ಚಿತ್ರದುರ್ಗ:
ದೇಶದ ಪರಮೋಚ್ಚ ಗ್ರಂಥ ಸಂವಿಧಾನವನ್ನು ಸುಡುವವರು ಧರ್ಮದ ಅಫೀಮನ್ನು ಜನರಿಗೆ ತಿನ್ನಿಸಿ ದೇಶ ಆಳುವುದು ಬೇಡ ಎಂದು ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ ಹೇಳಿದರು.
ಅ.2 ರಂದು ಗುಜರಾತ್‍ನ ಡಾಂಡಿಯಿಂದ ಹೊರಟು ಡಿ.10 ಕ್ಕೆ ದೆಹಲಿ ತಲುಪಲಿರುವ ಸಂವಿಧಾನ ಸಮಾನ ಯಾತ್ರಾ ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ಎ.ಪಿ.ಎಂ.ಸಿ.ಯಲ್ಲಿರುವ ರೈತ ಭವನದಲ್ಲಿ ಸ್ವಾಗತಿಸಿ ಮಾತನಾಡಿದರು.
ಸಂವಿಧಾನವೆಂದರೆ ದೇಶದ ಆತ್ಮವಿದ್ದಂತೆ. ನಿಜವಾದ ಅಭಿವೃದ್ದಿ ಎನ್ನುವುದಾದರೆ ಭೌತಿಕ ಅಭಿವೃದ್ದಿಯಲ್ಲ. ದೇಶದ ಪ್ರತಿಯೊಬ್ಬ ಕಟ್ಟ ಕಡೆಯ ಬಡವನು ಆತ್ಮಗೌರವದಿಂದ ಬದುಕಿದಾಗ ಮಾತ್ರ ಸಂವಿಧಾನಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದರು
ಸಂವಿಧಾನದ ಮೂಲ ಆಶಯಗಳಿಗೆ ಎಳ್ಳು ನೀರು ಬಿಡುವ ಕೆಲಸವಾಗುತ್ತಿದೆ. ಯಾವುದೆ ರಾಜಕೀಯ ಪಕ್ಷಗಳಾಗಲಿ ಸಂವಿಧಾನದಡಿ ರಾಜಕೀಯ ಮಾಡಬೇಕೆ ವಿನಃ ಕೋಮುವಾದವನ್ನು ಬಿತ್ತಿ ಧರ್ಮದ ಹೆಸರಿನಲಿಜಾತಿಯ ವಿಷಬೀಜ ಬಿತ್ತಬಾರದು. ಸಾಮಾಜಿಕ ನ್ಯಾಯ, ಬಡವರ ಪರ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ. ಕಲ್ಬುರ್ಗಿ, ಗೌರಿ ಲಂಕೇಶ್‍ರನ್ನು ಕೊಂದಿರಬಹುದು. ವಿಚಾರಗಳನ್ನು ಕೊಲ್ಲಲು ಆಗುವುದಿಲ್ಲ. ದೇಶದಲ್ಲಿ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಯಾರಿಗೂ ರಕ್ಷಣೆ ಇಲ್ಲದಂತಾಗಿದೆ.
ದೇವರ ಎದುರು ಲಿಂಗತಾರತಮ್ಯವಿರಬಾರದು ಎಲ್ಲರೂ ಸಮಾನರೆ ಎನ್ನುವ ಕಾರಣಕ್ಕೆ ಸುಪ್ರಿಂಕೋರ್ಟ್ ಶಬರಿಮಲೈಗೆ ಮಹಿಳೆಯರಿಗೆ ಪ್ರವೇಶ ನೀಡಿದರೆ ಅಲ್ಲಿನ ಭಕ್ತರು ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಅಡ್ಡಿಪಡಿಸುವ ಮೂಲಕ ಹಿಂಸೆಯಲ್ಲಿ ತೊಡಗಿದ್ದಾರೆ. ಜಾತಿವಾದಿಗಳಿಗೆ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕೆಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದರು.
ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವವರು ಸೈದ್ದಾಂತಿಕವಾಗಿ ಸಂಘರ್ಷ ಮಾಡಲಿ. ದೇಶಕ್ಕೆ ಅನ್ನ ನೀಡುವ ರೈತನ ಸಮಸ್ಯೆಗಳ ಪರವಾಗಿರಲಿ. ಎಲ್ಲಾ ಬಿಟ್ಟು ಶಾಂತಿಯನ್ನು ಕದಡುವುದಾದರೆ ಅಂತಿಮವಾಗಿ ಅವರ ತಾರ್ಕಿಕ ಅಂಶಗಳೇನು ಎಂದು ಇಡೀ ದೇಶದ ಜನರೆ ಪ್ರಶ್ನೆ ಮಾಡುವಂತಾಗಬೇಕು ಎನ್ನುವುದು ಈ ಯಾತ್ರೆಯ ಉದ್ದೇಶ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ ಮಾತನಾಡಿ ಗುಜರಾತ್‍ನ ದಾಂಡಿಯಿಂದ ಅ.2 ರಂದು ಹೊರಟಿರುವ ಸಂವಿಧಾನ ಸಮಾನ ಯಾತ್ರಾ 65 ದಿನ 26 ರಾಜ್ಯಗಳಲ್ಲಿ ತಿರುಗಾಡಿ ಸಂವಿಧಾನ ಉಳಿಸಲು ಹೊರಟಿರುವುದು ನಿಜವಾಗಿಯೂ ಮೆಚ್ಚುವಂತದ್ದು, ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿದರೆ ರೈತನ ಬದುಕು ಸುಧಾರಣೆಯಾಗುತ್ತದೆ ಎಂದರು.
ಕೋಲಾರದ ನಳಿನಿ ಉತ್ತರಪ್ರದೇಶದ ರೀಚಾಸಿಂಗ್, ಯೋಗಿರಾಜ್, ಭೂಪಿಂದರ್‍ರಾವತ್, ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ವೇದಿಕೆಯಲ್ಲಿದ್ದರು.ಪುಷ್ಪ, ಚಂದ್ರಶೇಖರ್, ಸುಮ, ಲಕ್ಷ್ಮಣ್ ಸೇರಿದಂತೆ ತಮಿಳುನಾಡು, ಆಂಧ್ರ, ಮಹಾರಾಷ್ಟ್ರದವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
