ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿರುವ ಕಾಂಗ್ರೇಸ್

ಬೆಂಗಳೂರು

         ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಗೆ ಹುರಿಯಾಳುಗಳು ಸಿದ್ಧರಾಗುತ್ತಿದ್ದಾರೆ. ದೇಶದಾದ್ಯಂತ ಮೋದಿ ವಿರುದ್ಧದ ಅಲೆ ಎದ್ದಿದ್ದು ಹಾಗೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕೆಂದು ಹಠಕ್ಕೆ ಬಿದ್ದಿರುವ ಪಕ್ಷಕ್ಕೆ ಹೆಚ್ಚೆಚ್ಚು ಸಂಸದರನ್ನು ಲೋಕಸಭೆಗೆ ಆರಿಸಿ ಕಳುಹಿಸಬೇಕಾದ ಅನಿವಾರ್ಯತೆಯೂ ಇದೆ. ಹೀಗಾಗಿ ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಕೆಪಿಸಿಸಿ ನಡೆಸುತ್ತಿದೆ.

         ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಲೋಕಸಭೆಗೆ ಸ್ಪರ್ಧೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಕುರುಬ ಸಮುದಾಯ ಪ್ರಾಬಲ್ಯ ಹೊಂದಿರುವ ದಾವಣಗೆರೆಯಿಂದ, ಮೈಸೂರು-ಕೊಡಗು ಕ್ಷೇತ್ರದಲ್ಲಿ ಪಕ್ಷ ಬಲಗೊಳ್ಳಲು ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಬೇಕು ಎಂದು ಕೆಲವು ಶಾಸಕರು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಮನವಿ ಮಾಡಿದ್ದಾರೆ.

        ಪ್ರಧಾನಿ ಮೋದಿಗೆ ಬಹಿರಂಗವಾಗಿ ಚಾಲೆಂಜ್ ಮಾಡುತ್ತಲೆ, ದೇಶದ ರಾಜಕೀಯದಲ್ಲಿ ಸದ್ದು ಮಾಡಿದ್ದ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುತ್ತಾರೆ. ಈ ಬಾರಿ ಮೈಸೂರು ಅಥವಾ ಬೇರೆ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು. 2018 ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಪ್ರಾಬಲ್ಯ ಕಡಿಮೆಮಾಡಲು ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕರ ಕೊರತೆಯಿದ್ದುದರಿಂದ ಖುದ್ದು ಪ್ರಧಾನಿ ಮೋದಿಯೇ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಆ ಮೂಲಕ ರಾಷ್ಟ್ರಮಟ್ಟದಲ್ಲಿ ಸಿದ್ದರಾಮಯ್ಯ ಹೆಸರು ಮಾಡಿದ್ದರು.

          ವಿಧಾನಸಭಾ ಚುನಾವಣೆ ವೇಳೆ ಮೋದಿ ವಿರುದ್ಧ ಬಹಿರಂಗವಾಗಿ ಸವಾಲು ಹಾಕಿ, ಅವರ ಆಡಳಿತವನ್ನು ಟೀಕಿಸಿದ್ದರು. ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಬಂದರೆ ಕಾಂಗ್ರೆಸ್‍ಗೆ ಅನುಕೂಲವಾಗಲಿದೆ. ಈ ಮೂಲಕ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು ಕೂಡ. ಈಗ ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ಸಮಯದಲ್ಲಿಯೂ ಇವೇ ಮಾತುಗಳು ಪುನರುಚ್ಚಾರಗೊಳ್ಳುತ್ತಿವೆ.

          ಸರ್ಕಾರದ ಮೇಲೆ ಹಿಡಿತ ಹೊಂದಿರುವ ಸಿದ್ದರಾಮಯ್ಯ, ಜೆಡಿಎಸ್‍ಗೆ ತಲೆನೋವಾಗಿ ಪರಿಣಮಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲನ್ನು ಅನುಭವಿಸಿದ್ದು, ಬದಾಮಿಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದು, ಈ ಎಲ್ಲಾ ಕಾರಣಗಳಿಂದ ಅವರು ಪಕ್ಷದಲ್ಲಿ ಸೈಡ್ಲೈನ್ ಆಗುತ್ತಾರೆ ಎಂದೇ ಹಲವರು ಭಾವಿಸಿದ್ದರು ಕೂಡ. ಆದರೆ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಬೆಳೆದ ರೀತಿಯೇ ಕುತೂಹಲ.

          ಒಂದೆಡೆ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸಿನಲ್ಲಿ ಮೂಲ ಕಾಂಗ್ರೆಸ್ ಬಣದ ಕೆಲ ನಾಯಕರು, ಈ ಹಿಂದಿನಿಂದಲೂ ಇವರ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದು, ವಲಸೆ ಕಾಂಗ್ರೆಸಿಗ, ದಲಿತ ಮುಖ್ಯಮಂತ್ರಿಯ ದಾಳಗಳನ್ನು ಉರುಳಿಸಿದರೂ ಸಹ 5 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಪೂರ್ಣಗೊಳಿಸಿದರು.

           ಇತ್ತ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಪಕ್ಷದ ಸ್ವತಂತ್ರ ನಿರ್ಧಾರಕ್ಕೆ ಸಿದ್ದರಾಮಯ್ಯ, ಅಡ್ಡಗಾಲಾಗುತ್ತಿದ್ದು, ಸತತ ಪ್ರಯತ್ನಗಳ ನಂತರವೂ ಸಿದ್ದರಾಮಯ್ಯರನ್ನು ತಟಸ್ಥರನ್ನಾಗಿಸುವ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಪ್ರಯತ್ನಗಳು ಅಷ್ಟು ಸಫಲವಾಗಿಲ್ಲ. ಹೀಗಾಗಿ ಸಿದ್ದರಾಮಯ್ಯರನ್ನು ರಾಷ್ಟ್ರರಾಜಕಾರಣದ ನೆಪದಲ್ಲಿ ರಾಜ್ಯ ರಾಜಕೀಯದಿಂದ ದೂರಗೊಳಿಸುವ ತಂತ್ರವೊಂದು ಸಿದ್ಧವಾಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಲೋಕಸಭೆಗೆ ಸಿದ್ದರಾಮಯ್ಯ ಎಂಬ ಮಾತುಗಳು ಈಗ ಹರಿದಾಡಲಾರಂಭಿಸಿವೆ.

          ಈ ಮುಂಚೆಯೂ ಸಹ ಸಿದ್ದರಾಮಯ್ಯ ಅವರಿಗೆ ಲೋಕಸಭೆ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳು ನಡೆದಿದ್ದವು. ದೇವೆಗೌಡರು ಸಹ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಗೆ ನಿಲ್ಲುವುದಾದರೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂದು ಘೋಷಿಸಿದ್ದರು.

          ಆದರೆ, ಈ ಎಲ್ಲಾ ಊಹಾಪೋಹಗಳಿಗೂ ಸ್ವತಃ ಸಿದ್ದರಾಮಯ್ಯ ಅವರೆ ತೆರೆ ಎಳೆದಿದ್ದು, ತಾವು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿದ್ದು, ಯಾವುದೇ ಕಾರಣಕ್ಕೂ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ಅಲ್ಲಿ ನಿಲ್ಲುತ್ತೇನೆ, ಇಲ್ಲಿ ನಿಲ್ಲುತ್ತೇನೆ ಎಂಬುದೆಲ್ಲಾ ಸುಳ್ಳು. ತಾವು ಎಲ್ಲಿಂದಲೂ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯರ ಈ ಹೇಳಿಕೆಯಿಂದ ಅವರಲ್ಲಿ ನಿರಾಶೆ ಮೂಡಿದೆ ಎನ್ನಲಾಗಿದೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link