ಏಕಾಗ್ರತೆ, ಸತತ ಪರಿಶ್ರಮದಿಂದ ಗುರಿ ಸಾಧಿಸಿ : ಜಿಲ್ಲಾಧಿಕಾರಿ ಡಾ. ವೆಂಕಟೇಶ ಕರೆ

ಹಾವೇರಿ:

     ಏಕಾಗ್ರತೆ ಸತತ ಪರಿಶ್ರಮದಿಂದ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನಿಶ್ಚಿತವಾದ ಗುರಿ ಸಾಧಿಸಿ ಪಾಲಕರು, ಶಿಕ್ಷಕರು ಹಾಗೂ ಜಿಲ್ಲೆಗೆ ಕೀರ್ತಿ ತರುವಂತೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಅವರು ಕರೆ ನೀಡಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶಿಗ್ಗಾಂವಿ ತಾಲೂಕು ಜೆಕಿನಕಟ್ಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 14 ದಿನಗಳ ಪರೀಕ್ಷಾ ಪೂರ್ವ ತಯಾರಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

     ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪ್ರಮುಖ ಘಟ್ಟವಾಗಿದೆ. ಇದರಲ್ಲಿ ಉನ್ನತ ಶ್ರೇಣಿ ಪಡೆದರೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು, ವಿವಿಧ ಕೋರ್ಸ್ ಆಯ್ದುಕೊಳ್ಳಲು ಅನುಕೂಲವಾಗಲಿದೆ. ಈ ಹಂತದಲ್ಲಿ ಚಂಚಲತೆಯನ್ನು ತೊರೆದು ಏಕಾಗ್ರತೆಯಿಂದ ಅಧ್ಯಯನ ಮಾಡಿ ಎಂದು ಹೇಳಿದರು.

    ಸಾಧನೆಗೆ ಬಡತನ, ಅಂತಸ್ತು ಅಡ್ಡಿ ಬರಬಾರದು ಎಂಬ ದೃಷ್ಠಿಯಿಂದ ಸರ್ಕಾರ ಹಲವು ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿದೆ. ಉತ್ತಮವಾದ ವಾತಾವರಣದಲ್ಲಿ ವಸತಿ ಶಾಲೆ ನಿರ್ಮಿಸಿದೆ. ಹೆಚ್ಚಿನ ಸಾಧನೆಗಾಗಿ ಈ ಶಿಬಿರವನ್ನು ಆಯೋಜಿಸಿ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಆತ್ಮವಿಶ್ವಾಸದಿಂದ ನೀವು ಪರೀಕ್ಷೆ ಎದುರಿಸಲು ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.

     ಶಿಬಿರದ ಅವಧಿಯಲ್ಲಿ ಕೇವಲ ಶೈಕ್ಷಣಿಕ ಚಟುವಟಿಕೆಗಳಲ್ಲದೇ ನಿಮ್ಮ ವ್ಯಕ್ತಿತ್ವ ವಿಕಸನ, ಮಾನಸಿಕ ಹಾಗೂ ದೈಹಿಕ ದೃಢತೆಗಾಗಿ ಯೋಗ, ವ್ಯಾಯಾಮದಂತಹ ಅಂಶಗಳನ್ನು ಅಳವಡಿಸಿದೆ. ಸರ್‍ಎಂ ವಿಶ್ವೇಶ್ವರಯ್ಯ, ಐಸ್ಟಿನ್‍ನಂತಹ ಸಾಧಕರು ತಮ್ಮ ಶ್ರಮ, ಶ್ರದ್ಧೆಯಿಂದಲೇ ಬೆಳೆದವರು. ಇವರ್ಯಾರು ಚಿನ್ನದ ಚಮಚೆ ಬಾಯಲ್ಲಿ ಇಟ್ಟುಕೊಂಡು ಶ್ರೀಮಂತರಾಗಿ ಬೆಳೆದವರಲ್ಲ, ವಿದ್ಯಾರ್ಥಿ ಜೀವನದಲ್ಲಿ ಇವರು ಕಷ್ಟವನ್ನು ಅನುಭವಿಸಿದವರು.

     ಬೀದಿ ದೀಪದ ಬೆಳಕಿನಲ್ಲಿ ಅಧ್ಯಯನ ಮಾಡಿದವರು. ನಿಮ್ಮಂತೆಯೇ ಮರಗುಳಿತನದ ಸಮಸ್ಯೆ ಎದುರಿಸಿದವರು. ಆದರೆ, ದೃಢ ವಿಶ್ವಾಸ ಸತತ ಪರಿಶ್ರಮದಿಂದ ಮಹನೀಯರಾಗಿ ಬೆಳೆದು ಸಮಾಜ ಹಾಗೂ ದೇಶಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ಆದರ್ಶಗಳು ನಿಮ್ಮ ವ್ಯಾಸಂಗಕ್ಕೆ ಸ್ಪೂರ್ತಿಯಾಗಲಿ ಎಂದು ಹಾರೈಸಿದರು.

     ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಶಿಲ್ಪಾನಾಗ್ ಅವರು ಮಾತನಾಡಿ, ವಿದ್ಯಾರ್ಥಿಗಲ್ಲಿ ಸಾಧನೆಯ ಕನಸು ಮತ್ತು ಗುರಿ ಇದ್ದರೆ ಕಡುಬಡವ, ಹಳ್ಳಿಗರು ಎನ್ನದೇ ಎಂತಹ ಮೇಲ್ಮಟ್ಟಕ್ಕಾದರೂ ಏರಬಹುದು. ನಿಮ್ಮ ಭವಿಷ್ಯ ರೂಪಗೊಳ್ಳಲು ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಹಂತವಾಗಿದೆ. ಈ ಕಾರಣದಿಂದ ಒಂದೇ ಸೂರಿನಡಿ 500 ವಿದ್ಯಾರ್ಥಿಗಳನ್ನು ಸೇರಿಸಿ ಪರೀಕ್ಷೆ ಎದುರಿಸುವ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರವನ್ನು ಆಯೋಜಿಸಲಾಗಿದೆ. ಶ್ರದ್ಧೆಯಿಂದ ಶಿಬಿರದಲ್ಲಿ ನೀಡುವ ಸಲಹೆಗಳನ್ನು ಅಧ್ಯಯನದಲ್ಲಿ ಅಳವಡಿಸಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳುವಂತೆ ಕರೆ ನೀಡಿದರು.

     ಶಿಬಿರದ ಸಂಪನ್ಮೂಲ ವ್ಯಕ್ತಿ ಡಾ. ಗುರುರಾಜ ಬುಲಬುಲೆ ಮಾತನಾಡಿ, ಆಸಕ್ತಿ ವಹಿಸಿ ಅಧ್ಯಯನ ಮಾಡಿದರೆ ಇಂಗ್ಲಿಷ್, ಗಣಿತ ಸೇರಿದಂತೆ ಯಾವ ವಿಷಯವೂ ಕಠಿಣವಲ್ಲ, ಆತ್ಮವಿಶ್ವಾಸದಿಂದ ಪರಿಶ್ರಮ ಹಾಕಿ ಓದಿದರೆ ಎಲ್ಲ ವಿಷಯಗಳು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು ಎಂದರು.

      ಶಿಗ್ಗಾಂವಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಎಳವರ, ತಾಲೂಕಿನ ಭೂ ಮಂಜೂರಾತಿ ಸಮಿತಿ ಮಾಜಿ ಸದಸ್ಯರಾದ ಪರಶುರಾಮ ಲಮಾಣಿ ಮಾತನಾಡಿದರು.

       ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಚೈತ್ರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಅಧ್ಯಕ್ಷೆ ಶ್ರೀಮತಿ ಪಾರವ್ವ ಆರೇರ, ತಾಪಂ ಸದಸ್ಯ ಶ್ರೀಮತಿ ಸೋಮಲವ್ವ ಅಶೋಕ ರಾಠೊಡ, ಗ್ರಾಪಂ ಉಪಾಧ್ಯಕ್ಷೆ ಶ್ರೀಮತಿ ತಾರಾಬಾಯಿ ಲಮಾಣಿ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link