ತುಮಕೂರು
ರೈತರು ಕೃಷಿ ಪೂರಕ ಚಟುವಟಿಕೆಗಳಾದ ಕುರಿ, ಮೇಕೆ ಕೋಳಿ ಸಾಕಣೆ, ಹೈನುಗಾರಿಕೆ, ರೇಷ್ಮೆ, ಅರಣ್ಯಕೃಷಿ, ಸಾವಯವ ಗೊಬ್ಬರ ಉತ್ಪಾದನಾ ಘಟಕಗಳನ್ನು ನಿರ್ಮಿಸಿಕೊಂಡು ಸಮಗ್ರ ಕೃಷಿ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ತಿಳಿಸಿದರು.
ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕೃಷಿ ಆಯುಕ್ತರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ತಂಡ ಇಂದು ಕೊರಟಗೆರೆ ತಾಲ್ಲೂಕು, ಸಿ.ಎನ್.ದುರ್ಗ ಹೋಬಳಿಯ ಬರಕ ಗ್ರಾಮದ ರೈತರಾದ ಶ್ರೀ ದೊಡ್ಡಯ್ಯ ರವರು ಅಳವಡಿಸಿರುವ ಸಮಗ್ರ ಕೃಷಿ ಪದ್ದತಿಯ ತಾಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ರೈತರು ನಿರ್ಮಿಸಿಕೊಂಡಿರುವ ಬಯೋಡೈಜೆಸ್ಟರ್ ಘಟಕ, ಕೃಷಿಹೊಂಡ, ನೀರು ಸಂಗ್ರಹಿಸುವ ಕಟ್ಟೆ, ವಿವಿಧ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳನ್ನು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿದರು. ಈ ರೀತಿ ಹೈನುಗಾರಿಕೆ, ಕೋಳಿ ಸಾಕಣೆ, ಮೇಕೆ ಸಾಕಾಣಿಕೆ ಮಾಡುತ್ತಿರುವ ಇವರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣ, ರೇಷ್ಮೆ ಸಾಕಾಣಿಕೆ ಶೆಡ್ ಮತ್ತು ಅರಣ್ಯ ಸಸಿಗಳನ್ನು ನೀಡಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ, ಪಾತಗಾನಹಳ್ಳಿ ಗ್ರಾಮದ ನಟರಾಜ್ ಅವರ “ಶೂನ್ಯ ಬಂಡವಾಳದಿಂದ ಅಧಿಕ ಲಾಭ” ಕಾರ್ಯಕ್ರಮದಡಿ ಅಳವಡಿಸಿರುವ ತಾಕಿಗೆ ಭೇಟಿ ನೀಡಿ ಅವರು ನಿರ್ಮಿಸಿಕೊಂಡಿರುವ ಜೀವಾಮೃತ ಉತ್ಪಾದನಾ ಘಟಕ ಬಯೋಡೈಜೆಸ್ಟರ್, ಮಲ್ಟಿ ಟೆರೇಸ್ ಕ್ರಾಪಿಂಗ್ ಸಿಸ್ಟಂ ನಲ್ಲಿ ಅಳವಡಿಸಿರುವ ಬೆಳೆ ಪದ್ದತಿಗಳು, ಹಾಗೂ ನಾಟಿ ಹಸುಗಳ ಸಾಕಣೆ ಮತ್ತು ಜೈವಾನಿಲ ಘಟಕವನ್ನು ವೀಕ್ಷಿಸಿದರು.
ಈ ರೀತಿ ಉತ್ತಮ ರೀತಿಯಲ್ಲಿ ಶೂನ್ಯ ಬಂಡವಾಳ ಪದ್ದತಿಯನ್ನು ಹೆಚ್ಚಿನ ರೈತರು ಅಳವಡಿಸಿಕೊಂಡಲ್ಲಿ ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಬೆಳೆಯಬಹುದು ಎಂದು ಅವರು ತಿಳಿಸಿದರು. ನಂತರ ತಾಲ್ಲೂಕಿನ ಬರಕ ಮತ್ತು ಬುಕ್ಕಾಪಟ್ನಾ ಗ್ರಾಮಗಳ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಅಂಗನವಾಡಿಯಿಂದ ದೊರೆಯುವ ಆಹಾರ ಮತ್ತು ಆಟದ ಸಾಮಾನುಗಳ ಕುರಿತು ಚರ್ಚಿಸಿದರು. ಅಂಗನವಾಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಅಧಿಕಾರಿಗಳಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು.
ನಂತರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭೇಟಿ ನೀಡಿ ಯಾರ್ಡ್‍ನ ದ್ವಾರಗಳ ಬಳಿ ರೈತರು ಪ್ರವೇಶಿಸಿದಾಗ ರೈತನ ಬಗ್ಗೆ ಹಾಗೂ ಮಾರಾಟಕ್ಕೆ ತಂದಿರುವ ಕೃಷಿ ಉತ್ಪನ್ನಗಳ ಕುರಿತು ನೋಂದಣಿಯಾಗುವ ಡಿವೈಸ್ ಬಗ್ಗೆ ಯಾರ್ಡ್‍ನ ಕಾರ್ಯದರ್ಶಿ ಪುಷ್ಪ ಅವರಿಂದ ಮಾಹಿತಿ ಪಡೆದರು. ನಂತರ ಯಾರ್ಡ್‍ನ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿದರು. ಯಾರ್ಡ್‍ಗೆ ಬರುವ ರೈತರಿಗೆ ಶೌಚಾಲಯ ಮತ್ತು ಸ್ನಾನದ ಗೃಹದ ವ್ಯವಸ್ಥೆಯ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
ಹಿರೇಹಳ್ಳಿಯಲ್ಲಿರುವ ಕೃಷಿ ವಿಜ್ಷಾನ ಕೇಂದ್ರಕ್ಕೆ ಭೇಟಿ ನೀಡಿದ ಈ ತಂಡವು ಮುಖ್ಯಸ್ಥರಾದ ಡಾ. ಲೋಗಾನಂದನ್ ಅವರಿಂದ ಕೇಂದ್ರದ ವಿವಿಧ ಸೇವೆಗಳ ಕುರಿತು ಮಾಹಿತಿ ಪಡೆದು ಸೀಡ್‍ಬ್ಯಾಂಕ್ ಮತ್ತು ಕೃಷಿ ಪ್ರಾತ್ಯಕ್ಷಿಕೆಯ ತಾಕುಗಳನ್ನು ವೀಕ್ಷಿಸಿದರು ಹಾಗೂ ಕೇಂದ್ರದಲ್ಲಿ ನಡೆಯುತ್ತಿದ್ದ ನೈಸರ್ಗಿಕ ಕೃಷಿ ಕುರಿತು ತರಬೇತಿಯಲ್ಲಿನ ಶಿಬಿರಾರ್ಥಿಗಳ ಜೊತೆ ಮಾತುಕತೆ ನಡೆಸಿದರು.
ಕೃಷಿ ಇಲಾಖೆಯ ವ್ಯಾಪ್ತಿಗೆ ಬರುವ ಹೀರೆಹಳ್ಳಿಯಲ್ಲಿರುವ ತುಮಕೂರು ಜಿಲ್ಲೆ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಸಂಸ್ಕರಣಾ ಯಂತ್ರಗಳು ಮತ್ತು ಅವುಗಳ ಕಾರ್ಯವೈಖರಿ, ಸಿರಿಧಾನ್ಯಗಳ ಮಾರಾಟ ವ್ಯವಸ್ಥೆ ಕುರಿತು ಒಕ್ಕೂಟದ ಅಧ್ಯಕ್ಷರಾದ ಗೋವಿಂದರಾಜು ಅವರಿಂದ ಮಾಹಿತಿ ಪಡೆದು ಕೃಷಿ ಇಲಾಖೆಯು ಜಿಲ್ಲಾಮಟ್ಟದಲ್ಲಿ ಸಿರಿಧಾನ್ಯ ಮೇಳ ಆಯೋಜನೆ ಮಾಡುವುದನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕೃಷಿ ಆಯುಕ್ತರಾದ ಬ್ರಿಜೇಶ್ ಕುಮಾರ್ ದೀಕ್ಷಿತ್, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್, ಮಧುಗಿರಿ ಎಸಿ ಚಂದ್ರಶೇಖರಯ್ಯ, ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಯಸ್ವಾಮಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ರಘು, ಕೊರಟಗೆರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್. ನಾಗರಾಜು, ತುಮಕೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎನ್. ಕೆಂಗೇಗೌಡ, ಉಪ ಕೃಷಿ ನಿರ್ದೇಶಕ ಉಮೇಶ್, ಗೂಳೂರು ಹೋಬಳಿ ಕೃಷಿ ಅಧಿಕಾರಿ ಶೋಭಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
