ಮಾಧ್ಯಮ ನಿಯಂತ್ರಣಕ್ಕೆ ಕಾಂಗ್ರೆಸ್ ಟೀಕೆ

ತುಮಕೂರು
   “ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಮಾಧ್ಯಮಕ್ಕೆ ಪ್ರವೇಶ ನಿರಾಕರಿಸಿರುವುದು ಪತ್ರಿಕಾ ಸ್ವಾತಂತ್ರೃಹರಣ ಮತ್ತು ಅಧಿವೇಶನ ನಡೆಯುವ ಈ ಮೂರೂ ದಿನಗಳು ಕರಾಳ ದಿನ ಆಗಿವೆ” ಎಂದು ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಕಟುವಾಗಿ ಟೀಕಿಸಿದರು.
    ಅವರು ಗುರುವಾರ ಬೆಳಗ್ಗೆ ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
     ಕೇಂದ್ರದ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತ್ರ ಮಾಧ್ಯಯಮಗಳನ್ನು ನಿಯಂತ್ರಣ ಮಾಡುತ್ತಿದ್ದಾರೆಂದು ಈವರೆಗೆ ಭಾವಿಸಿದ್ದೆವು. ಆದರೆ ಈಗ ರಾಜ್ಯದಲ್ಲೂ ಅದು ಆರಂಭವಾಗಿದೆ. ಮಾಧ್ಯಯಮಗಳನ್ನು ಹತೋಟಿಯಲ್ಲಿಡಲು ಯತ್ನಿಸಲಾಗುತ್ತಿದೆ” ಎಂದು ಕುಟುಕಿದರು.
    ಕಳೆದ ಆರು ವರ್ಷಗಳಲ್ಲಿ ನರೇಂದ್ರ ಮೋದಿ ಎಂದೂ ಸಹ ನೇರವಾಗಿ ಪತ್ರಿಕಾಗೋಷ್ಠಿಯನ್ನು ಎದುರಿಸಿಲ್ಲ. ಎಲ್ಲವೂ ಎಡಿಟ್ ಮಾಡಿದ, ಮೇಕಪ್‍ನಿಂದ ಕೂಡಿದ ಹಾಗೂ ಪ್ಯಾಕೇಜ್ ರೂಪದಲ್ಲೇ ನಡೆದುಹೋಗಿವೆ. ನಿರ್ದಿಷ್ಟ ಟಿ.ವಿ. ಹಾಗೂ ರೇಡಿಯೋದಲ್ಲೇ ಎಲ್ಲವೂ ಆಗಿವೆ. ಕರ್ನಾಟಕದಲ್ಲೂ ಅದೇ ಸ್ಥಿತಿ ಯಥಾವತ್ತಾಗಿ ಜಾರಿಗೊಳ್ಳುತ್ತಿದೆ” ಎಂದು ಹೇಳಿದರು.
   ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ವಿಧಾನಮಂಡಲದಲ್ಲಿ ಯಾರು-ಯಾರು ಹೇಗೆ ಮಾಧ್ಯಯಮಗಳ ಕ್ಯಾಮರಾಕ್ಕೆ ಸಿಕ್ಕಿ ಬಿದ್ದರೆಂಬುದು ಎಲ್ಲರಿಗೂ ಗೊತ್ತಿದೆ. ಅಂಥವರಲ್ಲಿ `ನೀಲಿ ಹುಡುಗ’ರೂ ಇದ್ದರು. ಇಂಥ ಪ್ರಕರಣಗಳನ್ನು ಮುಚ್ಚಿಡಲು ಇದೀಗ ನಿರ್ಬಂಧ ವಿಧಿಸಲಾಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರೃಕ್ಕೆ ಧಕ್ಕೆ ಮಾಡಿದೆ” ಎಂದು ಅಭಿಪ್ರಾಯಪಟ್ಟ ಮುರಳೀಧರ ಹಾಲಪ್ಪ, “ಮಾಧ್ಯಮಗಳೂ ಈಗ ಎಚ್ಚೆತ್ತುಕೊಳ್ಳಬೇಕು. ಅದೇ ಹೊತ್ತಿಗೆ ಮುಂಬರುವ ಉಪಚುನಾವಣೆಗಳಲ್ಲಿ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಜನರು ಬಿಜೆಪಿಗೆ ಪಾಠ ಕಲಿಸಬೇಕು” ಎಂದು ಹೇಳಿದರು.
ಐ.ಟಿ. ದಾಳಿಗೆಲ್ಲ ಕಾಂಗ್ರೆಸ್ ಹೆದರುವುದಿಲ್ಲ
   ಇದೇ ಸಂದರ್ಭದಲ್ಲಿ ಪತ್ರಕರ್ತರು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರ ಮನೆ-ಶಿಕ್ಷಣ ಸಂಸ್ಥೆಗಳ ಮೇಲೆ ಐ.ಟಿ. ದಾಳಿ ನಡೆದಿರುವುದರ ಬಗ್ಗೆ ಪ್ರಶ್ನಿಸಿದಾಗ, ಪ್ರತಿಕ್ರಿಯಿಸಿದ ಮುರಳೀಧರ ಹಾಲಪ್ಪ “ಇಂಥದ್ದಕ್ಕೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ. ಇದು ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತದೆ. ಮಿಗಿಲಾಗಿ ಸತ್ಯ ಮತ್ತು ಸುಳ್ಳು ಏನೆಂಬುದು ಈಗ ಜನರಿಗೇ ಗೊತ್ತಾಗುತ್ತಿದೆ. ಮತದಾರರರು ಎಲ್ಲವನ್ನೂ ಪರಾಮರ್ಶೆ ಮಾಡಲು ಈಗ ಅವಕಾಶ ಲಭಿಸಿದಂತೆ ಆಗಿದೆ” ಎಂದು ಅಭಿಪ್ರಾಯಪಟ್ಟರು.
   ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾರ್ಪೋರೇಟರ್ ಟಿ.ಎಸ್.ತರುಣೇಶ್, ಮುಖಂಡರುಗಳಾದ ಮಂಜುನಾಥ್, ರೇವಣಸಿದ್ದಯ್ಯ, ಮರಿಚೆನ್ನಮ್ಮ, ವೈ.ಎನ್.ನಾಗರಾಜು ಮೊದಲಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link