ಕಾರ್ನಾಡ್‍ಗೆ ಶ್ರದ್ಧಾಂಜಲಿ: ಪಾಲಿಕೆ ಸಭೆ ಮುಂದೂಡಿಕೆ

ತುಮಕೂರು

      ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡಿನ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಸೋಮವಾರ ಬೆಳಗ್ಗೆ ನಿಧನರಾದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಣೆಯಾದ ಕಾರಣ, ಸೋಮವಾರ ಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಏರ್ಪಟ್ಟಿದ್ದ ತುರ್ತು ಸಭೆಯು ಆರಂಭಗೊಂಡ ಬೆನ್ನಲ್ಲೇ ಮುಂದೂಡಲ್ಪಟ್ಟಿತು.

      ಬೆಳಗ್ಗೆ 11 ಗಂಟೆಗೆ ಪಾಲಿಕೆಯ ಸಭಾಂಗಣದಲ್ಲಿ ತುರ್ತುಸಭೆ ನಿಗದಿಯಾಗಿತ್ತು. ಸಭೆಯು 11-30 ರ ಹೊತ್ತಿಗೆ ಆರಂಭವಾಯಿತು. ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ ಅವರಲ್ಲದೆ, ತುಮಕೂರು ಕ್ಷೇತ್ರದ ನೂತನ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಅವರೂ ಆಗಮಿಸಿದರು.

      ಆಯುಕ್ತ ಟಿ.ಭೂಬಾಲನ್ ಸ್ವಾಗತಿಸುತ್ತ, ಸಾಹಿತಿ ಗಿರೀಶ್ ಕಾರ್ನಾಡ್ ಮತ್ತು ಪೌರಾಡಳಿತ ಸಚಿವರಾಗಿದ್ದ ಶಿವಳ್ಳಿ ಅವರ ನಿಧನಕ್ಕೆ ಮೌನಾಚರಣೆ ಮಾಡುವ ಬಗ್ಗೆ ಪ್ರಕಟಿಸಿದರು. ಬಳಿಕ ಎಲ್ಲರೂ ಎದ್ದುನಿಂತು ಎರಡು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಲೋಕಸಬೆ ಸದಸ್ಯ ಜಿ.ಎಸ್.ಬಸವರಾಜು ಮಾತನಾಡಿ, ಕಾರ್ನಾಡರು ನಾಟಕಕಾರರಾಗಿ ಇಡೀ ರಾಷ್ಟ್ರದಲ್ಲೇ ಹೆಸರು ಗಳಿಸಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗುವ ಮೂಲಕ ನಾಡಿನ ಹೆಮ್ಮೆಯ ಪುತ್ರರಾಗಿದ್ದರು ಎಂದು ಸ್ಮರಿಸಿದರಲ್ಲದೆ, ದಿವಂಗತ ಶಿವಳ್ಳಿ ಅವರ ಸೇವೆಯನ್ನೂ ನೆನಪಿಸಿಕೊಳ್ಳುತ್ತ ಈರ್ವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದರು.

      ಬಳಿಕ ಆಯುಕ್ತ ಭೂಬಾಲನ್ ಮಾತನಾಡಿ ಸರ್ಕಾರವು ಇಂದು ರಜೆ ಘೋಷಿಸಿದ್ದು, ಮೂರು ದಿನಗಳ ಕಾಲ ಶೋಕಾಚರಣೆಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯನ್ನು ಮುಂದೂಡುತ್ತಿರುವುದಾಗಿಯೂ, ಈ ತುರ್ತು ಸಭೆಯನ್ನು ಮೇ 13 ಕ್ಕೆ ನಡೆಸಲು ತೀರ್ಮಾನಿಸಿರುವುದಾಗಿ ಪ್ರಕಟಿಸಿದರು. ಆಗ ವೇಳೆ 11-45 ಆಗಿದ್ದು, ಎಲ್ಲರೂ ನಿರ್ಗಮಿಸಿದರು.

ಆಯುಕ್ತರ ಕಾರ್ಯಕ್ಕೆ ಮೆಚ್ಚುಗೆ

      ಜಿ.ಎಸ್.ಬಸವರಾಜು ಅವರು ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡ ಬಳಿಕ ಏರ್ಪಟ್ಟಿದ್ದ ಮೊದಲ ಸಭೆ ಇದಾಗಿದ್ದು, ಅವರೂ ಆಸಕ್ತಿಯಿಂದ ಆಗಮಿಸಿದ್ದರು. ವೇದಿಕೆಗೆ ಬರುತ್ತಿದ್ದಂತೆ ಆಯುಕ್ತರು ಹಸ್ತಲಾಘವ ನೀಡಿ ಸ್ವಾಗತಿಸಿದರು. “ನಿಮ್ಮೊಂದಿಗೆ ಕೇವಲ ಫೋನಲ್ಲಷ್ಟೇ ಮಾತನಾಡಿದ್ದೆ. ಇದೇ ಮೊದಲಿಗೆ ಮುಖತಃ ಭೇಟಿ ಆಗುತ್ತಿದ್ದೇನೆ” ಎಂದು ಬಸವರಾಜು ಅವರು ಉದ್ಗರಿಸಿದರು.

     ಸಭೆ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಆ ನಂತರ ಬಸವರಾಜು ಅವರು ಆಯುಕ್ತ ಭೂಬಾಲನ್ ಅವರ ಕೊಠಡಿಗೆ ಆಗಮಿಸಿ ಆಯುಕ್ತರ ಜೊತೆ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಅನೌಪಚಾರಿಕವಾಗಿ ಚರ್ಚಿಸಿದರು. “ನಗರದ ಅಭಿವೃದ್ಧಿಗೆ ನಾನು ಪೂರ್ಣ ಸಹಕಾರ ಕೊಡುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ತರಲು ಶ್ರಮಿಸುತ್ತೇನೆ” ಎಂದು ಈ ಸಂದರ್ಭದಲ್ಲಿ ಬಸವರಾಜು ಅವರು ಹೇಳಿದರಲ್ಲದೆ, ಪಾಲಿಕೆಯ ಆಡಳಿತ ಸುಧಾರಣೆಗೆ ಹಾಗೂ ನಗರದ ಅಭಿವೃದ್ಧಿಗೆ ಆಯುಕ್ತ ಭೂಬಾಲನ್ ಅವರು ಕೈಗೊಳ್ಳುತ್ತಿರುವ ವಿವಿಧ ರೀತಿಯ ಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸಿದರೆಂದು ಹೆಸರು ಹೇಳಲಿಚ್ಛಿಸದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪಾಲಿಕೆ ಕಚೇರಿಗೆ ರಜೆ

      ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಪಾಲಿಕೆಯ ಸಭೆಯು ಮುಂದೂಡಲ್ಪಟ್ಟ ಬೆನ್ನಲ್ಲೇ ಪಾಲಿಕೆ ಕಚೇರಿಯಲ್ಲೂ ರಜೆ ಆವರಿಸಿತು. ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ನಿರ್ಗಮಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap