ಬೆಂಗಳೂರು
ಮಂತ್ರಿಮಂಡಲ ಪುನಾರಚನೆಯಿಂದಾಗಿ ಕಾಂಗ್ರೆಸ್ ನಲ್ಲಿ ಅತೃಪ್ತರ ಅಸಮಾಧಾನ ಹೆಚ್ಚಾಗಿದ್ದು, ಅಸಮಾಧಾನಗೊಂಡಿರುವವರ ನಡೆ ಮತ್ತು ನಿಲುವುಗಳನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತಾಡಿದ ಅವರು, ಆದರೆ ಇದೂವರೆಗೆ ಕಾಂಗ್ರೆಸಿನ ಯಾವ ಅತೃಪ್ತ ಶಾಸಕರು ತಮ್ಮನ್ನು ಸಂಪರ್ಕಿಸಿಲ್ಲ. ಮಾತುಕತೆಯನ್ನೂ ನಡೆಸಿಲ್ಲ. ಆದರೂ ಅತೃಪ್ತರನ್ನು ಬಿಜೆಪಿಗೆ ಆಹ್ವಾನಿಸಿದ್ದೇವೆ. ಪಕ್ಷಕ್ಕೆ ಸೇರ್ಪಡೆಯಾದರೆ ಸೂಕ್ತ ಸ್ಥಾನಮಾನ, ಗೌರವ ಕೊಡುತ್ತೇವೆ ಎಂದರು.
ಸಂಪುಟ ಪುನಾರಚನೆ ಸಮಾರಂಭಕ್ಕೆ ತಮಗೆ ಆಹ್ವಾನ ಬಂದಿಲ್ಲ. ಈ ಹಿಂದೆಯೂ ಇಂತಹ ಸಮಾರಂಭಗಳಿಗೆ ಆಮಂತ್ರಣ ದೊರೆತಿಲ್ಲ. ಇಷ್ಟಕ್ಕೂ ತಾವು ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸೇರಲು ತಮಗೆ ಪರಮೇಶ್ವರ್ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ಹರಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪರಮೇಶ್ವರ್ ಅವರ ಬಗ್ಗೆ ತಮಗೆ ಗೌರವವಿದೆ. ಆದರೆ ಅವರು ಹಗುರವಾಗಿ ಮಾತನಾಡಬಾರದು. ಹೇಗಿದ್ದರೂ ಕಾಂಗ್ರೆಸಿನಲ್ಲಿ ಅಸಮಾಧಾನವಿದೆ. ಸ್ವತಃ ಪರಮೇಶ್ವರ್ ಬಿಜೆಪಿ ಸೇರಿದರೆ ಸೂಕ್ತ ಸ್ಥಾನಮಾನ ಒದಗಿಸಲಾಗುವುದು ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಬಿಜೆಪಿ ಅಗತ್ಯ ಸಿದ್ಧತೆ ಆರಂಭಿಸಿದ್ದು, ಈಗಾಗಲೇ ಬೆಳಗಾವಿ, ಚಿಕ್ಕೋಡಿಯ ಪಕ್ಷದ ಪ್ರಮುಖರ ಸಭೆ ನಡೆಸಲಾಗಿದೆ ಅವರು ಯಡಿಯೂರಪ್ಪ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
