ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟ : ಕುಣಿಗಲ್, ಪಾವಗಡದಲ್ಲಿ ಕಾಂಗ್ರೆಸ್ ಜಯಭೇರಿ

ತುಮಕೂರು:

   ಜಿಲ್ಲೆಯ ಎರಡು ಪುರಸಭೆ, ಒಂದು ಪಟ್ಟಣ ಪಂಚಾಯತಿ, ಒಂದು ನಗರ ಸಭೆ ಹಾಗೂ ತುಮಕೂರು ನಗರದ 22ನೇ ವಾರ್ಡ್‍ಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಶುಕ್ರವಾರ ಬೆಳಗ್ಗೆ ಪ್ರಕಟವಾಗಿದೆ.

    ಪಾವಗಡ ಹಾಗೂ ಕುಣಿಗಲ್‍ನಲ್ಲಿ ಕಾಂಗ್ರೆಸ್ ಅಲ್ಲಿನ ಸ್ಥಳೀಯ ಸಂಸ್ಥೆಯ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ತುರುವೇಕೆರೆ ಮತ್ತು ತಿಪಟೂರಿನಲ್ಲಿ ಬಿಜೆಪಿ ಒಂದಂಕಿ ಮುಂದೆ ಹೋಗಿದ್ದರೂ ಇತರೆಯವರ ಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದೆ.

     ತಿಪಟೂರಿನಲ್ಲಿ ಬಿಜೆಪಿ 11 ಸ್ಥಾನಗಳನ್ನು ಪಡೆದಿದ್ದರೂ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲ ಇಲ್ಲ. ಪಕ್ಷೇತರ 6 ಮಂದಿ ಸಹಕಾರ ಪಡೆಯಬೇಕು. ಇಲ್ಲವೆ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಬೇಕು. ಯಾರ ಸಹಕಾರದೊಂದಿಗೆ ಯಾರು ಅಧಿಕಾರ ಹಿಡಿಯುತ್ತಾರೆಂಬುದನ್ನು ಕಾದುನೋಡಬೇಕು.

     ತುರುವೇಕೆರೆಯಲ್ಲಿ ಬಿಜೆಪಿ 6 ಸ್ಥಾನಗಳನ್ನು ಪಡೆದಿದ್ದರೂ ಅಧಿಕಾರ ಹಿಡಿಯುವ ಸಂಖ್ಯಾಬಲ ಹೊಂದಿಲ್ಲ. ಜೆಡಿಎಸ್ 5 ಸ್ಥಾನಗಳನ್ನು ಪಡೆದಿದೆ. ಇಲ್ಲಿನ ವಿಶೇಷತೆ ಏನೆಂದರೆ, ಬಿಜೆಪಿಗೆ ಸ್ವತಂತ್ರ ಅಭ್ಯರ್ಥಿ ಸಹಕಾರ ಕೊಟ್ಟರೂ ಸಂಖ್ಯಾಬಲ 7 ಆಗುತ್ತದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಸ್ವತಂತ್ರ ಅಭ್ಯರ್ಥಿಯ ಸಹಕಾರ ಬೇಕೇಬೇಕು. ಅಂತಹ ಅತಂತ್ರ ಸ್ಥಿತಿ ತುರುವೇಕೆರೆಯಲ್ಲಿ ನಿರ್ಮಾಣವಾಗಿದೆ. ಬಿಜೆಪಿಗೆ ಇತರೆ ಪಕ್ಷಗಳು ಬೆಂಬಲ ಕೊಡಬಹುದೋ ಅಥವಾ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯುವುದೋ ನೋಡಬೇಕು.

ಕುಣಿಗಲ್:

      ಕುಣಿಗಲ್ ಪುರಸಭೆಯಲ್ಲಿ 23 ವಾರ್ಡ್‍ಗಳಿದ್ದು, 75 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರೂ ಪಕ್ಷಗಳಿಂದ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತಾದರೂ ಅಂತಿಮವಾಗಿ ಕುಣಿಗಲ್ ಪುರಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಭೇರಿ ಭಾರಿಸಿದ್ದಾರೆ. ಕಾಂಗ್ರೆಸ್ -14, ಜೆಡಿಎಸ್-3, ಬಿಜೆಪಿ-4 ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಅಧಿಕಾರದಲ್ಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಇಡೀ ರಾಜ್ಯದಲ್ಲಿ ಇದೇ ಕ್ಷೇತ್ರದಿಂದ (ಬೆಂಗಳೂರು ಗ್ರಾಮಾಂತರ) ಗೆದ್ದಿರುವ ಏಕೈಕ ಕಾಂಗ್ರೆಸ್ ಅಭ್ಯರ್ಥಿ.

      ಕುಣಿಗಲ್ ಪುರಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆದಿದ್ದು, ಜೆಡಿಎಸ್‍ಗಿಂತ ಬಿಜೆಪಿ 1 ಸ್ಥಾನವನ್ನು ಹೆಚ್ಚಿಗೆ ಗಳಿಸಿದೆ. ಪಕ್ಷೇತರರು 2 ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ತಿಪಟೂರು:

       ತಿಪಟೂರು ನಗರಸಭೆಯಲ್ಲಿ ಒಟ್ಟು 31 ವಾರ್ಡ್‍ಗಳಿದ್ದು, 134 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ, ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಕೆಲವು ವಾರ್ಡ್‍ಗಳಲ್ಲಿ ಕಂಡುಬಂದಿತ್ತು. ಮತ್ತೆ ಕೆಲವು ಕಡೆ ಜೆಡಿಎಸ್ ಪ್ರಾಬಲ್ಯವಿತ್ತು. ಅಂತಿಮವಾಗಿ ಬಿಜೆಪಿ 11 ಸ್ಥಾನಗಳಲ್ಲಿ, ಕಾಂಗ್ರೆಸ್ 9 ಸ್ಥಾನಗಳನ್ನು, ಜೆಡಿಎಸ್ 5 ಸ್ಥಾನಗಳನ್ನು ಪಡೆದಿದ್ದು, 6 ಸ್ಥಾನಗಳನ್ನು ಪಕ್ಷೇತರರು ಪಡೆದುಕೊಂಡಿದ್ದಾರೆ. ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ 2018 ರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ನಾಗೇಶ್ ಗೆಲುವು ಸಾಧಿಸಿದ್ದರು.

ತುರುವೇಕೆರೆ:

         ತುರುವೇಕೆರೆ ಪಟ್ಟಣ ಪಂಚಾಯತಿಯ 14 ವಾರ್ಡ್‍ಗಳಿಗೆ 53 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇಲ್ಲಿಯೂ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಹಣಾಹಣಿ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿಗಳು 6 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದರೆ, ಜೆಡಿಎಸ್ 5 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್ ಕೇವಲ 2 ಸ್ಥಾನಗಳಿಗಷ್ಟೇ ಸೀಮಿತವಾಗಿದೆ. ಒಂದು ಸ್ಥಾನವನ್ನು ಪಕ್ಷೇತರರು ಪಡೆದುಕೊಂಡಿದ್ದಾರೆ. ಇಲ್ಲಿಯೂ ಬಿಜೆಪಿ ಶಾಸಕರು ಅಧಿಕಾರದಲ್ಲಿದ್ದಾರೆ.

ಪಾವಗಡ:

         ಇಲ್ಲಿನ ಪುರಸಭೆಯಲ್ಲಿ 23 ವಾರ್ಡ್‍ಗಳಿದ್ದು, ಕಾಂಗ್ರೆಸ್‍ನಿಂದ 23, ಜೆಡಿಎಸ್‍ನಿಂದ 23 ಹಾಗೂ ಬಿಜೆಪಿಯಿಂದ 12 ಮಂದಿ ಸ್ಪರ್ಧಾ ಕಣದಲ್ಲಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ಪೈಪೋಟಿ ಇದ್ದಿತಾದರೂ ಅಂತಿಮವಾಗಿ ಕಾಂಗ್ರೆಸ್ ಇಲ್ಲಿ ಜಯಭೇರಿ ಭಾರಿಸಿದೆ. 20 ಸ್ಥಾನಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದ್ದರೆ, ಜೆಡಿಎಸ್ ಕೇವಲ 2 ಸ್ಥಾನಗಳನ್ನು ಪಡೆದುಕೊಂಡಿದೆ. ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ.

ತುಮಕೂರು ನಗರ:

       ತುಮಕೂರು ನಗರದ 22ನೇ ವಾರ್ಡಿಗೆ ನಡೆದ ಚುನಾವಣೆಯಲ್ಲಿ 7ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಹಳ ಜೋರಾಗಿಯೇ ಚುನಾವಣಾ ಪ್ರಚಾರ ನಡೆದಿತ್ತು. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಬಿರುಸಿನ ಪೈಪೋಟಿ ನಡೆದಿತ್ತು. ಅಂತಿಮವಾಗಿ ಜೆಡಿಎಸ್‍ನ ಶ್ರೀನಿವಾಸ ಮೂರ್ತಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆಯೂ ಈ ವಾರ್ಡ್ ಜೆಡಿಎಸ್ ಪಾಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap