ಚಿತ್ರದುರ್ಗ:
ಭಕ್ತರನ್ನು ದಿಕ್ಕುತಪ್ಪಿಸುವ, ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಸ್ವಾಮಿಗಳು ಇದ್ದಾರೆ. ಗುರುಗಳು ತಪ್ಪು ಮಾಡಿದಾಗ ನಿಷ್ಟುರವಾಗಿ ಎಚ್ಚರಿಸುವ ಗುಣ ಭಕ್ತರಲ್ಲಿ ಬೆಳೆಯಬೇಕು ಎಂದು ಸಾಣೆಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಭಕ್ತರಿಗೆ ಕರೆ ನೀಡಿದರು.
ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ 89 ನೇ ಮಹಾಶಿವರಾತ್ರಿ ಮಹೋತ್ಸವದ ಮೂರನೆ ದಿನದ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಕ್ತಿ ಮೌಢ್ಯವಾಗಿರಬಾರದು. ಭಕ್ತರು, ಸ್ವಾಮಿಗಳು ಚೆನ್ನಾಗಿದ್ದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ. ರಾಜನು ಕನಸು ಕಾಣಬೇಕು. ಭಿಕ್ಷುಕನು ಕನಸು ಕಾಣಬೇಕು. ಕನಸು ವ್ಯಕ್ತಿತ್ವ ವಿಕಸನಗೊಳಿಸುವಂತಿರಬೇಕು. ಜೀವನದಲ್ಲಿ ಎಚ್ಚರವಿದ್ದು ಯಾರು ಕನಸು ಕಾಣುತ್ತಾರೋ ಅವರು ಬುದ್ದ, ಬಸವ, ಏಸು, ಪೈಗಂಬರ್ ಆಗುತ್ತಾರೆ ಎಂದರು
ಶಿವರಾತ್ರಿ ಎಂದರೆ ರಾತ್ರಿಯಿಡಿ ಪೂಜೆ ಮಾಡುವುದಲ್ಲ. ಅಜ್ಞಾನದಿಂದ ಮುಕ್ತರಾಗುವುದೇ ನಿಜವಾದ ಶಿವರಾತ್ರಿ. ಶಿವರಾತ್ರಿಯನ್ನು ಸಾಧನವನ್ನಾಗಿ ಮಾಡಿಕೊಂಡು ಭಕ್ತರನ್ನು ಶೋಷಣೆ ಮಾಡುವವರು ಸಾಕಷ್ಟು ಮಂದಿಯಿದ್ದಾರೆ. ಧರ್ಮ ಧರ್ಮಾಂಧತೆಗೆ ಒಳಗಾಗಿದೆ. ಯಾವ ಧರ್ಮವೂ ಹಿಂಸೆಯನ್ನು ಒಪ್ಪುವುದಿಲ್ಲ. ನಮ್ಮ ದೇಶದ ನಲವತ್ತು ಯೋಧರನ್ನು ಸಾಯಿಸಿದವರು ಧರ್ಮಾಂಧರು. ಕುರಾನ್ ಎಲ್ಲಿಯೂ ಹಿಂಸೆಯನ್ನು ಹೇಳಿಲ್ಲ ಎಂದರು.
ನಮ್ಮ ಯೋಧರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಭಾರತದ ಸೇನೆ ಪಾಕಿಸ್ತಾನ ಗಡಿಯೊಳಗೆ ನುಗ್ಗಿ ಮಲಗಿದ್ದ ಉಗ್ರರನ್ನು ಸರ್ವನಾಶ ಮಾಡಿದ್ದು ಸರಿನೆ. ಆದರೆ ಅದನ್ನೆ ಮುಂದುವರೆಸಿಕೊಂಡು ಹೋಗಬಾರದು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿ ಎಂದು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ಶಾಂತಿಯನ್ನು ಬಯಸಬೇಕಾಗಿದೆ. ಶಕ್ತಿ ಪ್ರದರ್ಶಿಸುವುದು ಮತ್ತೊಬ್ಬರನ್ನು ಹತ್ಯೆ ಮಾಡುವುದಕ್ಕಲ್ಲ. ಬದಲಾಗಿ ಮತ್ತೊಬ್ಬರ ಬದುಕನ್ನು ಕಟ್ಟುವ ಕೆಲಸವಾಗಬೇಕು. ಎರಡು ದೇಶಗಳ ನಡುವೆ ಶಾಂತಿಯ ಸಂಧಾನವಾಗ ಬೇಕಿದೆ .
ವಿವೇಕದ ಮಾತುಗಳನ್ನು ಯಾರು ಆಡುತ್ತಿಲ್ಲ. ಮಾಧ್ಯಮಗಳು ಪ್ರಚೋಧನೆ ಮಾಡುವುದನ್ನು ನಿಲ್ಲಿಸಬೇಕು. ಯಾವ ಧರ್ಮದಲ್ಲಿಯೂ ಹಿಂಸೆಗೆ ಸ್ಥಾನವಿಲ್ಲ. ಅಹಿಂಸೆಯ ಮೂಲಕ ಸಮಾಜದಲ್ಲಿ ಏನಾದರೂ ಬದಲಾವಣೆ ತರಬಹುದು ಎಂದು ತಿಳಿಸಿದರು. ಚಿಕ್ಕಂದಿನಲ್ಲಿಯೇ ಒಳ್ಳೆಯ ಶಿಕ್ಷಣ ಸಿಕ್ಕರೆ ಅಂತಹ ವ್ಯಕ್ತಿ ತಪ್ಪು ದಾರಿಗೆ ಹೋಗುವುದಿಲ್ಲ. ಸಕಾರಾತ್ಮಕ ಚಿಂತನೆ ಬೇಕು. ನಕಾರಾತ್ಮಕ ಚಿಂತನೆ ದಾರಿ ತಪ್ಪಿಸುತ್ತದೆ. ಸಮಸ್ಯೆಗಳಿದ್ದಾಗಲೆ ಸ್ವಾಮಿಗಳ ಅವಶ್ಯಕತೆಯಿರುವುದು. ಕಸವಿದ್ದರೆ ಮಾತ್ರ ಕಸಪರಕೆ ಬೇಕು.
ಮಠ ಸಣ್ಣದು, ದೊಡ್ಡದು ಎನ್ನುವಂತಿಲ್ಲ. ಸ್ವಾಮಿಗಳು ಮಾಡುವ ಕಾರ್ಯ ಎಂತಹುದು ಎನ್ನುವುದು ಬಹಳ ಮುಖ್ಯ. ಭಕ್ತಿಯ ಮೂಲಕ ಕಾಮ, ಕ್ರೋಧ, ಮದ, ಮೋಹ, ಮತ್ಸರ ಎಲ್ಲವನ್ನು ಕಳೆಯಬೇಕು. ಮಾತು ಸೂತಕ. ಮಾತಾಡದೆ ಇದ್ದರೆ ಮತ್ತೊಬ್ಬರ ಜೊತೆ ಭಾವನೆಗಳನ್ನು ಹಂಚಿಕೊಳ್ಳುವುದು, ಅರ್ಥಮಾಡಿಕೊಳ್ಳುವುದು ಹೇಗೆ? ಮಾತು ನೇರ, ಸರಳ, ಪಾರದರ್ಶಕವಾಗಿದ್ದರೆ ಭಗವಂತನು ಮೆಚ್ಚುತ್ತಾನೆ. ಬಸವಣ್ಣ ಹೇಳಿದಂತೆ ನುಡಿದಂತೆ ನಡೆಯುವುದು ಮುಖ್ಯ. ನುಡಿ ಜಾಣರಿಗಿಂತ ನಡೆ ಧೀರರು ನಾಡಿಗೆ ಬೇಕು. ನಡೆ-ನುಡಿ ಒಂದಾಗಿರದಿದ್ದರೆ ಏನು ಪ್ರಯೋಜನ. ನಡೆಯೇ ಒಂದು ನುಡಿಯೇ ಒಂದು ಆದರೆ ಎಷ್ಟು ಶಿವರಾತ್ರಿ ಆಚರಿಸಿದರೂ ಪ್ರಯೋಜನವಿಲ್ಲ. ಶರಣರು ಮಾತಿನ ತಂತ್ರಗಾರಿಕೆ ಮೂಲಕ ಸಮಾಜದ ಶೋಷಣೆ ಮಾಡಲಿಲ್ಲ. ನೇರ ಮಾತಿನ ಮೂಲಕ ಸಮಾಜದ ಕೊಳೆ ತೊಳೆದರು ಎಂದು ಹೇಳಿದರು.
ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಮಾತನಾಡುತ್ತ ಶಿವಲಿಂಗಾನಂದಸ್ವಾಮಿಗಳು ಕಬೀರಾನಂದಾಶ್ರಮಕ್ಕೆ ಬಂದ ಮೇಲೆ ಅನೇಕ ಕಟ್ಟಡ, ಶಾಲೆ, ಆಶ್ರಮಗಳನ್ನು ತೆರೆದಿದ್ದಾರೆ. ಇದರಿಂದ ನೂರಾರು ಮಕ್ಕಳ ಶಿಕ್ಷಣ ಕೇಂದ್ರವಾಗಿದೆ. ಸಿದ್ದಾರೂಢ ಪರಂಪರೆಯಲ್ಲಿ ಸಾಗುತ್ತಿರುವ ಶಿವಲಿಂಗಾನಂದ ಸ್ವಾಮಿಗಳು ಬಡವರ, ಅನಾಥರ, ವೃದ್ದರ ಕಣ್ಣೀರೊರೆಸುವ ಕೆಲಸ ಮಾಡುತ್ತ ಪ್ರತಿ ವರ್ಷವೂ ಮಹಾಶಿವರಾತ್ರಿ ಮಹೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಸ್ಯ ಸಾಹಿತಿ ಖ್ಯಾತ ವಾಗ್ಮಿ ಪ್ರೊ.ಕೃಷ್ಣೆಗೌಡರು ಮಾತನಾಡಿ ಗುರು-ಭಕ್ತ ಒಂದೆ ತತ್ವದ ಎರಡು ಮುಖಗಳಿದ್ದಂತೆ. ಒಂದು ತತ್ವ ಪೂರ್ಣವಾಗಬೇಕಾದರೆ ಮತ್ತೊಂದು ತತ್ವ ಬೇಕು. ಭಕ್ತರಿದ್ದರೆ ಮಠ. ಗುರುತತ್ವದ ಮತ್ತೊಂದು ಭಾಗ ಭಕ್ತ. ಭಕ್ತಿ ರೋಚಕವಾದುದು. ಅದಕ್ಕಾಗಿಯೇ ಭಕ್ತರನ್ನು ಒಂದು ಕಡೆ ಸೆಳೆದಿಡುತ್ತದೆ. ಜಗತ್ತನ್ನು ಆಳುತ್ತಿರುವುದು ಭಕ್ತಿ ಎಂದು ಭಕ್ತಿಗಿರುವ ಮಹತ್ವವನ್ನು ತಿಳಿಸಿದರು.
ಆಸೆ ಪಡುವುದು ಭೋಗಕ್ಕೆ.
ಪೂಜೆ ಮಾಡುವುದು ವೈರಾಗ್ಯಕ್ಕೆ. ಇದು ಭಾರತೀಯ ಪರಂಪರೆ. ಪ್ರಾಣಿ ಪಕ್ಷಿಗಳು ನಗುವುದಿಲ್ಲ. ಮನುಷ್ಯನಿಗೆ ಮಾತ್ರ ನಗಲು ಬರುತ್ತದೆ. ಆದ್ದರಿಂದ ಯಾವಾಗಲೂ ಚಿಂತಿಸುತ್ತ ಇರುವ ಬದಲು ಜೀವ ಇರುವ ತನಕ ನಗು ನಗುತ್ತಾ ಖುಷಿಯಿಂದ ಇರುವುದನ್ನು ಕಲಿಯಬೇಕು. ಮಾತಿಗೆ ಅಭಿಪ್ರಾಯವಿರುತ್ತದೆ. ಅರ್ಥವಿರುವುದಿಲ್ಲ. ಸಾರ್ವಜನಿಕವಾಗಿ ಮಾತುಗಳು ಬೆಲೆ ಕಳೆದುಕೊಳ್ಳುತ್ತಿದೆ. ಮಾತಿಗೆ ಸಹಜವಾದ ಅರ್ಥವಿಲ್ಲ.
ನಡವಳಿಕೆ, ಆಲೋಚನೆ, ಮನಸ್ಸು ಶುದ್ದವಿರದಿದ್ದರೆ ಮಾತು ನಂಬಿಕೆ ಕಳೆದುಕೊಳ್ಳುತ್ತದೆ ಎಂದರು. ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಮಹಾಸ್ವಾಮಿಗಳು, ಶೃಂಗೇರಿಯ ಗುಣಾನಾಥ ಮಹಾಸ್ವಾಮಿಗಳು, ದಸರಿಘಟ್ಟದ ಚಂದ್ರಶೇಖರನಾಥ ಮಹಾಸ್ವಾಮಿಗಳು, ಚಿಕ್ಕಬಳ್ಳಾಪುರದ ಮಂಗಳನಾಥ ಮಹಾಸ್ವಾಮಿಗಳು, ಕಬಳಿಯ ಶಿವಪುತ್ರನಾಥಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ನಗರಸಭೆ ಸದಸ್ಯರುಗಳಾದ ಟಿ.ರಮೇಶ್, ಭಾಸ್ಕರ್, ಪಿ.ವಿ.ಎಸ್.ಆಸ್ಪತ್ರೆಯ ಡಾ.ಶ್ರೀಧರಮೂರ್ತಿ ವೇದಿಕೆಯಲ್ಲಿದ್ದರು.
ಸಾಂಸ್ಕೃತಿಕ ಪರಿಚಾರಕ ಕೆ.ವೆಂಕಣ್ಣಾಚಾರ್‍ರವರನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
