ಚಳ್ಳಕೆರೆ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವೇ ಕಂಡ ಅತ್ಯಂತ ಮೇಧಾವಿ ವ್ಯಕ್ತಿಯಾಗಿದ್ದು, ಅವರ ಪರಿಶ್ರಮದ ಫಲವಾಗಿ ಈ ರಾಷ್ಟ್ರದ ಸುವ್ಯವಸ್ಥಿತ ಆಡಳಿತಕ್ಕಾಗಿ ಸಂವಿಧಾನ ರೂಪಿತಗೊಂಡಿದೆ. ಎಲ್ಲಾ ಸಮುದಾಯಗಳಿಗೂ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಕಾರ್ಯನಿರ್ವಹಿಸಿದರು, ನಾವೆಲ್ಲರೂ ಅವರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಕೊಳ್ಳಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶುಕ್ರವಾರ ಮಧ್ಯಾಹ್ನ ಇಲ್ಲಿನ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ-ವರ್ಗಗಳ ನೌಕರರ ಒಕ್ಕೂಟ, ಜಿಲ್ಲಾ, ತಾಲ್ಲೂಕು ಹಾಗೂ ವಿವಿಧ ದಲಿತ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂಬೇಡ್ಕರ್ ಪರಿನಿಬ್ಬಾಣ, ಸಂವಿಧಾನ ಪುನರ್ಮನನ ದಿನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಪಾರವಾದ ಜ್ಞಾನ ಶಕ್ತಿಯನ್ನು ಹೊಂದಿದ್ದ ಅಂಬೇಡ್ಕರ್ರವರು ಭಗವಾನ್ ಬುದ್ದನ ಅನುಯಾಯಿಯಾಗಿ ಕೊನೆಹಂತದಲಿ ಬೌದ್ಧ ಧರ್ಮವನ್ನು ಸ್ವೀಕರಿಸಿ ತಮ್ಮ ಸೇವೆಯನ್ನು ಮುಂದುವರೆಸಿದರು. ಅಂಬೇಡ್ಕರ್ರವರ ದೂರದೃಷ್ಠಿಯ ಫಲವಾಗಿ ಇಂದು ಪರಿಶಿಷ್ಟ ಜಾತಿ-ವರ್ಗಗಳಲ್ಲದೆ ಹಿಂದುಳಿದ ಸಮುದಾಯಗಳೂ ಸಹ ಸಂವಿಧಾನ ಬದ್ದವಾದ ಅನೇಕ ಸೌಲಭ್ಯವನ್ನು ಪಡೆಯಲು ಸಾಧ್ಯವಾಗಿದೆ.
ಎಲ್ಲರಿಗೂ ನ್ಯಾಯ, ಎಲ್ಲರಿಗೂ ಸಮಬಾಳು ಎಂಬ ತತ್ವ ಆದರ್ಶವನ್ನು ಮೈಗೂಡಿಸಿಕೊಂಡು ಯಾವುದೇ ಹಂತದಲ್ಲೂ ತಮ್ಮ ಸಿದ್ದಾಂತಕ್ಕೆ ಲೋಪ ಉಂಟಾಗದಂತೆ ರಾಷ್ಟ್ರದ ಜನರ ಒಳತಿಗಾಗಿ ಹಗಲಿರುಳು ಶ್ರಮಿಸಿದವರು ಡಾ.ಬಿ.ಆರ್.ಅಂಬೇಡ್ಕರ್. ಇಂದು ರಾಜಕೀಯ ಸ್ಥಾನಮಾನಗಳು ಸೇರಿದಂತೆ ರಾಜಕೀಯ ಪಕ್ಷಗಳ ದುರೀಣರೂ ಹಾಗೂ ಸಮಸ್ತ ಜನರು ಯಾವುದೇ ಅಧಿಕಾರಿ, ಸ್ಥಾನವನ್ನು ಪಡೆಯಲು ಅಂಬೇಡ್ಕರ್ರವರ ಸಂವಿಧಾನವೇ ಎಲ್ಲರಿಗೂ ಮೂಲಕಾರಣ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಸಂವಿಧಾನವನ್ನು ಗೌರವಿಸುವ ಜೊತೆಗೆ ಎಲ್ಲರಲ್ಲೂ ವಿಶ್ವಾಸ ಹುಟ್ಟಿಸಿ ಉತ್ತಮ ಜೀವನ ನಡೆಸುವತ್ತ ಮುನ್ನಡೆಯೋಣವೆಂದರು.
ದಲಿತ ಸಂಘಟನೆಗಳ ಹಿರಿಯ ನಾಯಕ, ನಿವೃತ್ತ ಜಂಟಿ ನಿರ್ದೇಶಕ ಸಿ.ಕೆ.ಮಹೇಶ್ ಮಾತನಾಡಿ, ಅಂಬೇಡ್ಕರ್ರವರ ಸಂವಿಧಾನ ರೀತ್ಯ ಸಮಾಜದ ಎಲ್ಲಾ ವರ್ಗಗಳ ತಮ್ಮದೇಯಾದ ಮೀಸಲಾತಿಯನ್ನು ಪಡೆಯುವಲ್ಲಿ ಶಕ್ತವಾಗಿವೆ. ಆದರೆ, ಕೆಲವು ಮುಂದುವರೆದ ಜಾತಿಗಳು ಇನ್ನೂ ಹೆಚ್ಚಿನ ಮೀಸಲಾತಿಯನ್ನು ಬಯಸುವ ಮೂಲಕ ಶೋಷಿತ ಸಮುದಾಯದ ಹಕ್ಕನ್ನು ಮೊಟಕುಗೊಳಿಸಲು ಯತ್ನಿಸುತ್ತಿದ್ದಾರೆ. ರಾಷ್ಟ್ರದ ಆಡಳಿತಕ್ಕೆ ನಮ್ಮ ಸಂವಿಧಾನವೇ ಪ್ರೇರಣೆಯಾಗಿದ್ದು, ಕೆಲವು ಶಕ್ತಿಗಳು ಸಂವಿಧಾನವನ್ನು ಬದಲಾಯಿಸುವ ಕುರಿತು ಮಾತನಾಡುತ್ತಿದ್ದು, ಇದು ಬಹಳ ಅಪಾಯಕಾರಿ ಎಂದರು.
ಸಮಾಜದಲ್ಲಿ ಯಾವ ವ್ಯಕ್ತಿ ಯಾವುದೇ ರೀತಿಯ ಸಂವಿಧಾನ ಬದ್ದ ಹಕ್ಕನ್ನು ಪಡೆಯಲು ಸಾಧ್ಯವಾಗುವುದಿಲ್ಲವೋ ಅವನು ವಂಚಿತನಾಗುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನದ ರೂಪರೇಷಗಳ ಬಗ್ಗೆ ಮನನ ಮಾಡಿಕೊಳ್ಳಬೇಕಿದೆ. ಸಮಾಜದ ಬುದ್ದಿವಂತ ವರ್ಗ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಲ್ಲಿ ಮುಂದೆ ಬರಬೇಕೆಂದರು.
ರಾಜ್ಯ ಮಾತಂಗ ಪರಿವಾರ ಸಮಿತಿ ಸದಸ್ಯ ಪ್ರೊ.ಕೆಂಚಪ್ಪ ಮಾತನಾಡಿ, ಬದುಕಿನ ಅನೇಕ ಸಮಸ್ಯೆಗಳನ್ನು ಎದುರಿಸಿ ಸಮಾಜದ ಸರ್ವರಿಗೂ ನ್ಯಾಯವನ್ನು ದೊರಕಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿದವರು ಡಾ.ಬಿ.ಆರ್.ಅಂಬೇಡ್ಕರ್. ಮನುಷತ್ವವನ್ನೇ ಮರೆತು ಶೋಷಣೆಯನ್ನೇ ಪ್ರಧಾನವಾಗಿಟ್ಟುಕೊಂಡು ಶೋಷಿತ ಸಮುದಾಯವನ್ನು ವಂಚಿಸುತ್ತಿದ್ದ ಶಕ್ತಿಗಳಿಗೆ ಸಂವಿಧಾನದ ಮೂಲಕವೇ ಎದುರೇಟು ಕೊಟ್ಟ ಮಹಾನ್ ಚಿಂತನೆ ಡಾ.ಬಿ.ಆರ್.ಅಂಬೇಡ್ಕರ್. ಅಂಬೇಡ್ಕರ್ರವರು ಶೋಷಿತ ವರ್ಗದ ಬಗ್ಗೆ ಕಾರ್ಯನಿರ್ವಹಿಸದೆ ತಟಸ್ಥವಾಗಿದ್ದಲ್ಲಿ ರಾಷ್ಟ್ರದ ಶೋಷಿತ ಸಮುದಾಯ ಇನ್ನಷ್ಟು ಸಂಕಷ್ಟಗಳನ್ನು ಎದುರಿಸಿಬೇಕಿತ್ತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಮಲ್ಲಿಕಾರ್ಜುನ ಮಾತನಾಡಿ, ರಾಷ್ಟ್ರದಲ್ಲಿ ರಾಜಕೀಯ ಹಾಗೂ ಸರ್ಕಾರಕ್ಕೆ ಶಕ್ತಿಯನ್ನು ತುಂಬಿರುವುದೇ ಸಂವಿಧಾನ. ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರಮೊದಿ ಹಿಂದುಳಿದ ಸಮುದಾಯಕ್ಕೆ ಸೇರಿದ್ದು, ತಾವು ಇಂದು ಪ್ರಧಾನಿಯಾಗಿ ಕಾರ್ಯನಿರ್ವಹಿಸಲು ಅಂಬೇಡ್ಕರ್ ಸಂವಿಧಾನವೇ ಮೂಲ ಕಾರಣ ಎಂದರು.
ಕಾರ್ಯಕ್ರಮ ಉದ್ದೇಶಿಸಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಮರ್ಥರಾಯ, ಪ್ರೊ.ಕಾಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್ಮೂರ್ತಿ, ಮಾಜಿ ಅಧ್ಯಕ್ಷ ರವಿಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆಂಜನೇಯ, ಸದಸ್ಯರಾದ ಜಿ.ವೀರೇಶ್, ರಂಜಿತ, ತಿಪ್ಪಕ್ಕ, ನಗರಸಭಾ ಸದಸ್ಯರಾದ ರಮೇಶ್ಗೌಡ, ಜೈತುಂಬಿ, ಸುಮಾ, ಸುಜಾತ, ಕೆ.ವೀರಭದ್ರಪ್ಪ, ವಿರೂಪಾಕ್ಷಿ, ಚಳ್ಳಕೆರೆಯಪ್ಪ, ಮಾಜಿ ಉಪಾಧ್ಯಕ್ಷ ಟಿ.ವಿಜಯಕುಮಾರ್, ದಲಿತ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
