ಚಿತ್ರದುರ್ಗ,:
ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಇಂಗ್ಲೀಷ್ ಭಾಷೆ ಕಲಿಕೆ ಕುರಿತು ಹಲವಾರು ಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ ಮಕ್ಕಳಿಗೆ ಇಂಗ್ಲೀಷ್ ಕಲಿಕೆ ಕುರಿತ ಹಿಂಜರಿಕೆ ಸ್ವಭಾವ ದೂರಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಆಂಗ್ಲ ಭಾಷಾ ಶಿಕ್ಷಕರ ಕ್ಲಬ್, ರೋಟರಿ ಕ್ಲಬ್ ವಿಂಡ್ ಮಿಲ್ ಸಿಟಿ, ಚಿನ್ಮೂಲಾದ್ರಿ ಹಾಗೂ ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ‘ಜಿಲ್ಲೆಯ ಪ್ರೌಢಶಾಲೆಗಳ ಇಂಗ್ಲೀಷ್ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆ ಶೈಕ್ಷಣಿಕವಾಗಿ ಇನ್ನೂ ಹಿಂದುಳಿದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಎಂದರೆ ಭಯ ಬೀಳುವ ಸ್ಥಿತಿ ಇದೆ. ಹೀಗಾಗಿ ಮಕ್ಕಳಿಗೆ ಇಂಗ್ಲೀಷ್ ಭಯ ಹೋಗಲಾಡಿಸಿ, ಅವರು ಸುಲಲಿತವಾಗಿ ಇಂಗ್ಲೀಷ್ ಮಾತನಾಡುವಂತಾಗಬೇಕು ಅದಕ್ಕಾಗಿ ಶಿಕ್ಷಕರು ವಿಶೇಷ ಗಮನ ಹರಿಸಬೇಕಾಗಿದೆ ಎಂದು ಹೇಳಿದರು
ವಿದ್ಯಾರ್ಥಿಗಳು ದಿನನಿತ್ಯ ಇಂಗ್ಲೀಷ್ ಪತ್ರಿಕೆ ಓದುವುದು, ಕೇಳುವುದು, ಗಟ್ಟಿಧ್ವನಿಯಿಂದ ಓದುವುದು, ಇಂಗ್ಲೀಷ್‍ನಲ್ಲಿಯೇ ಮಾತನಾಡುವುದು, ದಿನಂಪ್ರತಿ ಕನಿಷ್ಠ 10 ಇಂಗ್ಲೀಪ್ ಪದ ಕಲಿತು, ಸ್ವತಃ ತಾವೇ ವಾಕ್ಯ ರಚಿಸುವಂತಾಗಬೇಕು, ನಂತರ ಇಂಗ್ಲೀಷ್ ವ್ಯಾಕರಣ ಕಲಿಯಬಹುದು. ಗ್ರಾಮೀಣ ಭಾಗದ ಮಕ್ಕಳು ಹಿಂಜರಿಕೆ ಸ್ವಭಾವ ಬಿಟ್ಟು ಸರಿನೋ ತಪ್ಪೋ ಇಂಗ್ಲೀಷ್ ಮಾತನಾಡಬೇಕು. ವ್ಯಾಕರಣ ಬದ್ಧ ಇಂಗ್ಲೀಷ್ ಅರ್ಥಪೂರ್ಣವಾಗಿ ಕಲಿಯಬೇಕು. ಅವರು ತಪ್ಪು ಮಾಡಿದಾಗ ಶಿಕ್ಷಕರು ತಪ್ಪು ತಿದ್ದುವುದರ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು. ಮಕ್ಕಳು ಪ್ರಾಯೋಗಿಕವಾಗಿ ಕಲಿಯಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು
ಜಿಲ್ಲೆಯಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಇಂಗ್ಲೀಷ್ ವಿಷಯದಲ್ಲಿ ಉತ್ತೀರ್ಣನಾಗಬೇಕು. ಪರೀಕ್ಷೆ ಸಮಯ ಮಕ್ಕಳಿಗೆ ಗಟ್ಟಿ ಧ್ವನಿಯಿಂದ ಓದುವುದನ್ನು ರೂಢಿಸಬೇಕು. ಮಕ್ಕಳು ಇಂಗ್ಲೀಷ್ ಕಲಿಯುವಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಹೇಳಿದರು.
ಶಿಕ್ಷಣ ತಜ್ಞ ಹಾಗೂ ಅಂಕಣಕಾರ ಡಾ. ಗುರುರಾಜ್ ಕರಜಗಿ ಅವರು ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಡಿ ಉಪನ್ಯಾಸ ನೀಡಿ, ಶಿಕ್ಷಕರ ವೃತ್ತಿ ಪವಿತ್ರವಾದುದು. ಶಿಕ್ಷಕ ತನ್ನ ವೃತ್ತಿ ಪ್ರೀತಿಸಬೇಕು. ದಿನನಿತ್ಯ ವಿಷಯಕ್ಕೆ ಸಂಬಂಧಿಸಿದ ಹೊಸ ಪುಸ್ತಕಗಳನ್ನು ಓದಿ, ಜ್ಞಾನ ಸಂಗ್ರಹವಾಗಬೇಕು. ಜೀವನದಲ್ಲಿ ವಿದ್ಯಾರ್ಥಿಗಳು ಎಷ್ಟೇ ಶಿಕ್ಷಕರ ಬಳಿ ವಿದ್ಯಾಭ್ಯಾಸ ಮಾಡಿದರೂ, ನೆನಪಲ್ಲಿ ಉಳಿಯುವುದು ಕೆಲವರು ಮಾತ್ರ. ಎಂದರು
.
ಶಿಕ್ಷಕರು ತಮ್ಮ ವೃತ್ತಿ ಜೀವನಕ್ಕೆ ಹೊಂದಿಕೊಳ್ಳುವ ಉಡುಪು ಧರಿಸುವುದು ಉತ್ತಮ. ಯಾವುದೇ ಭಾಷೆಯ ಶಿಕ್ಷಕರಾಗಲಿ, ಅವರು ಆ ಭಾಷೆಯ ಬಗ್ಗೆ ಸಂಪೂರ್ಣ ಹಿಡಿತ ಸಾಧಿಸಿರಬೇಕು ಶಿಕ್ಷಕರು ಒಂದು ವಿಷಯದಲ್ಲಿ ನಿಪುಣರಾದರೆ, ವಿದ್ಯಾರ್ಥಿಗಳು ಕೂಡ ಉತ್ತಮ ಸಾಧನೆ ಮಾಡಲು ಸಾಧ್ಯ. ಶಿಕ್ಷಣದಲ್ಲಿ ಆಗಾಗ್ಗೆ ಸೃಜನಾತ್ಮಕ ಬದಲಾವಣೆ, ಸುಲಭವಾಗಿ ಅರ್ಥವಾಗುವ ರೀತಿಯ ಬೋಧನೆಯಿಂದ ಮಕ್ಕಳು ಬಹುಬೇಗ ಕಲಿಯುತ್ತಾರೆ. ಮಕ್ಕಳ ಮನೋಭಾವದ ಸ್ಥಿತಿಗತಿಗನುಗುಣವಾಗಿ ಬೋಧನೆ ಮಾಡಬೇಕು ಎಂದು ಜಿಲ್ಲೆಯ ಪ್ರೌಢಶಾಲಾ ಇಂಗ್ಲೀಷ್ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಕೆ ಅನಂತ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಮಾತೃಭಾಷೆ ಕನ್ನಡ ಪದಬಳಕೆ ಗೊತ್ತಿಲ್ಲ. ಕನ್ನಡ ಕಲಿಯುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಕೆ ಅಗತ್ಯ, ಪರಿಪೂರ್ಣವಾದ ಇಂಗ್ಲೀಷ್ ಕಲಿಕೆ ಉತ್ತಮ ಜೀವನಕ್ಕೆ ನಾಂದಿಯಾಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಸಂದರ್ಶನದಲ್ಲಿ ಹೆಚ್ಚಾಗಿ ಇಂಗೀಷ್ ಕುರಿತ ಪ್ರಶ್ನೆಗಳು ಬರುವುದು ಸರ್ವೇ ಸಾಮಾನ್ಯವಾಗಿದೆ. ಇಂಗ್ಲೀಷ್ ದ್ವಿತೀಯ ಭಾಷೆಯಾಗಿದ್ದರೂ ಅರ್ಥಪೂರ್ಣ ಕಲಿಕೆಯ ಕೊರತೆಯಿದೆ.
ಜಿಲ್ಲೆಯ ಕೆಲವು ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭವಾಗಿದ್ದರೂ ಅದರ ಸಮರ್ಪಕ ಬಳಕೆ ಆಗುತ್ತಿಲ್ಲ. ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆ ಒಂದು ಕಬ್ಬಿಣದ ಕಡಲೆ ಎಂಬ ಮನೋಭಾವದಿಂದ ಹೊರಬರುವ ರೀತಿ ಶಿಕ್ಷಕರು ಗಮನಹರಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ್ ರೆಡ್ಡಿ, ಜೋಗಿಮಟ್ಟಿ ರೋಟರಿ ಕ್ಲಬ್ ಅಧ್ಯಕ್ಷ ಮಧುರ ಎಸ್ ಕುಮಾರ್, ಚಿತ್ರದುರ್ಗದ ರೋಟರಿ ಕ್ಲಬ್ ಅಧ್ಯಕ್ಷ ಪಿ.ಬಿ ಶಿವರಾಮ್, ಚಿತ್ರದುರ್ಗ ಫೋರ್ಟ್ ರೋ.ಕ್ಲ ಅಧ್ಯಕ್ಷ ಸಿ.ಎಸ್ ಶಿವಕುಮಾರ್, ಚಿನ್ಮೂಲಾದ್ರಿ ರೋ.ಕ್ಲ ಅದ್ಯಕ್ಷೆ ವನಿತ ಶಂಕರಮೂರ್ತಿ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರೌಢಶಾಲೆಯ ಇಂಗ್ಲೀಷ್ ಶಿಕ್ಷಕರು ಉಪಸ್ಥಿತರಿದ್ದರು. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಹಾಗೂ ಇಂಗ್ಲೀಷ್ ಭಾಷಾ ಶಿಕ್ಷಕರಿಗಾಗಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ‘ವಾರಿ’ ಪ್ರಶ್ನೆಗಳ ಬ್ಯಾಂಕ್ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.