ಹೂವಿನಹಡಗಲಿ :
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರ ಒಕ್ಕೂಟದಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಸಿ.ಎಂ.ಕುಮಾರಸ್ವಾಮಿಯವರು ಈ ಹಿಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅದರಂತೆ ಸರ್ಕಾರ ನಡೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪೊಲೀಸ್ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಗಳಂತೆ ಸಾರಿಗೆ ಇಲಾಖೆಯು ಕೂಡಾ ಜನರ ದೈನಂದಿನ ಅತ್ಯಾವಶ್ಯಕ ಸೇವೆಯಲ್ಲಿ ತೊಡಗಿದ್ದು, ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸಿದಾಗಲು ಕೂಡಾ ಸಾರಿಗೆ ನೌಕರರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.
ನಮ್ಮ ಸಂಸ್ಥೆಯ ಕಾರ್ಮಿಕರು ದಿನದ 24 ಗಂಟೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು, ಶ್ರಮದ ಜೊತೆಗೆ ಕೆಲವೊಂದು ವಯಕ್ತಿಕ ಹಬ್ಬ, ಹರಿದಿನಗಳ ಸಂಭ್ರಮದಿಂದಲೂ ಕೂಡಾ ವಂಚಿತರಾಗಿ, ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದೇವೆ. 8 ತಾಸು ಕೆಲಸ ನಿರ್ವಹಿಸುವವರಿ ಗಿಂತ 3 ಪಟ್ಟು ಕಡಿಮೆ ಸಂಬಳವನ್ನು ಪಡೆಯುತ್ತಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಪಕ್ಕದ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ಆಂಧ್ರದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿದ್ದು, ನಮ್ಮ ಸರ್ಕಾರವು ಕೂಡಾ ನಮ್ಮ ಬೇಡಿಕೆಗಳನ್ನು ಈಡೇರಿಸುವುದರ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ ಪ್ರಭಾಕರ ಗೌಡರವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂದರ್ಭದಲ್ಲಿ ಹೆಚ್.ಪರಮೇಶಪ್ಪ, ಹೆಚ್.ಬಸವನಗೌಡ, ಕೊರ್ಲಹಳ್ಳಿ ಶಾಂತರಾಜ, ಕರೆಯತ್ತಿನ ಕೊಟ್ರೇಶ, ನಿಂಗಪ್ಪ, ಲಕ್ಷ್ಯಪತಿ, ವನಜಾಕ್ಷಿ, ಶೋಭಾ, ಸಕ್ರಿಬಾಯಿ, ಯಶೋಧ, ಶಿವಲೀಲಾ ಸೇರಿದಂತೆ ಇತರರು ಇದ್ದರು.