ನವದೆಹಲಿ
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕನಿಷ್ಠ ಆರು-ಏಳು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿತ್ತು ಎಂದು ಹೇಳಿಕೊಂಡಿದ್ದ ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದೆ.
2016ರಲ್ಲಿ ‘ಉರಿ’ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆಗಳು ನಡೆಸಿದ ದಾಳಿಯೇ ಮೊದಲ ಸರ್ಜಿಕಲ್ ಸ್ಟ್ರೈಕ್ ಎಂದು ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಹೇಳಿದ್ದಾರೆ. ಇದರಿಂದ ಸರ್ಜಿಕಲ್ ಸ್ಟ್ರೈಕ್ ಕುರಿತಾಗಿ ಬೆನ್ನುತಟ್ಟಿಕೊಂಡಿದ್ದ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ.
ಯುಪಿಎ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್ ನಡೆಸಿದ ಪಟ್ಟಿ ನೀಡಿದ ಕಾಂಗ್ರೆಸ್ ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿ ನಡೆಸಿದ್ದನ್ನು ಬಿಜೆಪಿ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಈ ಮೊದಲು ಆರೋಪಿಸಿತ್ತು. ಬಳಿಕ ತನ್ನ ಅವಧಿಯಲ್ಲಿಯೂ ಸರ್ಜಿಕಲ್ ಸ್ಟ್ರೈಕ್‍ಗಳು ನಡೆದಿದ್ದವು ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.
ಸರ್ಜಿಕಲ್ ಸ್ಟ್ರೈಕ್ ಕುರಿತಾಗಿ ಕಾಂಗ್ರೆಸ್‍ನ ಒಬ್ಬೊಬ್ಬ ನಾಯಕರು ಒಂದೊಂದು ಲೆಕ್ಕವನ್ನು ನೀಡಿದ್ದರು. ಕಾಂಗ್ರೆಸ್‍ನ ಹಿರಿಯ ಮುಖಂಡ ರಾಜೀವ್ ಶುಕ್ಲಾ, ಕಾಂಗ್ರೆಸ್ ಅವಧಿಯಲ್ಲಿ ಆರು ಸರ್ಜಿಕಲ್ ಸ್ಟ್ರೈಕ್ ನಡೆದಿದ್ದವು ಎಂದು ಪಟ್ಟಿ ನೀಡಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಇವು ಸೇನಾ ವಿಚಾರ. ರಾಜಕೀಯ ಲಾಭಕ್ಕಾಗಿ ಇದನ್ನು ಬಳಸಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.
ಕಾಂಗ್ರೆಸ್ ಹೇಳಿಕೊಂಡಿರುವುದು ಉಗ್ರರ ವಿರುದ್ಧದ ಮಾಮೂಲಿ ಕಾರ್ಯಾಚರಣೆಗಳ ಬಗ್ಗೆ. ಸರ್ಜಿಕಲ್ ಸ್ಟ್ರೈಕ್ ಪದದ ಅರ್ಥವನ್ನು ಅರಿಯದೆಯೇ ಅವರು ಬೆನ್ನುತಟ್ಟಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಲೇವಡಿ ಮಾಡಿದ್ದರು.2016ರಲ್ಲಿ ಉರಿ ಸೇನಾ ನೆಲೆ ಮೇಲಿನ ಉಗ್ರರ ದಾಳಿ ಬಳಿಕ ಸೆಪ್ಟೆಂಬರ್‍ನಲ್ಲಿ ಗಡಿಯಲ್ಲಿನ ಪಾಕಿಸ್ತಾನದ ಭಾಗದ ಉಗ್ರರ ನೆಲೆಗಳ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್, ಭಾರತೀಯ ಸೇನೆ ನಡೆಸಿದ ಮೊದಲ ಸರ್ಜಿಕಲ್ ಸ್ಟ್ರೈಕ್ ಎಂದು ರಣಬೀರ್ ಸಿಂಗ್ ಹೇಳಿದ್ದಾರೆ.
ಬಾಲಕೋಟ್‍ನಲ್ಲಿರುವ ಉಗ್ರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿ ಬಹುದೊಡ್ಡ ಸಾಧನೆಯಾಗಿದೆ. ನಮ್ಮ ಯುದ್ಧ ವಿಮಾನಗಳು ಶತ್ರುಗಳ ಪ್ರದೇಶದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಮಾಡಿದ್ದವು. ಮರುದಿನ ಪಾಕಿಸ್ತಾನವು ವೈಮಾನಿಕ ಕಾರ್ಯಾಚರಣೆ ನಡೆಸಿತ್ತು. ಆದರೆ, ನಾವು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದೆವು ಎಂದು ರಣಬೀರ್ ಸಿಂಗ್ ಹೇಳಿದ್ದಾರೆ.
ಸರ್ಕಾರ ಹೇಳಿದ್ದು ಸತ್ಯ ಕೆಲವು ದಿನಗಳ ಹಿಂದೆ ರಕ್ಷಣಾ ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡಿತ್ತು. ಅದರಲ್ಲಿ 2016ರಲ್ಲಿ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದು ಉಲ್ಲೇಖಿಸಲಾಗಿತ್ತು. ರಾಜಕೀಯ ಪಕ್ಷಗಳು ಏನು ಹೇಳುತ್ತವೆ ಎಂಬುದರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅದಕ್ಕೆ ಸರ್ಕಾರ ಉತ್ತರ ನೀಡಿತ್ತು. ಸರ್ಕಾರ ನೀಡಿದ ಉತ್ತರ ವಾಸ್ತವ ಎಂದು ನಿಮಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಆರು ಸರ್ಜಿಕಲ್ ಸ್ಟ್ರೈಕ್
ಕಾಂಗ್ರೆಸ್ ಹಿರಿಯ ಮುಖಂಡ ರಾಜೀವ್ ಶುಕ್ಲಾ, ಆರು ದಾಳಿಗಳನ್ನು ಕಾಂಗ್ರೆಸ್ ಸರ್ಕಾರ ನಡೆಸಿತ್ತು. ಯುಪಿಎ ಅವಧಿಯಲ್ಲಿ ಮೊದಲ ಸರ್ಜಿಕಲ್ ಸ್ಟ್ರೈಕ್‍ಅನ್ನು 2008ರ ಜೂನ್ 19ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಭಟ್ಟಾಲ್ ಸೆಕ್ಟರ್‍ನಲ್ಲಿ ನಡೆಸಲಾಗಿತ್ತು. ಎರಡನೆಯ ದಾಳಿಯನ್ನು 2011ರ ಆಗಸ್ಟ್ 30-ಸೆಪ್ಟೆಂಬರ್ 1ರಂದು ಕೇಲ್‍ನ ನೀಲಂ ನದಿ ಕಣಿವೆಯುದ್ದಕ್ಕೂ ಇರುವ ಶಾರ್ದಾ ಸೆಕ್ಟರ್‍ನಲ್ಲಿ ಕೈಗೊಳ್ಳಲಾಗಿತ್ತು.
ಮೂರನೇ ಸರ್ಜಿಕಲ್ ದಾಳಿಯನ್ನು 2013ರ ಜನವರಿ 6ರಂದು ಸಾವನ್ ಪಾತ್ರಾ ತಪಾಸಣಾ ನೆಲೆಯಲ್ಲಿ ನಡೆಸಲಾಗಿತ್ತು. ನಾಲ್ಕನೆಯ ದಾಳಿ 2013ರ ಜುಲೈ 27-28ರಂದು ನಾಜಾಪಿರ್ ವಲಯದಲ್ಲಿ ನಡೆದಿತ್ತು. ಐದನೆಯದು 2013ರ ಆಗಸ್ಟ್ 6 ಮತ್ತು ಆರನೇ ಸರ್ಜಿಕಲ್ ದಾಳಿಯನ್ನು 2014ರ ಜನವರಿ 14ರಂದು ನಡೆಸಲಾಗಿತ್ತು ಎಂದು ಶುಕ್ಲಾ ಹೇಳಿಕೆ ನೀಡಿದ್ದರು.