ಬಳ್ಳಾರಿ:
ಕೇಂದ್ರದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ವಿವಿಧ ಕಾಯ್ದೆಗಳ ತಿದ್ದುಪಡಿಗಳನ್ನು ವಿರೋಧಿಸಿ ನಾನಾ ಪ್ರಗತಿಪರ ಸಂಘಟನೆಗಳು, ರಾಜಕೀಯ ಪಕ್ಷಗಳ ಸಹಯೋಗದಲ್ಲಿ ಇದೇ ಸೆ.28 ರಂದು ಸೋಮವಾರ ಅಖಿಲ ಭಾರತ ರೈತ ಸಮನ್ವಯ ಸಮಿತಿ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳುತ್ತಿರುವ ಕರ್ನಾಟಕ ಬಂದ್ ಬಳ್ಳಾರಿ ಜಿಲ್ಲೆಯಲ್ಲೂ ಆಚರಿಸಲಾಗುವುದು ಎಂದು ಸಮಿತಿಯ ಮುಖಂಡರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕೆಪಿಆರ್‍ಎಸ್ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ್, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೋವಿಡ್ ಸೋಂಕು, ಲಾಕ್‍ಡೌನ್ ನೆಪವೊಡ್ಡಿ ಕೃಷಿ ಮಸೂದೆ, ಎಪಿಎಂಸಿ, ವಿದ್ಯುಚ್ಛಕ್ತಿ, ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಜಾರಿಗೊಳಿಸಿದೆ. ಈ ತಿದ್ದುಪಡಿ ಕಾಯ್ದೆಗಳಿಂದ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಕಲ್ಪಿಸಲಿವೆ. ಕೇಂದ್ರ ಸರ್ಕಾರ ಮಾರುಕಟ್ಟೆಯನ್ನು ರೈತರ ಬಾಗಿಲಿಗೆ ಕೊಂಡೊಯ್ಯುವುದು ಎಂದು ಹೇಳುತ್ತಿದೆ.
ಆದರೆ, ರೈತರು ತಾವು ಬೆಳೆದ ಉತ್ಪನ್ನವನ್ನು ಎಪಿಎಂಸಿಗೆ ತರುವ ಮುನ್ನವೇ ಕೃಷಿ ಮುಂಗಡ ಒಪ್ಪಂದವಾಗಿದೆ. ಇದಕ್ಕೂ ಮುನ್ನ ಎಪಿಎಂಸಿಯಿಂದ ಹೊರಗೆ ಖರೀದಿಸಿದರೆ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ, ಇದೀಗ ನೇರವಾಗಿ ರೈತರ ಬಳಿಗೆ ಹೋಗಿ ಖರೀದಿಸಲು ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದ ಎಪಿಎಂಸಿಗೆ ಲಭಿಸುತ್ತಿದ್ದ ಶೇ.2 ರಷ್ಟು ತೆರಿಗೆ ಹಣವೂ ಕಡಿತವಾಗಲಿದೆ. ಇದೊಂದು ಅವೈಜ್ಞಾನಿಕ ಕಾಯ್ದೆಯಾಗಿದ್ದು, ಸಣ್ಣ ವ್ಯಾಪಾರಿಗಳಿಗೂ ಮಾರಕವಾಗಿದೆ. ಹಿಂದುತ್ವದ ಹೆಸರಲ್ಲಿ ವಿದೇಶಿ ಕಂಪನಿಗಳಿಗೆ ಮಾರಾಟ ಮಾಡುವುದಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವೂ ದಿ. ಮಾಜಿ ಸಿಎಂ ದೇವರಾಜ ಅರಸು ಅವಧಿಯಲ್ಲಿ ಜಾರಿಗೆ ತಂದಿದ್ದ ಭೂ ಸುಧಾರಣೆ ಕಾಯ್ದೆಗೆ ಇದೀಗ ಪುನಃ ತಿದ್ದುಪಡಿ ಮಾಡಿ ಜಾರಿಗೆ ತಂದಿದೆ. ಈ ಮೊದಲು ರೈತರಲ್ಲದವರಿಗೆ ಕೃಷಿ ಜಮೀನು ಖರೀದಿಗೆ ಅವಕಾಶ ಇರಲಿಲ್ಲ. ಆದರೆ, ಇದೀಗ 110 ಯುನೀಟ್ (1 ಯುನೀಟ್ 4.80 ಎಕರೆ) ಎಕರೆ ಜಮೀನನ್ನು ಒಬ್ಬರು ಖರೀದಿಸಲು ಅವಕಾಶ ಕಲ್ಪಿಸಿದೆ. ಈ ಕಾಯ್ದೆಗಳನ್ನು ವಿರೋಧಿಸಿ ಈಗಾಗಲೇ ಪಂಜಾಬ್, ಹರ್ಯಾಣ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ದೆಹಲಿಯಲ್ಲಿ 250 ರೈತ ಸಂಘಟನೆಗಳು ಹೋರಾಟ ನಡೆಸುತ್ತಿವೆ ಎಂದು ತಿಳಿಸಿದರು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ, ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಸಣ್ಣ ರೈತರಿಗೆ ತೊಂದರೆಯಾಗಲಿದೆ. ಗ್ರಾಮೀಣ ಭಾಗದಲ್ಲಿನ ಸಣ್ಣರೈತರು ಹಣದ ಆಸೆಗೆ ಭೂಮಿಯನ್ನು ಮಾರಿಕೊಂಡರೂ ಅಚ್ಚರಿಪಡುವಂತಿಲ್ಲ. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ 10 ಎಚ್‍ಪಿ ವರೆಗೆ ವಿದ್ಯುತ್‍ನ್ನು ಉಚಿತವಾಗಿ ನೀಡಲಾಗುತ್ತಿತ್ತು. ಇದೀಗ ವಿದ್ಯುತ್‍ನ್ನು ಸಹ ಖಾಸಗೀಕರಣ ಮಾಡುವುದರಿಂದ 1 ಯುನೀಟ್ ವಿದ್ಯುತ್ ಬಳಸಿದರೂ ಹಣ ಪಾವತಿಸ ಬಂದರೂ ಅಚ್ಚರಿ ಪಡುವಂತಿಲ್ಲ. ಈ ಕುರಿತು ಬೆಂಗಳೂರಿನಲ್ಲಿ ಹಲವಾರು ಸಂಘಟನೆಗಳು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರೂ ಫಲಕಾರಿಯಾಗಿಲ್ಲ. ಹೀಗಾಗಿ ಸೆ.28 ರಂದು ಸಂಪೂರ್ಣ ಬಂದ್ ಆಚರಿಸಲಾಗುವುದು ಎಂದವರು ತಿಳಿಸಿದರು.
ಕರವೇ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಮಾತನಾಡಿ, ಸೆ.28 ರಂದು ರೈತರ ಬಂದ್‍ಗೆ ಕರವೇ ಸಂಘಟನೆಯು ಸಹ ಬೆಂಬಲ ಸೂಚಿಸುತ್ತಿದೆ. ಅಂದು ಬೆಳಗ್ಗೆ ಮೊದಲಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ್ ನಡೆಸಿ, ನಂತರ ಗಡಗಿ ಚನ್ನಪ್ಪ ವೃತ್ತದಲ್ಲಿ ಸಭೆ ಸೇರಲಾಗುವುದು. ಬಳಿಕ ಬೈಕ್‍ಗಳ ಮೂಲಕ ಜಿಲ್ಲೆಯಾದ್ಯಂತ ರ್ಯಾಲಿ ನಡೆಸಿ ಬೆಳಗ್ಗೆಯಿಂದ ಸಂಜೆವರೆಗೂ ಸಂಪೂರ್ಣವಾಗಿ ಬಂದ್ ಆಚರಿಸಲಾಗುವುದು ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಸಂಗನಕಲ್ಲು ಕೃಷ್ಣಾ, ರಂಜಾನ್‍ಸಾಬ್ ಇತರರು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಇ.ಹನುಮಂತಪ್ಪ, ಪಾಲಿಕೆ ಮಾಜಿ ಸದಸ್ಯೆ ಪರ್ವಿನ್‍ಬಾಬು, ಕಾಂಗ್ರೆಸ್ ಮುಖಂಡ ಹುಮಾಯೂನ್‍ಖಾನ್, ಸಿಪಿಎಂನ ಜೆ.ಸತ್ಯಬಾಬು, ಗುರುಸಿದ್ದಮೂರ್ತಿ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
