ಬ್ಯಾಡಗಿ:
ಕೇಂದ್ರದ ಹಾಲಿ ಸಚಿವ ಹಾಗೂ ಬಿಜೆಪಿ ಮುಖಂಡ ಅನಂತಕುಮಾರ ನಿಧನಕ್ಕೆ ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಸೋಮವಾರ ಶ್ರದ್ಧಾಂಜಲಿ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಂಗವಾಗಿ ಬಿಜೆಪಿ ಕಾರ್ಯಾಲಯದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಅನಂತಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಚಗಳನ್ನು ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಮುಖಂಡನೊಬ್ಬನನ್ನು ಕಳೆದುಕೊಂಡಿದೆ: ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸೋಲಿಲ್ಲದ ಸರದಾರ 6 ಬಾರಿ ಸಂಸದನಾಗಿ ದೆಹಲಿಯಲ್ಲಿ ಆಡಳಿತ ನಡೆಸಿದ ಅನಂತಕುಮಾರ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿದ್ದುಕೊಂಡು 2 ಬಾರಿ ಕೇಂದ್ರದ ಸಚಿವರಾಗಿದ್ದುದು ನಮಗೆಲ್ಲಾ ಹೆಮ್ಮೆಯ ವಿಷಯ ಆದರೆ ಇಂದು ಅನಂತಕುಮಾರ ನಮ್ಮನ್ನಗಲಿರುವುದು ತುಂಬಾ ನೋವಿನ ಸಂಗತಿ ಎಂದರು.
ರಾಜ್ಯದ ಹಿತಾಸಕ್ತಿ ಕಾಪಾಡಿದವರು: ದಿವಂಗತ ಅನಂತಕುಮಾರ ಕಳೆದ 25 ವರ್ಷಗಳಿಂದ ಸಂಸದರಾಗಿದ್ದುಕೊಂಡು ದೆಹಲಿಯಲ್ಲಿ ರಾಜ್ಯದ ಪರವಾಗಿ ಕೆಲಸ ಮಾಡಿದ್ದಾರೆ, ಅವರ ಶ್ರಮದ ಫಲದಿಂದ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ, ಕಾವೇರಿ ನದಿ ನೀರು ಹಂಚಿಕೆ ಹಾಗೂ ಮಹದಾಯಿಯಂತಹ ಮಹತ್ವದ ಯೋಜನೆಗಳು ರಾಜ್ಯವನ್ನು ತಲುಪುವಲ್ಲಿ ಯಶಸ್ವಿಯಾಗಿವೆ ಎಂದರು.
ಹಗರಣ ರಹಿತ ಆಡಳಿತ:ದಿವಂಗತ ಅನಂತಕುಮಾರ ಒಬ್ಬ ಪ್ರಭುದ್ದ ರಾಜಕಾರಣಿಯಾಗಿದ್ದು ವಾಜಪೇಯಿ, ಅಡ್ವಾಣಿಯವರ ಮಾರ್ಗದರ್ಶನದಲ್ಲಿ ಹಗರಣ ರಹಿತ ಆಡಳಿತವನ್ನು ದೇಶಕ್ಕೆ ನೀಡಿದ್ದಾರೆ, ರಾಜ್ಯದಿಂದ ಅನಂತಕುಮಾರ ಅವರಂತಹ ಸಕ್ರೀಯ ಕಾರ್ಯಕರ್ತ ಅನಂತಕುಮಾರ ಎರಡು ಬಾರಿ ಸಚಿವರಾಗಿರುವ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರದ ಆಡಳಿತವೂ ನಡೆದಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದರು.
ಟ್ರಬಲ್ ಶೂಟರ್: ದಿವಂಗತ ಅನಂತಕುಮಾರ ರಾಜ್ಯದ ಮಟ್ಟಿಗೆ ಒಬ್ಬ ಟ್ರಬಲ್ ಶೂಟರ್ ಮುಖಂಡರಾಗಿದ್ದು, ಪಕ್ಷ ಇಕ್ಕಟ್ಟಿಗೆ ಸಿಲುಕಿದಾಗ ತಮ್ಮ ನೇರ ಹಾಗೂ ನಿಷ್ಟುರ ನುಡಿಗಳಿಂದ ಸಂಕಷ್ಟದಿಂದ ಪಾರು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಹುಬ್ಬಳ್ಳಿಯಲ್ಲಿಯೇ ವ್ಯಾಸಂಗ ಪೂರೈಸಿದ ಅವರು ಆರ್.ಎಸ್.ಎಸ್.ನ ಕಟ್ಟಾ ಅನುಯಾಯಿಯಾಗಿದ್ದರು, ದೇಶವೇ ಮೊದಲೆಂಬ ತತ್ವದಡಿ ಎಲ್ಲ ಸಮಾಜ ವರ್ಗಗಳನ್ನು ಒಟ್ಟಿಗೆ ಕರೆದೊಯ್ಯುವ ವಾಕ್ ಚಾತುರ್ಯವನ್ನು ರೂಢಿಸಿಕೊಂಡಿದ್ದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕಾಧ್ಯಕ್ಷ ಶಂಕ್ರಣ್ಣ ಮಾತನವರ, ಕಾರ್ಯದರ್ಶಿ ವಿರೇಂದ್ರ ಶೆಟ್ಟರ, ಮುಖಂಡರಾದ ಮುರಿಗೆಪ್ಪ ಶೆಟ್ಟರ, ಶಿವಬಸಣ್ಣ ಕುಳೇನೂರ, ಸುರೇಶ ಯತ್ನಳ್ಳಿ, ಚಂದ್ರಣ್ಣ ಮುಚ್ಚಟ್ಟಿ, ಬಿ.ಎಂ.ಛತ್ರದ, ವಿಜಯಕುಮಾರ ಮಾಳಗಿ, ಸುರೇಶ ಅಸಾದಿ, ರಾಮಣ್ಣ ಉಕ್ಕುಂದ, ಶೇಖರಗೌಡ ಗೌಡ್ರ, ವೈ,ಎನ್,ಕರೇಗೌಡ್ರ, ರವೀಂದ್ರ ಪಟ್ಟಣಶೆಟ್ಟಿ, ಬಸವರಾಜ ಹಲಗೇರಿ, ಸುರೇಶ ಉದ್ಯೋಗಣ್ಣನವರ, ಮನೋಹರ ಅರ್ಕಾಚಾರಿ, ಎಸ್.ಎಂ.ಹೊನ್ನತ್ತಿಮಠ, ಜೆ.ಸಿ.ಚಿಲ್ಲೂರಮಠ, ವಿಷ್ಣು ಬೆನ್ನೂರ, ಎಂ.ಜಿ.ಮುಳಗುಂದ, ಮಂಜುನಾಥ ಪೂಜಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ