡಿದ ೧೩ ಸುತ್ತುಗಳಲ್ಲಿ ಇಬ್ಬರೂ ತಲಾ ೨ ಪಂದ್ಯ ಗೆದ್ದಿದ್ದರೆ, ಉಳಿದ ೯ ಪಂದ್ಯಗಳು ಡ್ರಾ ಆಗಿದ್ದವು. ಆದ್ದರಿಂದ ಇಬ್ಬರ ಬಳಿಯೂ ತಲಾ ೬.೫ ಅಂಕಗಳಿದ್ದವು. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯ ನಿರ್ಣಾಯಕವಾಗಿತ್ತು .
ಒಂದು ವೇಳೆ ಈ ಪಂದ್ಯವೂ ಡ್ರಾ ಆಗಿದ್ದರೆ ಇಬ್ಬರೂ ತಲಾ ೭ ಅಂಕ ಗಳಿಸಿ ಟೈಬ್ರೇಕರ್ ಮೂಲಕ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ ಇದಕ್ಕೆ ಅವಕಾಶ ನೀಡದ ಗುಕೇಶ್ ಅಂತಿಮವಾಗಿ ೭.೫- ೬.೫ ಅಂಕಗಳ ಅಂತರದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಗುಕೇಶ್ ಸಾಧನೆಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಷ್ಟ್ರಪತಿ, ಪ್ರಧಾನಿ ಸೇರಿ ದೇಶ ವಿದೇಶದ ಹಲವು ಗಣ್ಯರು ಕ್ರೀಡಾಪಟುಗಳು ಗುಕೇಶ್‌ಗೆ ಅಭಿನಂದನೆ ಸುರಿಮಳೆಗೈದಿದ್ದಾರೆ.
ರಾಜ್ಯ ಚೆಸ್ ಅಸೋಸಿಯೇಷನ್ ಸಂತಸ
ಸಿಂಗಾಪುರದಲ್ಲಿ ಜರುಗಿದ ವರ್ಲ್ಡ್ ಚಾಂಪಿಯನ್ ಶಿಪ್‌ನಲ್ಲಿ ಭಾರತೀಯ ಪ್ರತಿಭೆ ಗುಕೇಶ್ ಅವರನ್ನು ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಪರವಾಗಿ ತೆರಳಿದ್ದ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಹಾಗೂ ಪ್ರಜಾಪ್ರಗತಿ ಸಹ ಸಂಪಾದಕ ಟಿ.ಎನ್.ಮಧುಕರ್ ಅವರು ಗುಕೇಶ್ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಅತ್ಯಂತ ಕಿರಿಯ ಚೆಸ್ ಆಟಗಾರ ಗುಕೇಶ್ ಸಾಧನೆಗೈಯ್ಯುವುದನ್ನು ಇಡೀ ಭಾರತವೇ ಎದುರು ನೋಡುತ್ತಿತ್ತು. ಗುಕೇಶ್ ಸಾಧನೆ ಚೆಸ್ ಆಟಗಾರರಿಗೆ ಸ್ಪೂರ್ತಿಯೆನಿಸಿದೆ. ರಾಜ್ಯ ಚೆಸ್ ಅಸೋಸಿಯೇಷನ್ ಗುಕೇಶ್ ಸಾಧನೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ ಎಂದು ತಿಳಿಸಿಸಿದ್ದಾರೆ.








