ಚಿತ್ರದುರ್ಗ;
ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದಲ್ಲಿ ಆಯೋಜಿಸಲಾಗಿದ್ದ ಶ್ರೀ ರಾಘವೇಂದ್ರ ಸ್ವಾಮೀಜಿಯವರ 23ನೇ ಮತ್ತು ಶ್ರೀ ಸೂರುದಾಸ್‍ಜಿ ಸ್ವಾಮೀಜಿಯವರ 21ನೇ ಪುಣ್ಯಾರಾಧನೆ ಹಾಗೂ ತಿರುಕನೂರಿನಲ್ಲಿ ರಂಗದಾಸೋಹ ಕಾರ್ಯಕ್ರಮದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರಿಗೆ ಮೊದಲನೆ ತಿರುಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯು 55 ಸಾವಿರ ರೂ. ನಗದು ಹಾಗು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು, ನ್ಯಾಯಮೂರ್ತಿ ಶ್ರೀ ಬಿಲ್ಲಪ್ಪ, ಆಶ್ರಮದ ವಿಶ್ವಸ್ಥ ಸಮಿತಿ ಸದಸ್ಯರಾದ ರಾಧಾಕೃಷ್ಣ, ತಿಮ್ಮರಾಜು, ಡಾ. ಈ. ಚಿತ್ರಶೇಖರ್, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ. ಕೃಷ್ಣಮೂರ್ತಿ ಇದ್ದರು.
ಸಂತೋಷ್ ಹೆಗಡೆ ಪರಿಚಯ
ನ್ಯಾಯಮೂರ್ತಿ ನಿಟ್ಟೆ ಸಂತೋಷ ಹೆಗಡೆ ಎಂದರೆ ಭಾರತೀಯ ನ್ಯಾಯಾಂಗ ಇತಿಹಾಸದಲ್ಲೊಂದು ಸ್ಮರಣೀಯ ಮೈಲಿಗಲ್ಲು. ಪ್ರಾಮಾಣಿಕತೆ, ವೃತ್ತಿಬದ್ಧತೆ, ಸಾಮಾಜಿಕ ಹೊಣೆಗಾರಿಕೆ, ನೈತಿಕ ನಡೆ ಮತ್ತು ಆರೋಗ್ಯ-ಆಯುಷ್ಯ ವೃದ್ಧಿ ವಿಧಾನ ಅನುಷ್ಠಾನ ಮಾದರಿಗೆ ಮತ್ತೊಂದು ಹೆಸರು. ಈ ಸದ್ಗುಣಗಳಿಂದ ಅಲಂಕೃತವಾದ ವ್ಯಕ್ತಿಯಲ್ಲಿ ಅಭಿವ್ಯಕ್ತಗೊಳ್ಳುವ ಧೈರ್ಯ, ಆತ್ಮವಿಶ್ವಾಸ ಮತ್ತು ಕ್ಲಿಷ್ಟ ಸಂದರ್ಭದಲ್ಲೂ ಅಸತ್ಯ, ಅಧರ್ಮ, ಅಮಾನವೀಯತೆಗಳೊಂದಿಗೆ ಯಾವತ್ತೂ ರಾಜಿಯಾಗದ ಅವರ ದೃಢ ನಿಲುವು ಅಬಾಲವೃದ್ಧರಾದಿಯಾಗಿ ಅನುಪಾಲಿಸಬೇಕಾದ ಆದರ್ಶಕ್ಕೆ ಮಾದರಿ.
ಜೂನ್ 16, 1940 ರಲ್ಲಿ ಉಡುಪಿ ಜಿಲ್ಲೆಯಲ್ಲಿ ಜನಿಸಿದ ಇವರು ಮಂಗಳೂರಿನ ಸೆಂಟ್ ಅಲೋಷಿಸಿಯಸ್ ಕಾಲೇಜು, ಚೆನ್ನೈನ ಕ್ರಿಶ್ಚಿಯನ್ ಕಾಲೇಜು, ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಅಧ್ಯಯನ ಮಾಡಿ, 1966ರಲ್ಲಿ ವಕೀಲಿ ವೃತ್ತಿ ಆರಂಭಿಸಿ, ನ್ಯಾಯಾಂಗ ವ್ಯವಸ್ಥೆಯ ಉನ್ನತ ಹುದ್ದೆಗಳಾದ ಅಡ್ವೋಕೇಟ್ ಜನರಲ್, ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ವೃತ್ತಿ ನಿರ್ವಹಣೆಯ ಮೂಲಕ, ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿ, ನಿವೃತ್ತಿಯ ನಂತರವೂ ಅದೇ ಘನತೆ, ಗೌರವ ಮತ್ತು ಅಭಿಮಾನದ ಅನಭಿಷಕ್ತ ಜನಮುಖಿ ನ್ಯಾಯಾಧೀಶರಾಗಿ ಹೋರಾಡುತ್ತಿರುವುದು ಈ ನಾಡಿನ ಮತ್ತು ರಾಷ್ಟ್ರದ ಹೆಮ್ಮೆಯಾಗಿದೆ. ಅದರಲ್ಲೂ ಕರ್ನಾಟಕ ಲೋಕಾಯುಕ್ತರಾಗಿ ಸಲ್ಲಿಸಿದ ಸೇವೆ ಅದ್ವಿತೀಯ.
ಇವರ ಸೇವೆಯನ್ನು ಗುರುತಿಸಿ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ಕರ್ತೃ, ಯೋಗ ಗುರು, ಪಾಂಡಿತ್ಯಪೂರ್ಣ ಆಯುರ್ವೇದ ವೈದ್ಯ, `ತಿರುಕ’ನೆಂಬ ಕಾವ್ಯನಾಮದಲ್ಲಿ ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ ಸಾಹಿತಿ, ಸಮಾಜ ಸೇವಕ, ಶ್ರೀ ರಾಘವೇಂದ್ರ ಸ್ವಾಮೀಜಿಯವರ ಹೆಸರಿನಲ್ಲಿ ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ ಸ್ಥಾಪಿಸಿರುವ ತನ್ನ ಮೊದಲ, `ತಿರುಕ ಶ್ರೀ’, ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
