ಟೀ ಮಾರುವ ವ್ಯಕ್ತಿ ಪ್ರಧಾನಿಯಾಗುವ ಅವಕಾಶ ನೀಡಿದ್ದು ಕಾಂಗ್ರೆಸ್-ಚಂದ್ರಪ್ಪ

ಚಳ್ಳಕೆರೆ

        ರಾಷ್ಟ್ರದ ಕಟ್ಟಕಡೆಯ ಪ್ರಜೆಯೂ ಸಹ ಉನ್ನತ್ತ ಮಟ್ಟದ ಅಧಿಕಾರವನ್ನು ಪಡೆಯುವ ಅವಕಾಶವನ್ನು ಸಂವಿಧಾನ ಒದಗಿಸಿಕೊಟ್ಟಿದೆ. ಟೀ ಮಾರುವ ವ್ಯಕ್ತಿಯೊಬ್ಬ ಈ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ಆಡಳಿತ ನಿರ್ವಹಿಸುವ ಸಂವಿಧಾನ ಬದ್ದವಾದ ಅಧಿಕಾರ ನೀಡಿದ್ದು ಕಾಂಗ್ರೆಸ್ ಪಕ್ಷ ಮತ್ತು ಸಂವಿಧಾನವನ್ನು ಸಮರ್ಪಣೆ ಮಾಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆದರೆ, ಕೇಂದ್ರ ಸರ್ಕಾರದ ಸಚಿವರೇ ಸಂವಿಧಾನವನ್ನು ವಿರೋಧಿಸುತ್ತಿದ್ದರೂ ಪ್ರಧಾನ ಮಂತ್ರಿಗಳು ಮಾತ್ರ ಈ ಬಗ್ಗೆ ಚಕಾರವೆತ್ತದೇ ಇರುವುದು ನೋವಿನ ಸಂಗತಿ ಎಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಪ್ರಧಾನ ಮಂತ್ರಿಯವರನ್ನು ನಯವಾಗಿ ಟೀಕಿಸಿದರು.

          ಅವರು, ಗುರುವಾರ ಛೇಂಬರ್ ಆಫ್ ಕಾರ್ಮಸ್ ಸಭಾಂಗಣದಲ್ಲಿ ರಾಷ್ಟ್ರೀಯ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಚಳ್ಳಕೆರೆ ಘಟಕ ಹಮ್ಮಿಕೊಂಡಿದ್ದ ಜನಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

        ರಾಷ್ಟ್ರದಲ್ಲಿ 134 ವರ್ಷಗಳ ಕಾಲ ಬಡವರ, ಧೀನ ದಲಿತರ, ಶೋಷಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಹಿತಕ್ಕಾಗಿ ಶ್ರಮಿಸಿರುವುದು ಕಾಂಗ್ರೆಸ್ ಪಕ್ಷ. ಈ ರಾಷ್ಟ್ರದ ಐಕ್ಯತೆ, ಸಾರ್ವಭೌಮತೆಗಾಗಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ, ರಾಜೀವಗಾಂಧಿ ಪ್ರಾಣ ತ್ಯಾಗ ಮಾಡಿದ್ಧಾರೆ. ದೇಶದ ರಕ್ಷಣೆಯಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದ ಮಹಾನ್ ನಾಯಕರು ಯಾರಾದರೂ ಇದ್ದಲ್ಲಿ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ.

         ಇಂದು ಆಡಳಿತ ನಡೆಸುತ್ತಿರುವ ಎನ್‍ಡಿಎ ಮೈತ್ರಿ ಕೂಟ ಸರ್ಕಾರದ ಪಕ್ಷಗಳ ಯಾವುದೇ ಮುಖಂಡರು ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿಲ್ಲ. ಹಾಗಾಗಿ ರಾಷ್ಟ್ರದ ಹಿತಚಿಂತನೆ ಬಯಸುವ ಗೌರವವನ್ನು ಸಂರಕ್ಷಿಸುವ ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಪಕ್ಷದ ಯುವಕ, ಯುವತಿಯರು ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿಯವರನ್ನು ಆದರ್ಶವಾಗಿಟ್ಟುಕೊಳ್ಳಬೇಕೆಂದರು. ನಮ್ಮ ರಾಷ್ಟ್ರದ ಸಂವಿಧಾನವೇ ನಮಗೆ ದಾರಿದೀಪವಾಗಿದ್ದು, ಸಂವಿಧಾನದ ಬಗ್ಗೆ ಲಘುವಾಗಿ ಮಾತನಾಡುವ ವ್ಯಕ್ತಿ ಮತ್ತು ಪಕ್ಷಗಳನ್ನು ತಿರಸ್ಕರಿಸುವಂತೆ ಅವರು ಮನವಿ ಮಾಡಿದರು.

         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ರಾಷ್ಟ್ರದ ಹಿತವನ್ನು ಕಾಪಾಡುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಈ ರಾಷ್ಟ್ರದ ಭವಿಷ್ಯದ ಭಾವಿ ಪ್ರಧಾನ ಮಂತ್ರಿಯಾಗಲಿದ್ಧಾರೆ. ಈ ಹಿಂದೆ ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಯಾದ ಸಂದರ್ಭದಲ್ಲಿ ಪಾಕಿಸ್ತಾನ ನಮ್ಮ ಮೇಲೆ ಏರಿ ಬಂದಾಗ ಅಂದೇ ನಮ್ಮ ಸೈನಿಕರು ಪಾಕಿಸ್ತಾನವನ್ನು ಹಿಮೆಟ್ಟಿಸಿದ್ದಾರೆ.

         ಪ್ರಸ್ತುತ ವರ್ಷವೂ ಸಹ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿ ಹಿನ್ನೆಲೆಯಲ್ಲಿ ಪಾಸ್ತಾನದ ಉಗ್ರ ನೆಲೆಗಳನ್ನು ಭಾರತಿಯ ಸೇನೆ ನೆಲಸಮ ಮಾಡಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ಧಾರೆ. ಆದರೆ, ಇದನ್ನೇ ಚುನಾವಣೆ ವಿಷಯವನ್ನಾಗಿ ಭಾರತೀಯ ಜನತಾ ಪಕ್ಷ ಜನರ ಎದುರು ಪ್ರಚಾರ ಮಾಡಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಮುಂಜಾಗ್ರತೆ ವಹಿಸಬೇಕಿದೆ. ಕಾಂಗ್ರೆಸ್ ಪಕ್ಷ ಶತಮಾನವನ್ನು ಪೂರೈಸಿದ ಪಕ್ಷವಾಗಿದ್ದು, ಎಲ್ಲಾ ಸಮುದಾಯವನ್ನು ಸಮಾನತೆಯಿಂದ ಕಾಣುವ ಪಕ್ಷವಾಗಿದೆ.

        ಚುನಾವಣಾ ಸಂದರ್ಭದಲ್ಲಿ ಬೇರೆ ಪಕ್ಷಗಳು ಹೆಚ್ಚು ಜಾಗೃತವಹಿಸಿ ಕಾರ್ಯನಿರ್ವಹಿಸಲಿದ್ದು, ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಹಂತದಲ್ಲಿ ಹಿನ್ನಡೆ ಉಂಟಾಗದಂತೆ ಜಾಗ್ರತೆ ವಹಿಸಬೇಕು. ಪಕ್ಷದ ಮತದಾರರು ನನ್ನನ್ನು ಪುನಃ ಎರಡನೇ ಬಾರಿಗೆ ಶಾಸಕರನ್ನಾಗಿ ಮಾಡಿದ ರೀತಿಯಲ್ಲೇ ನಾವೆಲ್ಲರೂ ಸೇರಿ ಬಿ.ಎನ್.ಚಂದ್ರಪ್ಪನವರನ್ನು ಮತ್ತೆ ಎರಡನೇ ಅವಧಿಯ ಸಂಸದರನ್ನಾಗಿ ಕಾಣುವ ಕನಸು ನನಸು ಮಾಡಲು ಎಲ್ಲಾ ಕಾರ್ಯಕರ್ತರ ಮುಖಂಡರ ಪರಿಶ್ರಮ ಅಗತ್ಯವೆಂದರು.

         ಕಾರ್ಯಕ್ರಮಕ್ಕೂ ಮುನ್ನ ಉಗ್ರರ ದಾಳಿಗೆ ತುತ್ತಾದ ಸೈನಿಕರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಕೆ.ಟಿ.ಮುತ್ತುರಾಜ್ ರಾಷ್ಟ್ರ ಭಕ್ತಿ ಗೀತೆ ಹಾಡಿದರು. ಜಿಲ್ಲಾ ಸೇವಾದಳದ ಅಧ್ಯಕ್ಷ ಆಶ್ರಫ್ ಆಲಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಫ್ಯಾತರಾಜನ್, ಕೆಪಿಸಿಸಿ ತರಬೇತುದಾರರಾದ ಮುನೀರ್, ಸೈಯದ್, ಮುಖಾರಿ, ಮೈಲಾರಪ್ಪ, ಗಂಜಿಗಟ್ಟೆ ಶಿವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಮರಡಿಶಿವಪ್ರಕಾಶ್, ಕಿರಣ್‍ಶಂಕರ್, ಸಿ.ವೀರಭದ್ರಬಾಬು, ಟಿ.ಪ್ರಭುದೇವ್, ಟಿ.ಗಿರಿಯಪ್ಪ, ಗೀತಾಬಾಯಿ, ಆರ್.ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ, ಕವಿತಾಬೋರಯ್ಯ, ಸುಮ್ಮಕ್ಕ, ಸುಮಭರಮಣ್ಣ, ಬಿ.ಟಿ.ರಮೇಶ್‍ಗೌಡ, ನಾಯ್ಡು, ಸಂಪತ್‍ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link