ಕೂಡ್ಲಿಗಿ:
ಕೂಡ್ಲಿಗಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರು ಇಲ್ಲ ಎನ್ನುವ ಮಾತೇ ಬೇಡ, ನಿಮ್ಮೊಂದಿಗೆ ನಾನು ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರು, ಜೆಡಿಎಸ್ ಮುಖಂಡರು ಇದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಪರ ಪಟ್ಟಣದ ವಾಸವಿ ಪ್ರೌಢ ಶಾಲಾ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನಾವು ಗೋಪಾಲಕೃಷ್ಣ ಅವರ ಪಲಕ್ಕಿಯನ್ನು ಹೊತ್ತಿದ್ದೇವೆ. ಅವರೇನು ನಿಮ್ಮ ಕ್ಷೇತ್ರದಲ್ಲಿ ಯಾವ ಪಲ್ಲಕ್ಕಿಯನ್ನು ಹೋರುವುದಿಲ್ಲ. ಕಳೆದ ವಿಧಾನ ಸಭಾ ಕ್ಷೇತ್ರದಲ್ಲಿ ಬಳ್ಳಾರಿ ಗ್ರಾಮೀಣದಲ್ಲಿ ಸ್ಪರ್ಧೆ ಮಾಡುವಂತೆ ತಿಳಿಸಿದ್ದೆವು. ಆದರೆ ಅವರು ಮೋಳಕಾಲ್ಮೂರು ಕ್ಷೇತ್ರ ಕೊಡುವಂತೆ ಕೇಳಿದ್ದರು. ನಂತರ ಶ್ರೀ ರಾಮುಲು ಅಣ್ಣ ಅಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ತಿಳಿದ ತಕ್ಷಣ ಮತ್ತೆ ಬಳ್ಳಾರಿ ಗ್ರಾಮೀಣಕ್ಕೆ ಬರುತ್ತೇನೆ ಎಂದು ಹೇಳಿದರು.
ಇದರಿಂದ ಕಾಂಗ್ರೆಸ್ ಪಕ್ಷವೇನು ಟೂರಿಂಗ್ ಟಾಕೀಸ್ ಅಲ್ಲ ಹೋಗು ಎಂದು ಕಳಿಸಿದ್ದೆವು. ಇದರಿಂದ ಕೊನೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಯಾರು ಇಲ್ಲದ ಕ್ಷೇತ್ರಕ್ಕೆ ಬಂದು ಗೆದ್ದಿದ್ದಾರೆ. ಬಳ್ಳಾರಿ ಗ್ರಾಮೀಣದಲ್ಲಿ ಏನು ಮಾಡದ ಅವರು ಇಲ್ಲೇನು? ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ನಿಮ್ಮ ಪಲ್ಲಕ್ಕಿಯನ್ನು ಹೋರಲು ನಾವು ಸಿದ್ದರಿದ್ದೇವೆ. ಜೆಡಿಎಸ್ ಮುಖಂಡ ಎನ್.ಟಿ. ಬೊಮ್ಮಣ್ಣ, ರಘು ಗುಜ್ಜಾಲ್, ಲೋಕೇಶ್ ನಾಯ್ಕ್ ಹಾಗೂ ಜಿಲ್ಲೆಯ ಸಚಿವರೊಂದಿಗೆ ಸೇರಿ ಕ್ಷೇತ್ರದಲ್ಲಿ ಏನು ಮಾಡಬೇಕು ಎಂದು ಚರ್ಚೆ ನಡೆಸುತ್ತೇವೆ. 40 ಸಾವಿರ ಮತಗಳ ಅಂತರದಿಂದ ಮತ ನೀಡಿದರೆ ಕ್ಷೇತ್ರದಲ್ಲಿ ಜನ ಮಾನಸದಲ್ಲಿ ಉಳಿಯುವಂತಹ ಕೆಲಸ ಹಮ್ಮಿಕೊಳ್ಳುತ್ತೆವೆ ಎಂದರು.
ಶ್ರೀ ರಾಮುಲು ಅಣ್ಣ, ನಮ್ಮ ಗಂಡನ್ನೆ ತಂದು ನಿಲ್ಲಿಸಿದ್ದಾರೆ. ಕುಸ್ತಿ ಆಡು ಎಂದು ಹೇಳಿದರೆ, ನೋಡಲು ಬಂದವರನ್ನೇ ಅಖಾಡಕ್ಕೆ ನೂಕಿದ್ದಾರೆ ಎಂದು ಗೇಲಿ ಮಾಡಿದ ಅವರು, ವಿಶ್ರಾಂತಿ ಪಡೆಯುವಂತೆ ಕೋರ್ಟ್ ರೆಡ್ಡಿಗೆ ಹೇಳಿದ್ದು, ಅವರ ಪಾಡಿಗೆ ಅವರು ಇದ್ದು, ರಘುಪತಿ ರಾಘವ ಎಂದು ಭಜನೆ ಮಾಡುತ್ತ ಕಾಲ ಕೆಳೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಜೆಡಿಎಸ್ ಮುಖಂಡ ಎನ್.ಟಿ. ಬೊಮ್ಮಣ್ಣ ಮಾತನಾಡಿ, ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಸದ್ಯ ಮುಂಚೋಣಿ ನಾಯಕರಾಗಿದ್ದಾರೆ. ಅವರು ಮುಂದೆ ರಾಜ್ಯದ ದೊಡ್ದ ಪದವಿ ಪಡೆಯಲಿದ್ದಾರೆ ಎನ್ನುವ ಮೂಲಕ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ಪರೋಕ್ಷವಾಗಿ ಹೇಳಿದರು.
ಕಳೆದ ಚುನಾವಣೆಯಲ್ಲಿ ಶ್ರೀ ರಾಮುಲು ಕೈ ಚೆಲ್ಲಿದ್ದರು. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಪೈಪೋಟಿ ಇದ್ದು, ಎಚ್ಚರಿಕೆಯಿಂದ ಚುನಾವಣೆ ನಡೆಸಬೇಕಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹೇಳಿದರು
ಲೋಕಸಭಾ ಅಭ್ಯರ್ಥಿ ವಿ.ಎಸ್. ಉಗ್ರಪ್ಪ, ಸಚಿವರಾದ ಈ. ತುಕಾರಾಂ, ಪಿ.ಟಿ. ಪರಮೇಶ್ವರ ನಾಯ್ಕ್, ಮುಖಂಡ ಸಂತೋಷ್ ಲಾಡ್ ಮಾತನಾಡಿದರು. ಶಾಸಕ ಭೀಮಾ ನಾಯ್ಕ್, ಕೆಪಿಸಿಸಿ ಕಾರ್ಯದರ್ಶಿಗಳಾದ ಹಿರೇಕುಂಬಳಗುಂಟೆ ಉಮೇಶ್, ಜಿ. ನಾಗಮಣಿ, ಸದಸ್ಯ ಉದಯ ಜನ್ನು, ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಸಿ.ಬಿ. ಜಯರಾಮ್ ನಾಯಕ, ರಾಬಕೋ ಹಾಲು ಒಕ್ಕೂಟದ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಕಾಂಗ್ರೆಸ್ ಅಧ್ಯಕ್ಷರಾದ ಕೂಡ್ಲಿಗಿಯ ಗುಳಿಗಿ ವೀರೇಂದ್ರ ಕುಮಾರ್, ಹೊಸಹಳ್ಳಿಯ ಕೃಷ್ಣ ನಾಯ್ಕ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನೌಷದ್, ರಘು ಗುಜ್ಜಾಲ್, ಲೋಕೇಶ್ ನಾಯಕ, ಶಶಿಧರ ಸ್ವಾಮಿ ಸೇರಿದಂತೆ ಅನೇಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
