ತುಮಕೂರು
ಅಹಂ ಮತ್ತು ಉಡಾಫೆಗಳೇ ಭಾರತ ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಸಾಧಿಸದಿರುವುದಕ್ಕೆ ಕಾರಣ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಾಧುಸ್ವಾಮಿ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯವು ಜಿಲ್ಲಾಡಳಿತದ ಸಹಯೋಗದಲ್ಲಿ ಮಂಗಳವಾರ ಸಂವಿಧಾನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಒಂದುದೇಶಒಂದು ಸಂವಿಧಾನ ಅಭಿಯಾನದಲ್ಲಿ ಮಾತನಾಡಿದರು.
ಎಲ್ಲರಿಗೂ ತಾನೇನೋ ದೊಡ್ಡದಾದದ್ದನ್ನು ಸಾಧಿಸಿದ್ದೇನೆ ಎಂಬ ಅಹಂಭಾವ, ಇನ್ನೊಂದೆಡೆ ನಾನೇಕೆ ಮಾಡಬೇಕು ಎಂಬ ಅಸಡ್ಡೆ. ಸ್ವಾತಂತ್ರ್ಯ ಬಂದು, ನಮ್ಮ ಸಂವಿಧಾನವನ್ನು ನಾವೇ ರಚಿಸಿಕೊಂಡು ಇಷ್ಟು ವರ್ಷಗಳಾದರೂ ದೇಶ ಅಭಿವೃದ್ಧಿ ಹೊಂದದಿರುವುದಕ್ಕೆ ಇವೇ ಮುಖ್ಯ ಕಾರಣ ಎಂದರು.
ಡಾ. ಬಿ.ಆರ್.ಅಂಬೇಡ್ಕರ್‍ಅವರು ಸಂವಿಧಾನ ರಚನೆಯ ನೇತೃತ್ವ ವಹಿಸಿ ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದ್ದಾರೆ. ಬೇರೆ ಬೇರೆ ರಾಷ್ಟ್ರಗಳ ಸಂವಿಧಾನ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಧಿತಿಗತಿ ಪೂರಕವಾಗಿ ಸಂವಿಧಾನ ಅಂಶಗಳು ಹೊಂದಿದ್ದು, ಆ ಚೌಕಟ್ಟಿನಲ್ಲಿ ಎಲ್ಲರೂ ಸ್ವಾತಂತ್ರ್ಯ, ಶಿಕ್ಷಣ ಪಡೆದು ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.
ಸ್ವಾತಂತ್ರ್ಯ ಬಂದು ದೇಶ ಇಬ್ಭಾಗವಾದ ದಿನದಿಂದಲೂ ಯಾವುದೋ ಧಾರ್ಮಿಕ ಭಾವನೆಗಳು ದೇಶದಲ್ಲಿ ಮುಖ್ಯವಾಗಿವೆಯೇ ಹೊರತು ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ನಾವೆಲ್ಲ ಒಂದೇ ಎಂಬ ದೇಶಭಕ್ತಿ ಮೂಡಿಸುವುದು ನಮ್ಮಲ್ಲಿ ಸಾಧ್ಯವಾಗಿಲ್ಲ ಎಂಬುದು ವಿಷಾದಕರ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಹಾಗೂ ಸಾಮಾಜಿಕ ಸೌಲಭ್ಯಗಳು ದೊರೆತು ನಿಜಾರ್ಥದಲ್ಲಿ ಸಮಾನತೆ ನೆಲೆಗೊಳ್ಳುವವರೆಗೆ ಮೀಸಲಾತಿಯ ಪರಿಕಲ್ಪನೆ ಇರುವುದು ಅನಿವಾರ್ಯ. ಸಮಾಜದ ಬಡ ವರ್ಗಕ್ಕೂ ಶೇ.10 ಮೀಸಲಾತಿ ನೀಡುವ ಉಪಕ್ರಮ ಇದೇ ತಾತ್ವಿಕತೆಯ ನೆಲೆಗಟ್ಟನ್ನು ಹೊಂದಿದೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಚಂಬಿ ಪುರಾಣಿಕ್ ಮಾತನಾಡಿ, ಸಂವಿಧಾನ ನಮ್ಮ ದಿನನಿತ್ಯದ ಬದುಕಿನ ಪಂಚಾಂಗವಾಗಬೇಕು ಎಂದರು.ಸಂವಿಧಾನ ಜಾರಿಗೆ ಬಂದು 70 ವರ್ಷ ಪೂರೈಸಿದ್ದು, 104 ತಿದ್ದುಪಡಿಕಂಡಿದೆ. ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡುಬರುವಲ್ಲಿ ಅದರ ಪಾತ್ರ ಮಹತ್ತರವಾದದ್ದು ಎಂದರು.
ರಾಜಕೀಯಒಂದು ಪವಿತ್ರ ವೃತ್ತಿ. ವ್ಯಕ್ತಿಯ ಆಧಾರದ ಮೇಲೆ ರಾಜಕೀಯವನ್ನು ಕೀಳಾಗಿ ಕಾಣುವುದು ತಪ್ಪು. ಆದರೆ ಅಪರಾಧ ಹಿನ್ನೆಲೆಯಿರುವ ನೂರಾರು ಮಂದಿ ಇನ್ನೂ ಸಂಸತ್ತು, ವಿಧಾನಮಂಡಲಗಳಲ್ಲಿರುವುದರಿಂದ ಜನರು ಸಹಜವಾಗಿ ರಾಜಕೀಯದ ಬಗ್ಗೆ ಅನುಮಾನದಿಂದ ನೋಡುವಂತಾಗಿದೆ ಎಂದರು.
ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ಸಂವಿಧಾನದಿಂದ ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಗೂ ಸ್ವಾತಂತ್ರ್ಯ ಸಿಕ್ಕಿದೆ. ಸದೃಢ ಸಫಲತೆ ಕಾಣುವ ಸಂವಿಧಾನ ನಮ್ಮದು ಎಂದು ಹೇಳಿದರು.ನಮ್ಮ ಸಂವಿಧಾನ ಭಾವನಾತ್ಮಕ ಭೌಗೋಳಿಕ ಸಂವಿಧಾನವಾಗಿದೆ. ಅತ್ಯಂತ ಕಠಿಣಯೂ ಇಲ್ಲದೇ, ಅತ್ಯಂತ ಸಾಧಾರಣವಾಗಿಯೂ ಇಲ್ಲದೇ ಪ್ರಜಾಪ್ರಭುತ್ವವನ್ನು ಮುನ್ನಡೆಸುವ ಉತ್ತಮ ಅಂಶಗಳನ್ನು ಹೊಂದಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಕುಲಸಚಿವ ಕೆ.ಎನ್.ಗಂಗಾನಾಯಕ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ಜೆ. ಸುರೇಶ್ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಜಿ. ಬಸವರಾಜ ವಂದಿಸಿದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ಸಿಬಂತಿ ಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
