ಕೈ ಪಕ್ಷದ ಮಾಜಿ ಸಚಿವರು ಮತ್ತು ಶಾಸಕರ ಸಭೆ..!!!

ಬೆಂಗಳೂರು

       ಮಂಡ್ಯ, ಹಾಸನ ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರವನ್ನು ಕಾಂಗ್ರೆಸ್ ತನ್ನ ಬಳಿಯಲ್ಲಿ ಉಳಿಸಿಕೊಳ್ಳಲೇಬೇಕು ಎಂದು ಕೈ ಪಕ್ಷದ ಮಾಜಿ ಸಚಿವರು, ಶಾಸಕರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

       ಈ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಕ್ಷೇತ್ರಗಳ ಹಂಚಿಕೆಯಲ್ಲಿ ಕಾಂಗ್ರೆಸ್ ಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಲು ಮಾಜಿ ಶಾಸಕರು ಒಮ್ಮತದ ನಿಲುವಿಗೆ ಬಂದಿದ್ದಾರೆ.

        ಇಂದು ಮಾಜಿ ಸಚಿವ ಎ.ಮಂಜು ನಿವಾಸದಲ್ಲಿ ಸಭೆ ಸೇರಿದ 10ಕ್ಕೂ ಹೆಚ್ಚು ಮಾಜಿ ಶಾಸಕರು ಲೋಕಸಭಾ ಚುನಾವಣೆ ಮೈತ್ರಿ ವೇಳೆ ಹಾಸನ, ಮಂಡ್ಯ, ಮೈಸೂರು ಕ್ಷೇತ್ರಗಳ ಸ್ಥಾನ ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ.

        ಹಾಸನ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷ ಕೇಳಿದರೆ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಮಾಜಿ ಸಚಿವ ದಿವಂಗತ ಅಂಬರೀಶ್ ಪುತ್ರ ಅಭಿಷೇಕ್‍ರನ್ನು ಮಂಡ್ಯದಿಂದ ಲೋಕಸಭಾ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

       ಮೈಸೂರು, ತುಮಕೂರು ಸೇರಿದಂತೆ ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳಲ್ಲು ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ಶಾಸಕರು ಅವಕಾಶ ಕಲ್ಪಿಸಬೇಕೆಂಬ ಆಗ್ರಹವೂ ಸಭೆಯಲ್ಲಿ ವ್ಯಕ್ತವಾಗಿದೆ.

       ಕಾಂಗ್ರೆಸ್ ಪಕ್ಷದ ಅಸ್ಥಿತ್ವದ ಪ್ರಶ್ನೆಯಾಗಿರುವ ಕಾರಣ ಪಕ್ಷ ಸಂಘಟನೆ, ಕಾರ್ಯಕರ್ತರು ಕ್ಷೇತ್ರದ ಮೇಲೆ ಹಿಡಿತ ತಪ್ಪದಂತೆ ಎಚ್ಚರವಹಿಸಬೇಕೆಂದು ಚೆರ್ಚೆಯಾಗಿರುವುದಾಗಿ ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ.

      ದೋಸ್ತಿ ಸರ್ಕಾರದ ನಡೆ, ಜೆಡಿಎಸ್ ಕ್ಷೇತ್ರಗಳಲ್ಲಿ ಮುಖಂಡರ ದಬ್ಬಾಳಿಕೆ, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ನಡೆಯುತ್ತಿರುವ ಘರ್ಷಣೆಗಳ ಬಗ್ಗೆ ಮಾಜಿ ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.ಈ ಎಲ್ಲಾ ವಿಚಾರಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರ ಜೊತೆ ಚರ್ಚೆ ನಡೆಸಿ ಮುಂದಿನ ನಡೆಯನ್ನು ನಿರ್ಧರಿಸಬೇಕೆಂಬ ಅಭಿಮತ ವ್ಯಕ್ತಪಡಿಸಿದ್ದಾರೆ.

     ಇಂದಿನ ಸಭೆಯಲ್ಲಿ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ, ಮಾಜಿ ಶಾಸಕರಾದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ಹುಣಸೂರು ಮಂಜುನಾಥ್, ಪಿರಿಯಾಪಟ್ಟಣ ವೆಂಕಟೇಶ್ ಸೇರಿ 10 ಕ್ಕೂ ಹೆಚ್ಚು ಮಾಜಿ ಶಾಸಕರು ಭಾಗಿಯಾಗಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link