ಕೆ.ಎಚ್.ಮುನಿಯಪ್ಪ ವಿರುದ್ಧ ದೂರು..!

ಬೆಂಗಳೂರು

   ಲೋಕಸಭಾ ಚುನಾವಣೆಯಲ್ಲಿ ಸೋಲಿನ ಪರಾಮರ್ಶೆ ಹಾಗೂ ಕಾರಣಗಳ ಪತ್ತೆಗೆ ಕೆಪಿಸಿಸಿ ರಚಿಸಲಾಗಿರುವ ಸತ್ಯಶೋಧನಾ ಸಮಿತಿಗೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ದೂರು ಸಲ್ಲಿಸಿದ್ದಾರೆ.

   ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ಸೋಲಿಗೆ ಸ್ವಯಂಕೃತ ಅಪರಾಧಗಳು, ಪಕ್ಷ ವಿರೋಧಿ ಚಟುವಟಿಕೆಗಳು ಕಾರಣವೇ ಹೊರತು ಬೇರಾರೂ ಅಲ್ಲ ಎಂದು ದೂರಿನಲ್ಲಿ ಸ್ಪಷ್ಟಪಡಿಸಲಾಗಿದೆ.2008ರ ವಿಧಾನಸಭಾ ಚುನಾವಣೆಗಳಲ್ಲಿ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ವಿರುದ್ಧ ಕೆಲಸ ಮಾಡಿ ಪಕ್ಷೇತರ ಅಭ್ಯರ್ಥಿ ಆರ್.ವರ್ತೂರು ಪ್ರಕಾಶ್ ಅವರನ್ನು ಗೆಲ್ಲಿಸಿರುತ್ತಾರೆ. ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಸಂಪಂಗಿ ಪರ ಕೆಲಸ ನಿರ್ವಹಿಸಿ ಎನ್.ಎಸ್.ಯು.ಐ ಮುಖಂಡ ಶ್ರೀನಿವಾಸ್ ಸೋಲಿಗೆ ಮುನಿಯಪ್ಪ ಪ್ರಮುಖ ಪಾತ್ರವಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

   2013 ರಲ್ಲಿ ಮೇಲ್ಮನೆ ಸದಸ್ಯ ನಸೀರ್ ಅಹಮದ್ ಅವರನ್ನು ಮನವೊಲಿಸಿ ಕೋಲಾರದಿಂದ ಸ್ಪರ್ಧಿಸುವಂತೆ ಮುಸಲ್ಮಾನ ಮತಗಳು ತಮ್ಮ ಪರವಾಗಿವೆ ಎಂದು ಆಶ್ವಾಸನೆ ನೀಡಿ ಅವರ ಬೆಂಬಲಕ್ಕೆ ನಿಲ್ಲುವುದಾಗಿ ವಾಗ್ದಾನ ನೀಡಿ, ಬಳಿಕ ನಸೀರ್ ಅವರ ಹೊಟ್ಟೆಗೆ ಚೂರಿ ಹಾಕುವ ಕೆಲಸ ಮಾಡಿದರು. ವರ್ತೂರು ಪ್ರಕಾಶ್ ಬಹಿರಂಗವಾಗಿಯೇ ತಮ್ಮ ಗೆಲುವಿಗೆ ಕೆ.ಎಚ್.ಮುನಿಯಪ್ಪ ಅವರೇ ಕಾರಣ ಎಂದು ಬಹಿರಂಗವಾಗಿ ಹೇಳಿಕೆಯನ್ನೂ‌ ನೀಡಿದ್ದಾರೆ.

   2018ರ ಕೋಲಾರ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಡಿ.ಸಿ.ಸಮೀರ್ ಅವರ ಸೋಲಿಗೂ ಕಾರಣರಾಗಿರುವ ಮುನಿಯಪ್ಪ, ಜೆಡಿಎಸ್ ಅಭ್ಯರ್ಥಿಗೆ ಸಹಕರಿಸಿರುತ್ತಾರೆ. ಅಲ್ಲದೆ ರೈಲ್ವೆ ಕೋಚ್ ಫ್ಯಾಕ್ಟರಿ, ವಿಶೇಷ ರೈಲುಗಳನ್ನು ಕೋಲಾರ ಕ್ಕೆ ತರುವುದಾಗಿ ಸದಾ ಸುಳ್ಳು ಭರವಸೆಗಳನ್ನು ಕ್ಷೇತ್ರದ ಜನತೆಗೆ ನೀಡಿದ್ದು, ಕೆಪಿಸಿಸಿ ಪದಾಧಿಕಾರಿಗಳನ್ನಾಗಿ ತಮ್ಮ ಸಂಬಂಧಿಕರನ್ನು ನೇಮಕಮಾಡಿರುವುದು ಹಾಗೂ ಜಿಲ್ಲೆಯ ಮಹತ್ವಾಕಾಂಕ್ಷಿ ಉದ್ದೇಶಿತ ಕೆ.ಸಿ.ವ್ಯಾಲಿ ಯೋಜನೆಗೆ ಅಡ್ಡಿ ಪಡಿಸಿರುವುದು ಸೇರಿದಂತೆ ಹಲವಾರ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿರುವ ಕೆ.ಎಚ್.ಮುನಿಯಪ್ಪ, ಜನರ ವಿಶ್ವಾಸ ಕಳೆದುಕೊಂಡರು.

   ಇತಿಹಾಸದಲ್ಲಿ ಮೊದಲ ಬಾರಿಗೆ ಕೋಲಾರ ಜಿಲ್ಲೆಯಲ್ಲಿ ಪಕ್ಷ ವಿರೋಧಿ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ. ಹೀಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಅವರ ಸೋಲಿಗೆ ಅವರ ಸ್ವಯಂಕೃತ ಅಪರಾಧಗಳೇ ಕಾರಣ ಎಂದು ದೂರಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ವಿವರಿಸಿದ್ದಾರೆ.

    ಲೋಕಸಭಾ ಚುನಾವಣೆ ಬಳಿಕ ಕೆ.ಎಚ್.ಮುನಿಯಪ್ಪ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅಲ್ಲದೇ ತಮ್ಮ ಸೋಲಿಗೆ ರಮೇಶ್ ಕುಮಾರ್ ಕಾರಣರಾಗಿದ್ದು, ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಕೆಪಿಸಿಸಿ ಹಾಗೂ ಹೈಕಮಾಂಡ್ ಗೆ ದೂರನ್ನು ನೀಡಿದ್ದರು. ಇತ್ತೀಚೆಗೆ ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಕೆ.ಎಚ್.ಮುನಿಯಪ್ಪ ನಡುವೆ ಏಕವಚನದಲ್ಲಿ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಆದರೆ ಉಭಯ ನಾಯಕರು ಹೊರಗೆ ಈ ಬಗ್ಗೆ ಸ್ಪಷ್ಟನೆ ನೀಡಿ ಯಾವುದೇ ವಾಗ್ವಾದ ನಡೆದಿರಲಿಲ್ಲ ಎಂದು ಸ್ಪಷ್ಪಪಡಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap